ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೊರೊನಾ ಸೋಂಕಿನ ಆತಂಕದ ನಡುವೆಯೂ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಶ್ರೀನಿವಾಸಪುರದಲ್ಲಿ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ : ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್
ಕೋಲಾರ: ‘ಕೊರೊನಾ ಸೋಂಕಿನ ಆತಂಕದ ನಡುವೆಯೂ ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಶ್ರೀನಿವಾಸಪುರದಲ್ಲಿ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ತಿಳಿಸಿದರು.
ಮಾವು ಮಾರುಕಟ್ಟೆ ಆರಂಭದ ಸಂಬಂಧ ಜಿಲ್ಲೆಯ ಶಾಸಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಇಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಈ ಬಾರಿ ಮಾವಿನ ಫಸಲು ಕಡಿಮೆಯಿದ್ದು, 2.36 ಲಕ್ಷ ಟನ್ ಮಾವು ಮಾರುಕಟ್ಟೆಗೆ ಬರುತ್ತದೆ ಎಂದು ಅಂದಾಜಿಸಲಾಗಿದೆ’ ಎಂದರು.
‘1.36 ಲಕ್ಷ ಟನ್ ಮಾವು ಸಂಸ್ಕರಣಾ ಘಟಕಗಳಿಗೆ ಹೋಗುತ್ತದೆ. ಉಳಿದ ಮಾವು ಮಾರಾಟವನ್ನು ದಿನಕ್ಕೆ ಇಂತಿಷ್ಟು ಎಂದು ನಿಗದಿಪಡಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರ ರಾಜ್ಯದ ಲಾರಿಗಳಿಗೆ ಮಾರುಕಟ್ಟೆಯಲ್ಲಿ ಪ್ರವೇಶವಿಲ್ಲ. ’ ಎಂದು ವಿವರಿಸಿದರು.
‘ದಿನಕ್ಕೆ 160 ಲಾರಿ ಬರಲಿದ್ದು, ಲಾರಿಗಳ ನಿಲುಗಡೆಗೆ 10 ಎಕರೆ ಪ್ರತ್ಯೇಕ ಜಾಗ ನಿಗದಿಪಡಿಸಲಾಗಿದೆ. ಚಾಲಕರು ಮತ್ತು ಕ್ಲೀನರ್ಗಳು ಅಲ್ಲಿಯೇ ಇರಬೇಕು. ಅವರಿಗೆ ಊಟ ಮತ್ತು ಶೌಚಾಲಯಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಮಾರುಕಟ್ಟೆಗೆ ಯಾವ ಲಾರಿ ಬರಬೇಕೆಂದು ಧ್ವನಿವರ್ಧಕದ ಮೂಲಕ ಸೂಚಿಸಿದ ನಂತರ ಆ ಲಾರಿ ಮಾತ್ರ ಮಾರುಕಟ್ಟೆಗೆ ಬಂದು ಮಾವು ಸರಕು ತುಂಬಿಸಿಕೊಂಡು ಹೋಗಬೇಕು’ ಎಂದು ಹೇಳಿದರು.
‘ಶ್ರೀನಿವಾಸಪುರ ಮಾರುಕಟ್ಟೆಗೆ
ಹೊರ ರಾಜ್ಯದ ಮಾವು ತರಲು ಅವಕಾಶವಿಲ್ಲ. ಜಿಲ್ಲೆಯ ರೈತರ ತೋಟಗಳಿಂದ ಬರುವ ಮಾವಿಗೆ ಮಾತ್ರ ಆದ್ಯತೆ. ಲಾರಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದ ನಂತರವಷ್ಟೇ ಮಾರುಕಟ್ಟೆಗೆ ಬಿಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಸಿಬ್ಬಂದಿ ನೇಮಕ: ‘ಮಾರುಕಟ್ಟೆಗೆ ಯಾವ ರೈತರು ಮಾವು ತರಬೇಕು ಎಂಬ ಬಗ್ಗೆ ತಿಳಿಸಲು ಶಿಕ್ಷಕರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ನೇಮಿಸಲಾಗಿದೆ. ಇವರು ಯಾವ ರೈತರು ಯಾವ ದಿನ ಮಾವು ಕಟಾವು ಮಾಡಬೇಕೆಂದು ಮಾರ್ಗದರ್ಶನ ಮಾಡುತ್ತಾರೆ’ ಎಂದು ಸಂಸದ ಎಸ್.ಮುನಿಸ್ವಾಮಿ ಮಾಹಿತಿ ನೀಡಿದರು.
‘ಪ್ರತಿನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 11ರವರೆಗೆ
ಮಾತ್ರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಯಾವುದೇ ಅವಘಡ ಸಂಭವಿಸದಂತೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಲಿದೆ’ ಎಂದರು.
ನೋಂದಣಿ ಕಡ್ಡಾಯ: ‘ಮಾವು ವರ್ತಕರು ಎಪಿಎಂಸಿ ಹಾಗೂ ತಾಲ್ಲೂಕು ಆಡಳಿತದ ಬಳಿ ನೋಂದಣಿ ಮಾಡಿಸುವುದು ಕಡ್ಡಾಯ. ಮಾವಿನ ಆನ್ಲೈನ್ ಮಾರಾಟಕ್ಕೂ ಅವಕಾಶ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ವ್ಯಾಪಾರಿಗಳು, ಮಂಡಿ ಮಾಲೀಕರು, ರೈತರು ಸಹಕಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮನವಿ ಮಾಡಿದರು.
ಶಾಸಕ ಕೆ.ಶ್ರೀನಿವಾಸಗೌಡ, ಜಿ.ಪಂ ಸಿಇಒ ಎಚ್.ವಿ.ದರ್ಶನ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಹಾಜರಿದ್ದರು.
ಶ್ರೀನಿವಾಸಪುರದಲ್ಲಿ ವಹಿವಾಟು ಮೇ 30ರಿಂದ ಆರಂಭವಾಗಲಿದ್ದು, ಲಾರಿ ಚಾಲಕರು ಮತ್ತು ಕ್ಲೀನರ್ಗಳಿಗೆ ಪಾಸ್ ನೀಡುತ್ತೇವೆ – ಸಿ.ಸತ್ಯಭಾಮ, ಜಿಲ್ಲಾಧಿಕಾರಿ