ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ,ನ.5: – ಕೊವೀಡ್-19 ಸೊಂಕು ಹರಡದಂತೆ ಮುಂಜಾಗೃತ ಕ್ರಮಗಳ ಕುರಿತು ಮಾದ್ಯಮಗಳು ವಾರಿಯರ್ಸ್ ಮಾದರಿಯಲ್ಲಿ ದಿನದ 24 ಗಂಟೆಗಳು ಶ್ರಮಿಸುವ ಮೂಲಕ ಸೊಂಕನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿಂದು ಜಿಲ್ಲಾ ಕಾಯ್ನಿರತ ಪತ್ರಕರ್ತರ ಸಂಘ, ಬಂಗಾರಪೇಟೆಯ ಚಿಗುರು ಟ್ರಸ್ಟ್ ಮತ್ತು ಬೆಂಗಳೂರಿನ ಕ್ರೈ ಸಂಸ್ಥೆಯ ಸಂಯುಕ್ತಾಶ್ರದಲ್ಲಿ ನಗರದ ಕೋವಿಡ್ ವಾರಿಯರ್ಸ್ ಪತ್ರಕರ್ತರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಮಾಜದ ಅಗುಹೋಗುಗಳ ವರದಿಯನ್ನು ಸಾರ್ವಜನಿಕರಿಗೆ ಮುಟ್ಟಿಸುವ ಹಾಗೂ ಕೊರೋನಾ ಮಾಹಿತಿಗಳು ಹಾಗೂ ಮುಂಜಾಗೃತಿಯ ಅರಿವು ಮೂಡಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದೆ. ರಾಜ್ಯದಲ್ಲಿ ಅನೇಕ ಮಂದಿ ಮಾದ್ಯಮ ಮಿತ್ರರು ತಮ್ಮ ವೃತ್ತಿ ಸೇವೆಯಲ್ಲಿ ಕೋರೋನಾ ಮಹಾಮಾರಿಗೆ ಬಲಿಯಾಗಿರುವುದು ವಿಷಾಧನಿಯ ಸಂಗತಿಯಾಗಿದೆ ಎಂದರು.
ಪ್ರತಿಯೊಬ್ಬರು ಮನೆಯಿಂದ ಹೊರಗೆ ಬಂದಾಗ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು. ಸಾಮಾಜಿಕ ಅಂತರ ಕಾಪಾಡಿ ಕೊಳ್ಳ ಬೇಕು, ಸ್ಯಾನಿಟೈಸರ್ ಬಳಸುವ ಮೂಲಕ ಪದೇ ಪದೇ ಕೈ ತೊಳೆಯ ಬೇಕು. ಈ ನಿಟ್ಟಿನಲ್ಲಿ ಚಿಗುರು ಟ್ರಸ್ಟ್ ಹಾಗೂ ಕ್ರೈ ಸಂಸ್ಥೆ ವತಿಯಿಂದ ಮಾದ್ಯಮದವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಟರ್ ವಿತರಿಸುತ್ತಿರುವುದು ಶ್ಲಾಘನೀಯ ಎಂದ ಅವರು ಬೆಂಗಳೂರಿನಲ್ಲಿ ಮಾಸ್ಕ್ ಧರಿಸದೆ ವಾಯು ವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ನಡೆದ ಪ್ರಕರಣವನ್ನು ವಿವರಿಸಿದರು.
ಬಂಗಾರಪೇಟೆ ಚಿಗರು ಟ್ರಸ್ಟ್ ಅಧ್ಯಕ್ಷೆ ಪ್ರಭಾವತಿ ಪ್ರಸ್ತಾವಿಕ ನುಡಿಗಳಾಡಿ ಟ್ರಸ್ಟ್ ವತಿಯಿಂದ ಸಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಕೊರೋನಾ ಸೊಂಕು ಸಂದರ್ಭದಲ್ಲಿ ಆರೋಗ್ಯ ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಮಾದರಿಯಲ್ಲಿ ಟ್ರಸ್ಟ್ ಕೊರೋನಾ ಮುಂಜಾಗೃತ ಅರಿವು, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮಗಳನ್ನು ಗ್ರಾಮೀಣ ಭಾಗಗಳಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ಟ್ರಸ್ಟ್ನ ಮುಖ್ಯ ಉದ್ದೇಶ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಅಪೌಷ್ಠಿಕತೆಯಿಂದ ಉಂಟಾಗುತ್ತಿರುವ ಅಘಾತಗಳನ್ನು ನಿಯಂತ್ರಿಸಲು ಎಲ್ಲರೂ ಸಹಕಾರ ನೀಡಿದಾಗ ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ನಮ್ಮ ಟ್ರಸ್ಟ್ನಿಂದ ಸೇವಾ ಕಾರ್ಯಗಳನ್ನು ಹಮ್ಮಿ ಕೊಂಡು ಬರಲಾಗುತ್ತಿದೆ ಎಂದರು.
ಇದರ ಜೂತೆಗೆ ಶಾಲೆ ಬಿಟ್ಟ ಮಕ್ಕಳನ್ನು ಮರು ಸೇರ್ಪಡೆ, ಕೊಲಿ ಕಾರ್ಮಿಕರ ಮಕ್ಕಳು ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಾರ್ಯಕಗಳನ್ನು ಮಾಡಲಾಗುತ್ತಿದೆ. ಶೋಷಿತರಿಗೆ, ನೊಂದವರಿಗೆ ಆಶ್ರಯ ಕಲ್ಪಿಸಿ ನೆರವು ನೀಡುವ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಜಿ ಎ.ಜಿ.ಸುರೇಶ್ ಕುಮಾರ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.