ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳಿವೆ -ಜಗದೀಶ್ ಶೆಟ್ಟರ್
ಕೋಲಾರ ; ಚೆನ್ನೈ ಮತ್ತು ಬೆಂಗಳೂರು ಕೈಗಾರಿಕಾ ಕಾರಿಡಾರ್ ಸ್ಥಾಪನೆ ಆಗುತ್ತಿದ್ದು, ಇದು ಕೋಲಾರ ಜಿಲ್ಲೆಯನ್ನು ಸಹ ಒಳಗೊಂಡಿದೆ. ಅಲ್ಲದೆ ಕೋಲಾರ ಜಿಲ್ಲೆಯೂ ರಾಜಧಾನಿಗೆ ಹತ್ತಿರದಲ್ಲಿದ್ದು, ಇಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
ಇಂದು ವೇಮಗಲ್ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕೈಗಾರಿಕೆಗಳ ಸ್ಥಾಪನೆಗೆ ಜಮೀನುಗಳ ಪರಿವೀಕ್ಷಣೆ ನಡೆಸಿ ಅವರು ಮಾತನಾಡಿದರು. ವಿಶ್ವದಾದ್ಯಂತ ಕರೋನಾ ಬಂದ ನಂತರ ಕೈಗಾರಿಕಾ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹಿನ್ನೆಡೆಯಾಗಿದೆ. ಮುಂದಿನ ಒಂದೆರಡು ತಿಂಗಳುಗಳಲ್ಲಿ ಎಲ್ಲವು ಸಹಜ ಸ್ಥಿತಿಗೆ ಬರಲಿದೆ. ಈಗಾಗಲೇ ಶೇಕಡ 90 ರಷ್ಟು ಕೈಗಾರಿಕೆಗಳು ಪುನರ್ ಆರಂಭಗೊಂಡಿವೆ ಎಂದರು.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಕರೋನಾ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳಿ ಕಡಿಮೆ ಇವೆ. ಎರಡು ತಿಂಗಳ ಕಾಲ ನಿರಂತರವಾಗಿ ಲಾಕ್‍ಡೌನ್ ಮಾಡಲಾಗಿತ್ತು. ಜನಜೀವನ ಸಹಜ ಸ್ಥಿತಿಗೆ ತರಲು ಲಾಕ್‍ಡೌನ್‍ನಲ್ಲಿ ಸಡಿಲಿಕೆ ಮಾಡಲಾಗಿದೆ. ರಾಜ್ಯದಿಂದ ಮಾತೃ ರಾಜ್ಯಗಳಿಗೆ ವಾಪಸ್ಸು ಹೋಗಿರುವ ಕಾರ್ಮಿಕರು ಒಂದೆರಡು ತಿಂಗಳುಗಳಲ್ಲಿ ವಾಪಸ್ಸು ಬರುವ ಭರವಸೆಯಿದೆ. ಇದರಿಂದ ಕಾರ್ಖಾನೆಗಳಿಗೆ ಕಾರ್ಮಿಕರ ಕೊರತೆ ಉಂಟಾಗುವುದಿಲ್ಲ ಎಂದು ತಿಳಿಸಿದರು.
ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಜಿಲ್ಲಾಡಳಿತಗಳು, ಉತ್ತಮ ಕ್ರಮಗಳನ್ನು ಕೈಗೊಂಡಿದ್ದರಿಂದ ಸಮುದಾಯ ಹರಡುವಿಕೆ ಆಗಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಂಡು ಬರುತ್ತಿರುವ ಕೋವಿಡ್-19 ಪ್ರಕರಣಗಳು ಬಹುತೇಕ ಹೊರರಾಜ್ಯದಿಂದ ಬಂದವರಿಗೆ ಕಂಡು ಬಂದಿದೆ. ಸ್ಥಳೀಯವಾಗಿ ಇದ್ದವರಿಗೆ ಹೆಚ್ಚಾಗಿ ಸೋಂಕು ಹರಡಿಲ್ಲ ಎಂದು ಮಾಹಿತಿ ನೀಡಿದರು.
ಹಲವು ಕೈಗಾರಿಕೆಗಳು ಚೀನಾದಿಂದ ಹೊರಬರಲು ಸಿದ್ಧವಾಗಿವೆ. ಈ ಕಂಪನಿಗಳನ್ನು ಭಾರತಕ್ಕೆ ಕರೆತರಲು ರಾಜ್ಯ ಸರ್ಕಾರವು ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಕಮಿಟಿಯನ್ನು ರಚಿಸಿದೆ. ಈಗಾಗಲೇ ಎರಡು ಬಾರಿ ಸಭೆ ನಡೆಸಿ ಗೃಹಪ್ರವೇಶಗಳನ್ನು ಸಿದ್ಧಪಡಿಸಲಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಭೂಮಿ ಪಡೆಯಲು ಕಾಯ್ದೆ ತಿದ್ದುಪಡಿ ತಂದು ಕಾಯ್ದೆಯನ್ನು ಸರಳೀಕರಣಗೊಳಿಸಲಾಗಿದೆ ಎಂದರು.
ಬೆಂಗಳೂರು ನಂತರದ 2ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ರೈಲ್ವೆ ವರ್ಕ್‍ಶಾಪ್ ಸ್ಥಾಪಿಸಲು ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಒತ್ತು ನೀಡಲಾಗುವುದು. ಕೈಗಾರಿಕೆಗಳ ಸ್ಥಾಪನೆಗೆ ಭೂಮಿಯನ್ನು ನೀಡಿದವರಿಗೆ ಆ ಕೈಗಾರಿಕೆಗಳಲ್ಲಿ ಕಡ್ಡಾಯವಾಗಿ ಕೆಲಸ ನೀಡುವಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸುರೇಶ್, ಉಪನಿರ್ದೇಶಕರಾದ ರವಿಚಂದ್ರ, ತಹಸೀಲ್ದಾರರಾದ ಶೋಭಿತಾ, ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.