ಕೋಲಾರದಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಜಗದೀಶ್​ ಅವರಿಗೆ ಸಂಕಷ್ಟ :ನ್ಯಾಯಾಲಯ ಕೋಲಾರ ತನಿಖೆಗೆ ಭ್ರಷ್ಟಾಚಾರ  ನಿಗ್ರಹದಳಕ್ಕೆ ಆದೇಶ ನೀಡಿದೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರದಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸಿ ಇತ್ತೀಚೆಗೆ ಉಡುಪಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಜಗದೀಶ್​ ಅವರಿಗೆ ಸಂಕಷ್ಟ :ನ್ಯಾಯಾಲಯ ಕೋಲಾರ ತನಿಖೆಗೆ ಭ್ರಷ್ಟಾಚಾರ  ನಿಗ್ರಹದಳಕ್ಕೆ ಆದೇಶ ನೀಡಿದೆ

ಕೋಲಾರ : ಬೆಲೆ ಬಾಳುವ ಬೆಳ್ಳಿ ಗದೆ , ಕಿರೀಟ , ಚಿನ್ನದ ಉಂಗುರವನ್ನು ಉಡುಗೊರೆ ರೂಪದಲ್ಲಿ ಲಂಚವನ್ನು ನೀಡಿದ ಮತ್ತು ಸ್ವೀಕರಿಸಿದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕೋಲಾರ ಜಿಲ್ಲಾ ಪಂಚಾಯಿತಿಯ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಲಿ ಉಡುಪಿ ಜಿಲ್ಲಾಧಿಕಾರಿಯಾದ ಜಿ.ಜಗದೀಶ್ IAS,  9 ಪಿ.ಡಿ.ಓಗಳು ಮತ್ತು ಒಬ್ಬ ಇ.ಓ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988 ರ ಅನ್ವಯ ತನಿಖೆ ನಡೆಸಿ ವರದಿ ನೀಡುವಂತೆ ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಎಂ.ಎಲ್.ರಘುನಾಥ್‌ರವರು ಕೋಲಾರ ಭ್ರಷ್ಟಾಚಾರ ನಿಗ್ರಹದಳಕ್ಕೆ ಆದೇಶ ನೀಡಿದ್ದಾರೆ . 
ಹಿನ್ನಲೆ : ಈ ಹಿಂದೆ ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಜಿ.ಜಗದೀಶ್ IAS ಇವರು 11 ತಿಂಗಳು ಸೇವೆ ಸಲ್ಲಿಸಿ ಉಡುಪಿ ಜಿಲ್ಲಾಧಿಕಾರಿಗಳಾಗಿ ಆಗಸ್ಟ್ 2019 ರಲ್ಲಿ ವರ್ಗಾವಣೆಯಾದಾಗ ದಿನಾಂಕ: 23-08-2019 ಬೀಳ್ಕೊಡುಗೆ ಸಮಾರಂಭವನ್ನು ಅದ್ದೂರಿಯಾಗಿ ಏರ್ಪಡಿಸಲಾಗಿತ್ತು . ಜಿಲ್ಲಾಧಿಕಾರಿ ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು . ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕೆಲವು ಪಿ.ಡಿ.ಓ. ಗಳು ಹಾಗೂ ಇತರರಿಗೆ ಆಸರೆಯಾಗಿ ನಿಂತು ಭ್ರಷ್ಟಾಚಾರಕ್ಕೆ ನೀರೆರೆದು ಪೋಷಿಸಿದಕ್ಕೆ ಪ್ರತಿಯಾಗಿ ಲಂಚದ ರೂಪದಲ್ಲಿ ಹಿಂದಿನ ಸಿಇಓ ಜಿ ಜಗದೀಶ್ ಗೆ ಬೆಲೆ ಬಾಳುವ ಬೆಳ್ಳಿ ಕಿರೀಟ , ಬೆಳ್ಳಿ ಗದೆ , ಚಿನ್ನದ ಉಂಗುರ ಇನ್ನು ಏನೇನೋ ಉಡುಗೊರೆಯಾಗಿ ಬಹಿರಂಗವಾಗಿ ನೀಡಿದ್ದರು . ಕರ್ನಾಟಕ ಕೆ.ಸಿ.ಎಸ್ . ( ನಡತೆ ) ನಿಯಮಗಳು 1966 ರ ಅವಕಾಶವನ್ನು ಉಲ್ಲಂಘಿಸಿ ವಂತಿಗೆಯನ್ನು ಸ್ವೀಕರಿಸುವುದು ಅಥವಾ ಬೇರೆ ರೀತಿಯಲ್ಲಿ ನಿಧಿ ಸಂಗ್ರಹಿಸಲು , ಸಂಗ್ರಹಣಾ ಕಾರ್ಯದಲ್ಲಿ ಪಾಲ್ಗೊಳ್ಳುವುದು ಅಥವಾ ಇತರೆ ಸಂಗ್ರಹಣೆಗಳು ನಗದು ಅಥವಾ ಇತರೆ ರೀತಿಯಲ್ಲಿ ಪಡೆಯುವುದು ನಿಷೇಧಿಸಿದೆ . ಇದು ದಂಡಾರ್ಹ ಅಪರಾಧವಾಗಿರುತ್ತದೆ .
