ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಸಂಚಾರಿ ಆರೋಗ್ಯ ವಾಹನ ಸೇವೆ ಆರಂಭಿಸಿ, ಪ್ರತಿ ಪಂಚಾಯಿತಿಗೊಂದು ಫೀವರ್ ಕ್ಲಿನಿಕ್ ತೆರೆಯಬೇಕೆಂದು ಒತ್ತಾಯಿಸಿ ರೈತಸಂಘದಿಂದ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೊರೊನಾ ವೈರಸ್ ನೆಪದಲ್ಲಿ ಎಗ್ಗಿಲ್ಲದೆ ನಾಯಿಕೊಡೆಗಳಂತೆ ಸುಮಾರು 336 ನಕಲಿ ಕ್ಲಿನಿಕ್‍ಗಳು ಆರಂಭವಾಗಿದ್ದು, ಅವರನ್ನು ಕೇಳುವವರೇ ಇಲ್ಲದಾಗಿದೆ. ವಿಧಿ ಇಲ್ಲ ಎನ್ನುವಂತೆ ಆ ಭಾಗಗಳ ಗ್ರಾಮೀಣ ಜನರು ನಕಲಿ ಕ್ಲಿನಿಕ್‍ಗಳ ಮೊರೆ ಹೋಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ನಾನಾ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ ಎಂದು ದೂರಿದರು.
ರಮೇಶ್‍ಕುಮಾರ್ ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್‍ಗಳ ವಿರುದ್ಧ ಕ್ರಮಕೈಗೊಂಡಿದ್ದರು. ಆದರೆ ಈಗ ತಾಲೂಕು ವೈದ್ಯಾಧಿಕಾರಿಗಳು ನಕಲಿ ಕ್ಲಿನಿಕ್‍ಗಳ ವಿಇರುದ್ಧ ಕ್ರಮಕೈಗೊಳ್ಳುವ ಬದಲು ಅವರಿಂದ 20-25 ಸಾವಿರ ಪ್ರತಿ ತಿಂಗಳು ಹಣ ಪಡೆದುಕೊಳ್ಳುತ್ತಿದ್ದು, ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಕೋವಿಡ್ 19 ಬಂದ ನಂತರ ನೆಗಡಿ, ಕೆಮ್ಮು ಬಂದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ವೈದ್ಯರು, ಸಿಬ್ಬಂದಿ ಸೂಚಿಸುತ್ತಿದ್ದಾರೆ ಹೊರತು ರೋಗಿಗಳನ್ನು ಯಾರೂ ಮುಟ್ಟುತ್ತಿಲ್ಲ.
ಹೆರಿಗೆ ನೋವು ಬಂದಾಗ ಆಸ್ಪತ್ರೆಗಳಿಗೆ ತೆರಳಿದರೂ ಇದೇ ರೀತಿ ಸಮಸ್ಯೆಯಾಗುತ್ತಿದೆ. ಡೆಂಗ್ಯೂ, ನ್ಯುಮೋನಿಯಾ ಸೇರಿದಂತೆ ವಿಷಯಶೀತ ಜ್ವರಗಳಿಂದ ಅನೇಕರು ಮೃತಪಡುತ್ತಿದ್ದಾರೆಯೇ ವಿನಃ ಕೋವಿಡ್‍ನಿಂದಾಗಿ ಯಾರೂ ಸಾವನ್ನಪ್ಪುತ್ತಿಲ್ಲ. ಡೆಂಗ್ಯೂ, ನ್ಯುಮೋನಿಯಾ ಸೇರಿದಂತೆ ವಿಷಯಶೀತ ಜ್ವರಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ವೈದ್ಯರು ವಿಫಲವಾಗಿರುವುದರಿಂದಾಗಿ ಮೃತಪಡುತ್ತಿದ್ದು, ವಿನಾಕಾರಣ ಕೊರೊನಾ ಎಂದು ಹೆಸರಿಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಅವ್ಯವಸ್ಥೆಯನ್ನು ಸರಿಪಡಿಸಲು ಜಿಲ್ಲಾದ್ಯಂತ ಜಾಗೃತಿ ವಾಹನ ಸಂಚರಿಸಿ ಅರಿವು ಮೂಡಿಸಲು ಕ್ರಮಕೈಗೊಳ್ಳಬೇಕು. ಒಟ್ಟಾರೆ ಜಿಲ್ಲಾದ್ಯಂತ ಕೋವಿಡ್-19 ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವವರೆಗೂ ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಸಂಚಾರಿ ಆರೋಗ್ಯ ವಾಹನ ಸೇವೆ ಆರಂಭಿಸುವ ಜೊತೆಗೆ ಪ್ರತಿ ಪಂಚಾಯಿತಿಗೊಂದು ಫೀವರ್ ಕ್ಲಿನಿಕ್ ತೆರೆಯಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕ್ಷಯಾರೋಗ ನಿಯಂತ್ರಣಾಧಿಕಾರಿ ಡಾ.ಜಗದೀಶ್, ನಕಲಿ ಕ್ಲಿನಿಕ್‍ಗಳಲ್ಲಿನ ವೈದ್ಯರು ನೀಡುವ ಚಿಕಿತ್ಸೆಯಿಂದಾಗಿ ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು, ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಿಗೆ ಚಿಕ್ಕ ವಯಸ್ಸಿನಲ್ಲೇ ಒಳಗಾಗುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮನವಿ ನೀಡುವಾಗ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ವಿ.ನಳಿನಿ, ಬಂಗಾರಪೇಟೆ ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಸ್ವಸ್ತಿಕ್ ಶಿವು, ಚಾನ್‍ಪಾಷ, ಜಮೀರ್ ಅಹಮದ್, ಕಿರಣ್, ಮುನೀರ್ ಮತ್ತಿತರರು ಉಪಸ್ಥಿತರಿದ್ದರು.