ಕೋಟೇಶ್ವರದ ಕುವರ, ದೇಶದ “ಕಾಂಕ್ರಿಟ್ ಪಿತಾಮಹ” ಡಾ.ಎನ್.ವಿನಯ ಹೆಗ್ಡೆಯವರಿಂದ ಪ್ರೊ. ಎಂ.ಎಸ್.ಶೆಟ್ಟಿಯವರಿಗೆ ಜ.19 ರಂದು ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ

JANANUDI.COM NETWPRK

 

 

 

ಡಾ.ಎನ್.ವಿನಯ ಹೆಗ್ಡೆಯವರಿಂದ ಪ್ರೊ. ಎಂ.ಎಸ್.ಶೆಟ್ಟಿಯವರಿಗೆ
ಜ.19 ರಂದು ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ
ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಜ.19 ರಂದು ಕೋ.ಮ.ಕಾರಂತ ಪ್ರಶಸ್ತಿಯನ್ನು ಭಾರತದ ರಕ್ಷಣಾ ವಲಯದ ಹಿರಿಯ ಇಂಜಿನಿಯರ್ , ಫಾದರ್ ಆಫ್ ಕಾಂಕ್ರಿಟ್ ಬಿರುದಾಂಕಿತ ಪ್ರೊ. ಎಂ.ಸುಬ್ಬಣ್ಣ ಶೆಟ್ಟಿಯವರಿಗೆ ಪ್ರದಾನ ಮಾಡಲಾಗುತ್ತಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ವಿನಯ ಹೆಗ್ಡೆ ಈ ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧ್ಯಕ್ಷತೆ ವಹಿಸಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಿದ್ದಾರೆ.
ಕುಂದಾಪುರದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಎಂಡ್ ಆರ್ಕಿಟಿಕ್ಟ್ಸ್ ಸಂಘಟನೆಯ ಅಧ್ಯಕ್ಷ ಇಂಜಿನಿಯರ್ ರಾಮಚಂದ್ರ ಆಚಾರ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲಾಗುತ್ತದೆ.
ಜನವರಿ 19 ರಂದು ಸಂಜೆ 4.00ಕ್ಕೆ ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಸಮಾರಂಭ ನಡೆಯಲಿದ್ದು ಸಾರ್ವಜನಿಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳಬೇಕೆಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಆಹ್ವಾನಿಸಿದ್ದಾರೆ.

 

 

 

