ಕೋಲಾರ,ನ.28: ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಕೋಲಾರ,ನ.28: ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ 

 

 

ಕೋಲಾರ,ನ.28: ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಹೊರವಲಯದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಹೆಚ್ ಪುಷ್ಪಲತಾರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ವೇತನ ತಾರತಮ್ಯ ಸರಿಪಡಿಸುವ ಸಂಬಂಧ ಸರ್ಕಾರದ ಲಿಖಿತ ಬರವಸೆಯಂತೆ 2ನೇ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡುವುದು, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರ ಕಾರ್ಯಭಾರ ಕುರಿತು ಉನ್ನತ ಮಟ್ಟದ ಪರಿಷತ್ ಸಮಿತಿಯನ್ನು ರಚಿಸಿ ಅಲ್ಲಿಯವರೆಗೂ ಪ್ರತಿ ಉಪನ್ಯಾಸಕರಿಗೆ ವಾರದಲ್ಲಿ 12 ಗಂಟೆಗಳ ಬೋಧನಾ ಅವಧಿಯನ್ನು ಮುಂದುವರೆಸಬೇಕೆಂದು ಒತ್ತಾಯಿಸಿದರು.
ಪದವಿ ಪೂರ್ವ ಕಾಲೇಜುಗಳಲ್ಲಿ ಎನ್‍ಸಿಇಆರ್‍ಟಿ ನಿಯಮಾವಳಿಯಂತೆ ಪ್ರತಿ ತರಗತಿಗಳಿಗೆ ವಿದ್ಯಾರ್ಥಿಗಳ ಗರಿಷ್ಟ ಸಂಖ್ಯೆಯನ್ನು 80 ರಿಂದ 40ಕ್ಕೆ ನಿಗಧಿಪಡಿಸಿ ಆದೇಶ ಹೊರಡಿಸಬೇಕು. ಪಿ.ಯು ಕಾಲೇಜು ಜಿಲ್ಲಾ ನಿರ್ದೇಶಕರ ಹಂತದಲ್ಲಿ ಉಪನ್ಯಾಸಕರ ಸುಮಾರು ವರ್ಷಗಳಿಂದ ಕಾಲಮಿತಿ ವೇತನ ಬಡ್ತಿಯನ್ನು ಮಂಜೂರು ಮಾಡಬೇಕು, ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಸಂಭಾವನೆಯನ್ನು ಚೆಕ್ ಮೂಲಕ ವಿತರಿಸುವುದು ಹಾಗೂ 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಸಂಭಾವನೆಯನ್ನು ಶೇ.30 ರಷ್ಟು ಪರಿಷ್ಕರಿಸಿ ಆದೇಶಿಸುವಂತೆ ಆಗ್ರಹಿಸಿದರು.
ಪಿ.ಯು ಕಾಲೇಜುಗಳಲ್ಲಿ ಕvರ್ತವ್ಯ ನಿರ್ವಹಿಸುತ್ತಿರುವ ನೆಟ್, ಸ್ಲೆಟ್, ಎಂಪಿಲ್, ಪಿ.ಹೆಚ್.ಡಿ ವಿದ್ಯಾರ್ಹತೆ ಹೊಂದಿರುವ ಉಪನ್ಯಾಸಕರನ್ನು ಪದವಿ ಕಾಲೇಜಿಗೆ ಬಡ್ತಿ ನೀಡಬೇಕು, ಅನುಧಾನಿತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆ ಹರಿಸಬೇಕು. 2013ರಲ್ಲಿ ಡಿ.ಡಿ.ಪಿಯು ಇಲಾಖೆಯಿಂದ ನೇಮಕಗೊಂಡು ಬಿಇಡ್ ಪದವಿ ಹೊಂದಿರದ ಉಪನ್ಯಾಸಕರು ವೇತನ ರಹಿತವಾಗಿ 2 ವರ್ಷಗಳ ಬಿ.ಇಡ್ ಪದವಿ ಪೂರೈಸಿ ಇಲಾಖೆಗೆ ಮರಳಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಬಿಇಡ್ ಪದವಿ ಪಡೆಯಲು 2 ವರ್ಷಗಳ ಅವಧಿಯನ್ನು ವೇತನ ಸಹಿತ ರಜೆ ಎಂದು ಪರಿಗಣಿಸಿ ಸೂಕ್ತ ಆದೇಶವನ್ನು ಹೊರಡಿಸಬೇಕೆಂದು ಒತ್ತಾಯಿಸಿದರು.
ನಾನಾ ಬೇಡಿಕೆಗಳನ್ನು ರಾಜ್ಯ ಸರ್ಕಾರ ಕಾಲಮಿತಿಯೊಳಗೆ ಬಗೆ ಹರಿಸಬೇಕು ಇಲ್ಲವಾದಲ್ಲಿ 2019-20ನೇ ಸಾಲಿನ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಯ ಮೌಲ್ಯಮಾಪನ ಕಾರ್ಯವನ್ನು ಉಪನ್ಯಾಸಕರು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಂ.ಉದಯ್‍ಕುಮಾರ್, ಅಧ್ಯಕ್ಷ ಟಿ.ಕೆ ನಟರಾಜ್, ಕಾರ್ಯಾಧ್ಯಕ್ಷ ಜೆ.ಜಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎನ್.ಬೋಡಿರೆಡ್ಡಿ, ಕೋಶಾಧ್ಯಕ್ಷ ಟಿ.ಚಂದ್ರಪ್ಪ, ಉಪನ್ಯಾಸಕರಾದ ನಾಗಾನಂದ ಕೆಂಪರಾಜ್, ಮರಿಸ್ವಾಮಿ, ಅನುರಾಧ, ಜಿ.ಎಂ ಗೋಪಿಕೃಷ್ಣನ್, ಮಾಲೂರು ಎನ್ ಮಂಜುನಾಥರೆಡ್ಡಿ, ಮುಳಬಾಗಿಲು ಜಿ.ಎಲ್ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು.