ಕೋಲಾರ: ಅವಧಿ ಮುಗಿದ ನಗರಸಭಾ ಸದಸ್ಯರಿಂದ ಆಡಳಿತಾಧಿಕಾರಿಗಳ ವಿರುದ್ಧ ಧರಣಿ
ಕೋಲಾರ : ವಾರ್ಡ್ ನಂ.14ರ ಹಾಗೂ ಜಯನಗರ ಪಂಪ್ ಹೌಸ್ ವ್ಯಾಪ್ತಿಗೆ ಬರುವ ಕೊಳವೆ ಬಾವಿಗಳ ಪಂಪು ಮೋಟರ್ ರಿಪೇರಿಯಾಗಿ ಸುಮಾರು ತಿಂಗಳು ಕಳೆದರೂ ಪ್ರತಿನಿತ್ಯ ದೂರು ನೀಡಿ ಹಲವಾರು ಬಾರಿ ವಾರ್ಡಿನ ನಾಗರೀಕರೊಂದಿಗೆ ಪ್ರತಿಭನೆ ಮಾಡಿದರೂ ಇಲ್ಲಿಯವರೆಗೂ ನಿರ್ಧಿಷ್ಠವಾದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವಧಿ ಮುಗಿದ ನಗರಸಭಾ ಸದಸ್ಯ ಎಸ್.ಆರ್. ಮುರಳಿಗೌಡ ಆರೋಪಿಸಿದ್ದಾರೆ.
ಕೋಲಾರ ನಗರಸಭೆಯ ಕಛೇರಿಯಲ್ಲಿ ಅವಧಿ ಮುಗಿದ ನಗರಸಭಾ ಸದಸ್ಯರು ಹಮ್ಮಿಕೊಂಡಿದ್ದ ಶಾಂತಿಯುತ ಪ್ರತಿಭಟನೆಯಲ್ಲಿ ಅವರು ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ನಗರಸಭೆಯ ಕೆಲವು ಅಧಿಕಾರಿಗಳು ಹೋರಾಟ ಮಾಡುವ ಸದಸ್ಯರುಗಳ ವಾರ್ಡುಗಳಲ್ಲಿ ಬೇಕೆಂತಲೇ ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಬಗೆಹರಿಸದೆ ಪರೋಕ್ಷವಾಗಿ ನಗರಸಭಾ ಸದಸ್ಯರ ಹೆಸರಿಗೆ ಕಳಂಕ ತರುವ ಕೆಲಸಕ್ಕೆ ಮುಂದಾಗಿದ್ದಾರೆ. ನಗರಸಭೆಯ ಆಡಳಿತಾಧಿಕಾರಿಗಳ ಅವಧಿಯಲ್ಲಿ ಅಭಿವೃದ್ದಿಗೆ ಒತ್ತು ನೀಡದೆ ಅಕ್ರಮಗಳಿಗೆ ಪ್ರಾಮುಖ್ಯತೆ ನೀಡುತ್ತಿರುವುದು ದುರದೃಷ್ಠಕರ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅವಧಿ ಮುಗಿದ ನಗರಸಭಾ ಸದಸ್ಯ ರವೀಂದ್ರ ರವರು ಮಾತನಾಡಿ ನಮ್ಮ ಅವಧಿ ಮುಗಿದ ನಂತರ ನಮ್ಮ ವಾರ್ಡಿನ ಸಮಸ್ಯೆಗಳನ್ನು ತಿಳಿಸಲು ಅಧಿಕಾರಿಗಳಿಗೆ ಕರೆ ಮಾಡಿದರೆ ನಮ್ಮ ಕರೆ ಸ್ವೀಕರಿಸುತ್ತಿಲ್ಲ ಮತ್ತು ಕಛೇರಿಯಲ್ಲಿಯೂ ನಮಗೆ ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು ನಮ್ಮನ್ನು ನಿಂಧಿಸುತ್ತಿದ್ದಾರೆ ಎಂದು ತಮ್ಮ ಅಳಲು ಹೇಳಿಕೊಂಡರು.
ಈ ಸಂದರ್ಭದಲ್ಲಿ ಅವಧಿ ಮುಗಿದ ಸದಸ್ಯರಾದ ಅಪ್ರೋಜ್ ಪಾಷ, ಮಂಜುನಾಥ್ ಹಾಜರಿದ್ದರು.