ಕೋಟೇಶ್ವರದ ಕುವರ, ದೇಶದ “ಕಾಂಕ್ರಿಟ್ ಪಿತಾಮಹ”ರಾದುದು
ಇವರಿಗೆ ಕನ್ನಡ ಶಿಕ್ಷಕನಾಗುವ ಹಂಬಲವಿತ್ತು. ತಂದೆಗೆ ಮಗ ಇಂಜಿನಿಯರ್ ಆಗಬೇಕೆಂಬ ಆಸೆ. ಕೊನೆಗೆ ಹೆತ್ತವರ ಆಶಯದಂತೆ ಮುನ್ನಡೆಯಲು ನಿರ್ಧರಿಸಿದರು. ಆದರೂ ಮಾತ್ರ ಭಾಷೆ ಕನ್ನಡವನ್ನು ಬಿಡದೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ ಕಾಂಕ್ರಿಟ್ ಪಿತಾಮಹ ಎಂದು ದೇಶದಲ್ಲಿ ಬಿರುದು ಪಡೆದವರು ಕೋಟೇಶ್ವರದ ಪ್ರೊ.ಎಂ.ಎಸ್.ಶೆಟ್ಟಿ .
ಊರಲ್ಲಿ ಸುಬ್ಬಣ್ಣ ಶೆಟ್ಟಿಯವರು ಎಂದೇ ಕರೆಯಲ್ಪಡುವ ಇವರು ವಕ್ವಾಡಿ, ಕೋಟೇಶ್ವರ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರದಲ್ಲಿ ಪ್ರೌಢಶಿಕ್ಷಣ ಮಂಗಳೂರಿನಲ್ಲಿ ಇಂಟರ್‍ಮಿಡಿಯೇಟ್, ಮದ್ರಾಸ್‍ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದÀರು. ಇವರು ರಾಷ್ಟ್ರಮಟ್ಟದಲ್ಲಿ ಮಾಡಿದ ಸಾಧನೆ ವಿಸ್ಮಯಕಾರಿಯಾದುದು. ಕೋಟೇಶ್ವರದ ವಕ್ವಾಡಿ ವೆಂಕಪ್ಪ ಶೆಟ್ಟಿ -ಮೊಳಹಳ್ಳಿ ಸೀತಮ್ಮ ಶೆಡ್ತಿಯವರ ಪುತ್ರರಾದ ಇವರು ಹೆತ್ತವರ ಆಶಯದಂತೆ ಸಿವಿಲ್ ಇಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದು ದೇಶಕ್ಕೆ ನೀಡಿದ ಕೊಡುಗೆ ಅನನ್ಯವಾದುದು. 65 ವರ್ಷಗಳ ವೃತ್ತಿಸೇವಾ ಅನುಭವದಲ್ಲಿ ಸೈಟ್ ಇಂಜಿನಿಯರ್, ರಿಸರ್ಚ್ ವರ್ಕರ್, ಸೀನಿಯರ್ ಪ್ರೊಫೆಸರ್, ಪೋಸ್ಟ್ ಗ್ರಾಜ್ಯುವೇಟ್ ಗೈಡ್, ಕನ್ಸಲ್‍ಸ್ಟೆಂಟ್ ಮತ್ತು ಅಡ್ವೈಸರ್ ಆಗಿ ಸಲ್ಲಿಸಿದ ಸೇವೆ ಇವರ ಕರ್ತುತ್ವ ಶಕ್ತಿಗೆ ಉದಾಹರಣೆ .
ಕಾಂಕ್ರಿಟ್ ತಂತ್ರಜ್ಞತೆ ಬಗ್ಗೆ ಇವರಿಗೆ ಆಸಕ್ತಿ ಮೂಡಿದ್ದು ಇವರು ಮದ್ರಾಸ್‍ನ ಲೋಕೋಪಯೋಗಿ ಇಲಾಖೆ ಮತ್ತು ನಂತರ ಸೆಂಟ್ರಲ್ ರೈಲ್ವೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ನೀರಾವರಿ ಕಾಲುವೆಗಳು, ಪುಟ್ಟ ಸೇತುವೆಗಳು, ದೊಡ್ಡ ಸೇತುವೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡದ್ದು ಇವರಿಗೆ ಹೊಸ ಅನುಭವ ನೀಡಿತು. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್‍ನಲ್ಲಿ ಪದವೀಧರರಿಗೆ ಮತ್ತು ಸ್ನಾತಕೋತ್ತರ ಅಭಿಯಂತರರಿಗೆ ಬೋಧನೆ ಹಾಗೂ ತರಬೇತಿ ನೀಡಿದ ಸಂದರ್ಭ ಬದುಕಿಗೆ ಹೊಸ ಆಯಾಮ ದೊರಕಿತು.
1960ರಲ್ಲಿ ಪುಣೆ ಯುನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದುದು ಇವರಿಗೆ ಬೋಧನೆ ಹಾಗೂ ನಿರ್ಮಾಣ ಮಾರ್ಗದರ್ಶನಕ್ಕೆ ಅನುಕೂಲವಾಯಿತು. ಕೇವಲ ಕೆಲವೇ ಮಂದಿ ಸ್ನಾತಕೋತ್ತರ ಪದವಿ ಪಡೆದ ಸಿವಿಲ್ ಇಂಜಿನಿಯರ್ಸ್ ಇದ್ದ ಆ ಕಾಲದಲ್ಲಿ ಕನ್ನಡ ಮಾಧ್ಯಮ ಗ್ರಾಮೀಣ ಪ್ರದೇಶದ ಯುವಕರಾಗಿದ್ದ ಇವರು ಪಡೆದ ಶೈಕ್ಷಣಿಕ ಗೌರವ ಹೆಮ್ಮೆಯನ್ನುಂಟುಮಾಡುವಂತದ್ದು, ಕೊೈನಾ ಜಲವಿದ್ಯುತ್ ಆಗರದ ಯೋಜನೆಗೆ ಆಗಾಗ ಭೇಟಿ ನೀಡುತ್ತ್ತಾ ಪಡೆದ ಅನುಭವ ಇವರಿಗೆ ಕಾಂಕ್ರಿಟ್ ತಾಂತ್ರಿಕತೆಯಲ್ಲಿ ವಿಶೇಷ ಸಂಶೋಧನೆ ಮಾಡಲು ಪ್ರೇರಣೆ ಒದಗಿಸಿತು.
