ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭೆ ರಾಜ್ಯ ಪರಿಷತ್ ಸದಸ್ಯ ಸುರೇಶ್‍ಬಾಬು ಅಮಾನತ್ತಿಗೆ ಒತ್ತಾಯ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭೆ ರಾಜ್ಯ ಪರಿಷತ್ ಸದಸ್ಯ ಸುರೇಶ್‍ಬಾಬು ಅಮಾನತ್ತಿಗೆ ಒತ್ತಾಯ

ಕೋಲಾರ ಡಿ.12 : ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸುರೇಶ್‍ಬಾಬು ರವರನ್ನು ಸಂಘ ವಿರೋಧ ಚಟುವಟಿಕೆ ಹಿನ್ನಲೆಯಲ್ಲಿ ತಕ್ಷಣ ಜಾರಿಬಂದಂತೆ ಸಂಘದ ಸ್ಥಾನಮಾನದಿಂದ ಅಮಾನತ್ತು ಪಡಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯು ರಾಜ್ಯಾಧ್ಯಕ್ಷರನ್ನು ಒತ್ತಾಯಿಸಿದೆ.
ಇಂದು ಸಂಜೆ ಸರ್ಕಾರಿ ನೌಕರರ ಭವನದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಂಡ ಸಮಿತಿಯ ಸರ್ವೇ ಇಲಾಖೆಯಿಂದ ಚುನಾಯಿತರಾದ ಸುರೇಶ್‍ಬಾಬು ರವರು ರಾಜ್ಯ ಪರಿಷತ್ ಸದಸ್ಯರಾಗಿದ್ದು, ಈವರೆವಿಗೂ ನೌಕರರ ಭವನದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸದೆ ಸ್ವತಃ ಇವರೇ ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಡ್‍ಹಾಕ್ ಸಮಿತಿ ರಚಿಸಿ ಅಧ್ಯಕ್ಷರಾಗುವ ಮೂಲಕ ಜಿಲ್ಲೆಯ ನೌಕರರನ್ನು ದಿಕ್ಕು ತಪ್ಪಿಸುತ್ತಿರುವುದು ಸರಿಯಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು.
ನೌಕರರ ಸಂಘದ ಚುನಾವಣೆ ನಂತರ ನೌಕರರ ಭವನದ ಕಡೆ ಸುಳಿಯದ ಇವರು ಇತ್ತೀಚೆಗೆ ಸಂಘವು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಿದಾಗ ಮತ್ತೊಂದು ಪ್ರತ್ಯೇಕ ನಿಯೋಗದೊಂದಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಸನ್ಮಾನಿಸಿ ಸಂಘವನ್ನು ಇಬ್ಬಾಗ ಮಾಡ ಹೊರಟಿರುವುದು ಸಭೆಯ ಗಮನಕ್ಕೆ ಬಂದಿತು.
ತಾವು ಒಬ್ಬ ರಾಜ್ಯ ಪರಿಷತ್ ಸದಸ್ಯರು ಎಂಬುದನ್ನು ಮರೆತು ತಾವೇ ನಾಯಕತ್ವ ವಹಿಸಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸಂಘಟಿಸಿ ಅವರಲ್ಲಿ ಸಂಘದ ವಿರುದ್ಧ ಮಾಹಿತಿ ನೀಡಿ, ಸಂಘದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಡ್‍ಹಾಕ್ ಸಮಿತಿ ರಚಿಸಿ ತಾವೇ ಅಧ್ಯಕ್ಷರಾಗಿ ಪತ್ರಿಕಾ ಹೇಳಿಕೆ ನೀಡಿರುವುದು ಸಂಘ ವಿರೋಧ ಚಟುವಟಿಕೆ ಆಗಿದೆ.
ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಸಂಘದ ವಿರುದ್ಧ ಅಡ್‍ಹಾಕ್ ಸಮಿತಿ ರಚನೆ ಮಾಡಿರುವ ಎಲ್ಲಾ ಪದಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕೆ.ಬಿ. ಅಶೋಕ್ ಮಾತನಾಡಿ ಇವರ ಹೇಳಿಕೆಯಿಂದ ಜಿಲ್ಲೆಯ ಸಮಸ್ತ ನೌಕರರು ಬರವಸೆ ಕಳೆದುಕೊಳ್ಳಬಾರದು. ನಿಮ್ಮ ಕಲ್ಯಾಣಕ್ಕಾಗಿ ನಾವು ಕಂಕಣಬದ್ದರಾಗಿದ್ದೇವೆ. ಇವರ ಮಾತುಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ತಿಳಿಸಿದರಲ್ಲದೆ ಸಂಘ ವಿರೋಧಿಗಳು ಹೀಗೆ ಇದ್ದರೆ ಅವರ ನಿಯಮ ಬಾಹಿರ ಕಾರ್ಯವನ್ನು ಪ್ರಶ್ನಿಸಿ ದಾವೆ ಹೂಡಲಾಗುತ್ತದೆ ಎಂದು ಎಚ್ಚರಿಸಿದರು.
ಇದೇ ತಿಂಗಳ ಡಿಸೆಂಬರ್ 20,21 ರಂದು ನಡೆಯಲಿರುವ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಮುರಳಿಮೋಹನ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು.