ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ ಜಿಲ್ಲೆಯು ದಲಿತ ಸಾಹಿತ್ಯ ಹಾಗೂ ದಲಿತ ಚಳುವಳಿಗಳ ತವರೂರಾಗಿದ್ದು, ಇಲ್ಲಿ ಮೊದಲ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ
ಕೋಲಾರ : ಕೋಲಾರ ಜಿಲ್ಲೆಯು ದಲಿತ ಸಾಹಿತ್ಯ ಹಾಗೂ ದಲಿತ ಚಳುವಳಿಗಳ ತವರೂರಾಗಿದ್ದು, ಇಲ್ಲಿ ಮೊದಲ ರಾಜ್ಯ ಮಟ್ಟದ ದಲಿತ ಸಾಹಿತ್ಯ ಸಮ್ಮೇಳನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್. ಮುನಿಸ್ವಾಮಿ ಅವರು ತಿಳಿಸಿದರು.
ಇಂದು ರಾಜ್ಯ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ, ರಾಜ್ಯ ಮಟ್ಟದ ಮೊದಲ ದಲಿತ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಲಿತ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಸಂತೋಷದಿಂದ ಉದ್ಘಾಟಿಸುತ್ತಿದ್ದೇನೆ. ಇಲ್ಲಿನ ಸಾಹಿತಿಗಳು ದಲಿತರ ಬವಣೆ, ಕೂಲಿ ಕಾರ್ಮಿಕರು, ಶೋಷಿತರ ಕಷ್ಟಗಳನ್ನು ಹಾಡುಗಳಲ್ಲಿ ಕಟ್ಟಿ ಸರ್ಕಾರಗಳ ಕಣ್ಣು ತೆರೆಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕೋಲಾರ ಜನತೆ ರಚಿಸದ ಸಾಹಿತ್ಯದ ಪ್ರಕಾರವಿಲ್ಲ ಎಂದರು.
ಕೋಲಾರ ಜಿಲ್ಲೆಯು ಹಿಂದೆ ವಿಶ್ವಕ್ಕೆ ಬಂಗಾರ ನೀಡುತ್ತಿತ್ತು. ಆದರೆ ಇಂದು ಬರಕ್ಕೆ ತುತ್ತಾಗಿದೆ. ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಹಾಗೂ ಅಭಿವೃದ್ಧಿ ಕೆಲಸಗಳನ್ನು ಮಾಡಲು ಬದ್ಧನಾಗಿದ್ದೇನೆ. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 1800 ರಿಂದ 2000 ಅಡಿಗಳಿಗೆ ಕುಸಿದಿದೆ. ಆದ್ದರಿಂದ ಜಿಲ್ಲೆಗೆ ಶಾಶ್ವತ ನೀರಾವರಿ ಕಲ್ಪಿಸಲು ನದಿಗಳ ಜೋಡಣೆ ಮಾಡುವುದು ಶಾಶ್ವತ ಪರಿಹಾರ. ಇಲ್ಲಿ ನೀರಿಲ್ಲದೆ ಕೃಷಿ ಮಾಡಲು ಆಗದೆ ಪ್ರತಿನಿತ್ಯ 30 ರಿಂದ 40ಸಾವಿರ ಜನ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಹೋಗಿ ಬರುತ್ತಾರೆ. ಇದನ್ನು ತಪ್ಪಿಸಲು ಜಿಲ್ಲೆಯಲ್ಲಿಯೇ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದರು.
ಸಾಹಿತಿಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಿ.ವಿ ಗುಂಡಪ್ಪ, ಡಾ. ಬೈರಪ್ಪ,
ವಿ. ಮುನಿವೆಂಕಟಪ್ಪ, ನಾರಾಯಣಪ್ಪ, ಲಕ್ಷ್ಮೀಪತಿ ಕೋಲಾರ, ಕೋಟಿಗಾನಹಳ್ಳಿ ರಾಮಯ್ಯ ಮುಂತಾದವರು ಕೋಲಾರದ ಸಾಹಿತ್ಯವನ್ನು ಬೆಳೆಸಿದ್ದಾರೆ. ಇಂದಿನ ಸಾಹಿತಿಗಳು ಕೋಲಾರದ ಇತಿಹಾಸವನ್ನು ಸಾಹಿತ್ಯದ ಮೂಲಕ ಜಗತ್ತಿಗೆ ಸಾರಬೇಕಿದೆ ಎಂದು ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಮನು ಬಳಿಗಾರ್ ಅವರು ಮಾತನಾಡಿ, ಒಂದು ವರ್ಷದ ಹಿಂದೆಯೇ ದಲಿತ ಸಾಹಿತ್ಯ ಸಮ್ಮೇಳನವನ್ನು ಕೋಲಾರದಲ್ಲಿ ಆಚರಿಸಲು ತೀರ್ಮಾನಿಸಲಾಯಿತು. 105 ವರ್ಷಗಳ ಇತಿಹಾಸವನ್ನು ಕನ್ನಡ ಸಾಹಿತ್ಯ ಪರಿಷತ್ ಹೊಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಮೀಸಲಾತಿ ಸಂಖ್ಯೆಯನ್ನು ಹೆಚ್ಚಿಸಿದ್ದು, ಪ್ರತಿ ಸಮಿತಿಯಲ್ಲಿ ಕನಿಷ್ಟ ಇಬ್ಬರು ಮಹಿಳಾ ಸದಸ್ಯರು, ಇಬ್ಬರು ಪರಿಶಿಷ್ಟ ಜಾತಿ ಮತ್ತು ಒಬ್ಬರು ಪರಿಶಿಷ್ಟ ಪಂಗಡದ ಸದಸ್ಯರು ಇರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ 5 ರಾಜ್ಯಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ಸಾಹಿತ್ಯ ಪರಿಷತ್ 3 ಲಕ್ಷ 77 ಸಾವಿರ ಅಜೀವ ಸದಸ್ಯರನ್ನು ಹೊಂದಿರುವ ದೊಡ್ಡ ಸಂಸ್ಥೆಯಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರಾದ ಡಾ. ಎಲ್. ಹನುಮಂತಯ್ಯ ಅವರು ಮಾತನಾಡಿ, ಕೋಲಾರವು ಹಲವು ದಲಿತ ಸಾಹಿತಿಗಳಿಗೆ ಹಾಗೂ ದಲಿತ ಚಳುವಳಿಗಾರರಿಗೆ ಜನ್ಮ ನೀಡಿದೆ. 80 ರ ದಶಕದಲ್ಲಿ ಕೋಲಾರದಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅಂದು ನಾನು ವೇದಿಕೆಯನ್ನು ನನ್ನ ಸಾಹಿತ್ಯವನ್ನು ಅನಾವರಣ ಮಾಡಿದ್ದೆ. ಇಂದು ನಾನು ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವುದು ಸಂತಸ ತಂದಿದೆ ಎಂದರು.