ಈ ಸಂಬಂಧ ಕೋಲಾರದ ಸಾಮಾಜಿಕ ಕಾರ್ಯಕರ್ತ ಎಸ್ . ನಾರಾಯಣಸ್ವಾಮಿ ಯವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು , ಭ್ರಷ್ಟಾಚಾರ ನಿಗ್ರಹ ದಳ , ಬೆಂಗಳೂರು ರವರಿಗೆ ದಾಖಲೆಗಳ ಸಮೇತ ದೂರನ್ನು ನೀಡಿ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲು ಕೋರಿದ್ದರು . ದಿನಾಂಕ : 17-06-2020 ರಂದು ಕೋಲಾರದ ಭ್ರಷ್ಟಾಚಾರ ನಿಗ್ರಹ ದಳದ ನ್ಯಾಯಾಲಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತನಿಖೆಗೆ ಮನವಿ ಮಾಡಿಕೊಳ್ಳಲಾಗಿತ್ತು .
 ಈ ಸಂಬಂಧ ತನಿಖೆ ನಡೆಸಿ 25-08-2020 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಆದೇಶ ನೀಡಿದ್ದಾರೆ .
 ಇದರನ್ವಯ ದಿನಾಂಕ : 25-06-2020 ರಂದು ( 1 ) ಹಿಂದಿನ ಸಿ.ಇ.ಓ. ಹಾಲಿ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ , IAS , ( 2 ) ನರಸಾಪುರ ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಕೆ.ಮಹೇಶ್‌ಕುಮಾರ್ ( 3 ) ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಪಿ.ನಾರಾಯಣಪ್ಪ ( 4 ) ಹರಟೆ ಗ್ರಾಮ ಪಂಚಾಯಿತಿಯ ಪಿ.ಡಿ.ಒ , ಎಂ.ರಾಮಕೃಷ್ಣ ( 5 ) ಮಾಗೊಂದಿ ಗ್ರಾಮ ಪಂಚಾಯಿತಿಯ ಪಿ.ಡಿ.ಒ , ವಿ.ಶಂಕರ್ ( 6 ) ಬೆಳ್ಳೂರು ಗ್ರಾಮ ಪಂಚಾಯಿತಿಯ ಪಿ.ಡಿ.ಓ. ಎನ್ ಸಂಪರಾಜ ( 7 ) ಸೂಲೂರು ಗ್ರಾಮ ಪಂಚಾಯಿತಿಯ ಪಿ.ಡಿ.ಓ , ಎಸ್.ಜಿ.ಹರೀಶ್‌ಕುಮಾರ್ ( 8 ) ಹೋಳೂರು ಗ್ರಾಮ ಪಂಚಾಯಿತಿಯ ಪಿ.ಡಿ.ಒ. ಎಂ.ಸೋಮಶೇಖರ್ ( 9 ) ಅಂಬ್ಲಿಕಲ್ ಗ್ರಾಮ ಪಂಚಾಯಿತಿಯ ಪಿಡಿಒ ಅಶ್ವಥನಾರಾಯಣ ( 10 ) ಅಗರ ಗ್ರಾಮ ಪಂಚಾಯಿತಿಯ ಪಿ.ಡಿ.ಒ , ಎಂ.ಸುರೇಶ್‌ಕುಮಾರ್‌ ( 11 ) ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಆನಂದ್ ಇವರುಗಳ ವಿರುದ್ಧ ಐಪಿಸಿ ಕಲಂ 465 , 467 , 468 , 471 ರ ಅನ್ವಯ ಎಫ್.ಐ.ಆರ್ ನ್ನು ದಾಖಲಿಸಿಕೊಂಡು ಕೋಲಾರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರಾದ ಎಂ.ಎಲ್.ಪುರುಷೋತ್ತಮ ಮತ್ತು ಪೊಲೀಸ್ ನಿರೀಕ್ಷಕರಾದ ಜಿ.ಎನ್.ವೆಂಕಟಾಚಲಪತಿ ತನಿಖೆ ಕೈಗೊಂಡಿರುತ್ತಾರೆ . 
ಈ ಪ್ರಕರಣದಲ್ಲಿ ಹಿಂದಿನ ಜಿಲ್ಲಾಧಿಕಾರಿಯಾದ ಎಂ.ಮಂಜುನಾಥ್ ಸೇರಿದಂತೆ ಒಟ್ಟು 6 ಜನ ಅಧಿಕಾರಿಗಳನ್ನು ಸಾಕ್ಷಿಗಳನ್ನಾಗಿ ಗುರುತಿಸಲಾಗಿದೆ .