ಕಾಂಕ್ರಿಟ್ ತಾಂತ್ರಿಕತೆ ಬಗ್ಗೆ ಮುಂದುವರಿದ ದೇಶಗಳ ತಾಂತ್ರಿಕ ತಜ್ಞರು ಬರೆದ ಹಲವಾರು ಗ್ರಂಥಗಳನ್ನು ಅಧ್ಯಯನ ಮಾಡಿದ ಇವರು ಆ ಜ್ಞಾನವನ್ನು ಧಾರೆ ಎರೆದುದರಿಂದ ಸುಮಾರು 3 ಲಕ್ಷಕ್ಕೂ ಹೆಚ್ಚು ರಕ್ಷಣಾ ಇಲಾಖೆಯ ಇಂಜಿನಿಯರುಗಳು ಮಾರ್ಗದರ್ಶನ ಪಡೆಯುವಂತಾಯ್ತು. 1964ರಲ್ಲಿ ಪುಣೆ ಯುನಿವರ್ಸಿಟಿಯಿಂದ ಪೋಸ್ಟ್ ಗ್ರಾಜ್ಯುವೇಟ್ ಗೈಡ್ ಆಗಿ ಗೌರವಿಸಲ್ಪಟ್ಟ ಇವರ ಮಾರ್ಗದರ್ಶನದಲ್ಲಿ ವರ್ಷದಲ್ಲಿ 45 ಡಿಗ್ರಿ ಇಂಜಿನಿಯರ್‍ಗಳು ಸ್ನಾತಕೋತ್ತರ ಪದವಿ ಪಡೆದು ಮುನ್ನಡೆಯುವ ಧೀಮಂತಿಕೆ ಪಡೆದುಕೊಂಡಿದ್ದಾರೆ. ದೇಶಕ್ಕಾಗಿ ಈ ಇಂಜಿನಿಯರ್‍ಗಳು ಕಟ್ಟಿದ ಹಲವಾರು ಸೇತುವೆಗಳು, ಮೆಟ್ರೋ ಕಾಮಗಾರಿಗಳು, ಕಟ್ಟಡಗಳ ಯಶಸ್ಸಿನಲ್ಲಿ ಪ್ರೊ.ಎಂ.ಎಸ್.ಶೆಟ್ಟಿಯವರ ಪಾತ್ರವಿದೆ.
ಕಾಂಕ್ರಿಟ್ ತಂತ್ರಜ್ಞಾನ ಅಭಿದಾನ ಹೊಂದಿದ ಇವರ “ಕಾಂಕ್ರಿಟ್ ಟೆಕ್ನಾಲಜಿ” ಹೊತ್ತಗೆಯು 1982ರಲ್ಲಿ ಪ್ರಕಟಿಸಲ್ಪಟ್ಟು ಒಂದು ಉತ್ಕ್ರಾಂತಿಯನ್ನೇ ಹುಟ್ಟುಹಾಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಜನಪ್ರಿಯವಾಗಿ 50 ಬಾರಿ ಪುನಃ ಮುದ್ರಣಗೊಂಡಿದೆ. ಭಾರತೀಯ ಇಂಜಿನಿಯರರ ಪಾಲಿಗೆ ಮಾತ್ರವಲ್ಲದೇ ವಿದೇಶಿ ಇಂಜಿನಿಯರರ ಪಾಲಿಗೂ ಅದು ಕಾಂಕ್ರಿಟ್ ಭಗವದ್ಗೀತೆಯಾಯಿತು. ಇಂಜಿಯರಿಂಗ್ ಕಾಲೇಜುಗಳಲ್ಲಿ ಒಂದು ಶ್ರೇಷ್ಠ ಮಾರ್ಗದರ್ಶಕ ಪಠ್ಯಪುಸ್ತಕವಾಯಿತು. ಇಂದು 4 ಲಕ್ಷಕ್ಕೂ ಹೆಚ್ಚು ಇಂಜಿನಿಯರುಗಳು ಇವರ ಪಠ್ಯಪುಸ್ತಕ ಹಾಗೂ 500 ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳಿಂದ ಅನುಕೂಲ ಪಡೆದಿದ್ದಾರೆ.
ಒಟ್ಟು 8 ಪ್ರತಿಷ್ಠಿತ ಪ್ರಶಸ್ತಿ ಗೌರವಗಳು ಹಾಗೂ ಹಲವಾರು ಸನ್ಮಾನ ಬಿರುದುಗಳು ಇವರಿಗೆ ದೊರಕಿವೆ. 90ರ ಹರೆಯದಲ್ಲೂ ಇಂದು ದೇಶದ ಪ್ರತಿಷ್ಠಿತ ಕಂಪೆನಿಗಳಿಗೆ ಸಲಹೆಗಾರರಾಗಿ ಇರುವ ಇವರ ತಜ್ಞತೆಯಿಂದ ಇಂದು ಕಾಂಕ್ರಿಟ್ ಗುಣಮಟ್ಟ ದೇಶದಲ್ಲಿ ಶ್ರೇಷ್ಠಮಟ್ಟಕ್ಕೆ ತಲುಪಿದೆ. ಇಂತಹ ಅಪೂರ್ವ ಸಾಧನೆ ಮಾಡಿದ ಕುಂದಾಪುರದ ಹೆಮ್ಮೆಯ ಪುತ್ರನಿಗೆ ಕುಂದಪ್ರಭ – ಕೋ.ಮ.ಕಾರಂತ ಪ್ರಶಸ್ತಿ ಜನವರಿ 19 ರಂದು ಪ್ರದಾನ ಮಾಡಲಾಗುತ್ತದೆ. ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಸಂಜೆ 4.30 ಕ್ಕೆ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿನಯ ಹೆಗ್ಡೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಹಿಸಲಿದ್ದಾರೆ. ಕುಂದಾಪುರ ಸಿವಿಲ್ ಇಂಜಿನಿಯರ್ ಅವರ ಸಂಘದ ಅಧ್ಯಕ್ಷ ರಾಮಚಂದ್ರ ಆಚಾರ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ.