ಕೋಲಾರ, ಜಿಲ್ಲೆಯಲ್ಲಿನ ಅವೈಜ್ಞಾನಿಕ ರೈಲ್ವೇ ಅಂಡರ್‍ಪಾಸ್‍ಗಳಿಂದಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ:ರೈತಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಜಿಲ್ಲೆಯಲ್ಲಿನ ಅವೈಜ್ಞಾನಿಕ ರೈಲ್ವೇ ಅಂಡರ್‍ಪಾಸ್‍ಗಳಿಂದಾಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಕೇರಳ ಮಾದರಿಯಲ್ಲಿ ರೈತರ ತರಕಾರಿಗಳಿಗೆ ಬೆಲೆ ನಿಗಧಿಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ ನ.5ರ ಗುರುವಾರದಂದು ನಗರದ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲೆಯ ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ ತಾಲೂಕುಗಳಲ್ಲಿ ಸಾಕಷ್ಟು ಕಡೆ ನಿರ್ಮಿಸಲಾಗಿರುವ ರೈಲ್ವೇ ಅಂಡರ್ ಪಾಸ್‍ಗಳು ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಜನರ ಜೀವನಕ್ಕೆ ಸಾಕಷ್ಟು ತೊಂದರೆಯುಂಟು ಮಾಡುತ್ತಿವೆ.
ಮಳೆ ಬಂದರೆ ಕುಂಟೆಗಳಾಗಿ ಮಾರ್ಪಡುತ್ತಿದ್ದು, ರಸ್ತೆಗಳ ಸಂಪರ್ಕ ಕಡಿತಗೊಳಿಸಿ ಸಾರ್ವಜನಿಕರು ಹತ್ತಾರು ಕಿಮೀ ಸುತ್ತಿಕೊಂಡು ಓಡಾಡುವ ಪರಿಸ್ಥಿತಿ ಉಂಟು ಮಾಡಿವೆ. ಇಷ್ಟಾದರೂ ಒಬ್ಬ ಅಧಿಕಾರಿಯೂ ಈವರೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕವಾಗಿ ಬೆಲೆ ನಿಗಧಿಪಡಿಸುವಂತೆ ಅನೇಕ ಬಾರಿ ಹೋರಾಟಗಳನ್ನು ಮಾಡಿ ಸರ್ಕಾರಗಳ ಗಮನಕ್ಕೆ ತರಲಾಗಿದ್ದರೂ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
ದೇಶದ ಎಲ್ಲ ರಾಜ್ಯಗಳ ಪೈಕಿ ಕೇರಳ ರಾಜ್ಯದಲ್ಲಿ ರೈತರ ಬೆಳೆಗಳಿಗೆ ಬೆಲೆಗಳನ್ನು ನಿಗಧಿ ಮಾಡಿರುವಂತೆಯೇ ರಾಜ್ಯದಲ್ಲಿಯೂ ರೈತರ ಬೆಳೆಗಳಿಗೆ ಬೆಲೆಗಳನ್ನು ನಿಗಧಿಪಡಿಸಲು ರಾಜ್ಯ ಸರ್ಕಾರವು ಮುಂದಾಗಬೇಕು. ಮತ್ತು ರೈಲ್ವೇ ಅಂಡರ್‍ಪಾಸ್‍ಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಈ ಕೂಡಲೇ ಮುಂದಾಗಬೇಕೆಂದು ಆಗ್ರಹಿಸಿ ನ.5ರಂದು ರೈಲ್ವೇ ನಿಲ್ದಾಣಕ್ಕೆ ತರಕಾರಿ, ಜಾನುವಾರುಗಳೊಂದಿಗೆ ಮುತ್ತಿಗೆ ಹಾಕುತ್ತಿರುವುದಾಗಿ ತಿಳಿಸಿದರು.
ಸಭೆಯಲ್ಲಿ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಸಹದೇವಣ್ಣ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವರಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.