ಕರ್ನಾಟಕವು ಇತ್ತೀಚೆಗೆ ಪ್ರವಾಹಕ್ಕೆ ತುತ್ತಾಗಿದ್ದು, ಮಹಾರಾಷ್ಟ್ರದಲ್ಲಿ ಸುರಿದ ಬಾರಿ ಮಳೆಯಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ನೆರೆಗೆ ತುತ್ತಾಗಿವೆÉ. ಹಲವರ ಪ್ರಾಣ ಹಾಗೂ ಜಾನುವಾರುಗಳು ಬಲಿಯಾಗಿವೆ. ಕೇಂದ್ರವು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂರು ಕಳೆದುಕೊಂಡವರಿಗೆ ಆದಷ್ಟು ಬೇಗ ಸೂರು ಕಲ್ಪಿಸಿ ಸಂತ್ರಸ್ತರು ನೆಲೆ ನಿಲ್ಲುವಂತೆ ಮಾಡಬೇಕು ಎಂದರು.
ದಲಿತರಲ್ಲಿ ಬಹುಸಂಖ್ಯಾತರು ಶಿಕ್ಷಿತರಾಗಿದ್ದಾರೆ. ಶಿಕ್ಷಣ ಪಡೆದ ದಲಿತರು ಅಮಾಯಕ ದಲಿತರ ನೆರವಿಗೆ ಬರುತ್ತಾರೆಂದು ಅಂಬೇಡ್ಕರ್ ಬಯಸಿದ್ದರು. ಆದರೆ ಇಂದು ಹಾಗೆ ಆಗುತ್ತಿಲ್ಲ. ಸಮೃದ್ಧ ಕರ್ನಾಟಕದ ಮೂಲಕ ಸಮಗ್ರ ಭಾರತವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಗುರಿಯಾಗಬೇಕು. ಕುವೆಂಪುರವರು, ಕಾರಂತರು, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮುಂತಾದವರು ತಮ್ಮ ಸಾಹಿತ್ಯದ ಮೂಲಕ ದಲಿತ ಬದುಕಿನ ಭವಣೆಗಳನ್ನು ಅನಾವರಣೆಗೊಳಿಸಿದರು. ದಲಿತ ಸಾಹಿತ್ಯವು ದಲಿತರ ಹಕ್ಕು ಸ್ವಾತಂತ್ರ್ಯ ಹಾಗೂ ಅವಶ್ಯಕತೆಗಳನ್ನು ಪೂರೈಸುವ ಚಳುವಳಿಯಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನೆರೆಗೆ ತುತ್ತಾಗಿ ಪ್ರಾಣ ತ್ಯಾಗ ಮಾಡಿರುವ ಹುತಾತ್ಮನಿಗೆ 1 ನಿಮಿಷ ಮೌನಾಚರಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು. ದಲಿತ ಸಾಹಿತ್ಯದ 5 ಸಂಪುಟಗಳ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮಕ್ಕೂ ಮುಂಚೆ ಧ್ವಜಾರೋಹಣ ಮಾಡಲಾಯಿತು. ರಾಷ್ಟ್ರಧ್ವಜವನ್ನು ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಪರಿಷತ್ತಿನ ಧ್ವಜವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ನಾಡೋಜ ಡಾ|| ಮನು ಬಳಿಗಾರ್ ಹಾಗೂ ನಾಡಧ್ವಜವನ್ನು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಗಾನಂದ ಕೆಂಪರಾಜ್ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ಸಿದ್ದಲಿಂಗಯ್ಯ, ಪ್ರೊ. ಕೆ.ಪಿ. ಸಿದ್ದಯ್ಯ, ರಾಜಶೇಖರ ಹತಗುಂದಿ, ಡಾ. ಚಿನ್ನೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಡಾ. ಕೆ. ಜಾನಕಿ ಸೇರಿದಂತೆ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.