ವರದಿ:ಶಬ್ಬೀರ್ ಅಹ್ಮದ್
ಕೆ.ಸಿ. ವ್ಯಾಲಿ ನೀರು ಅಂತರ್ಜಲ ವೃದ್ಧಿಗಾಗಿ ಮಾತ್ರ: ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ -ಶ್ರೀ ಕೃಷ್ಣ ಬೈರೇಗೌಡ
ಕೋಲಾರ: ಜೂನ್ 01 ಕೆ.ಸಿವ್ಯಾಲಿಯ ಸಂಸ್ಕರಿಸಿದ ನೀರು ಜಿಲ್ಲೆಯ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮಾತ್ರ ಉದ್ದೇಶಿಸಿದ್ದು, ಸಾರ್ವಜನಿಕರು ಇದನ್ನು ನೇರವಾಗಿ ಕೃಷಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ. ಇದನ್ನು ಉಲ್ಲಂಘಿಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ಎಚ್ಚರಿಸಿದರು.
ಇಂದು ಜಿಲ್ಲೆಯ ವಿಶ್ವನಗರ, ಪರ್ಜೇನಹಳ್ಳಿ ಹಾಗೂ ಹೊಲೇರಹಳ್ಳಿಗಳಲ್ಲಿ ನಿರ್ಮಿಸಿರುವ ಚೆಕ್ ಡ್ಯಾಂಗಳು ಹಾಗೂ ಕೆ.ಸಿ ವ್ಯಾಲಿ ನೀರಿನ ಹರಿವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು.
ಕೆ.ಸಿ ವ್ಯಾಲಿ ನೀರಿನ ಅನ್ಯ ಬಳಕೆ ತಡೆಯಲು ಜಾಗೃತ ದಳ ರಚನೆ: ಕೆ.ಸಿ ವ್ಯಾಲಿ ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಮುಂಜಾಗ್ರತೆ ವಹಿಸಲು ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸೇರಿದಂತೆ ಅಧಿಕಾರಿಗಳ ಜಾಗೃತ ದಳವನ್ನು ರಚಿಸಲಾಗುವುದು. ಕೆ ಸಿ ವ್ಯಾಲಿ ನೀರನ್ನು ಕೃಷಿ ಹಾಗೂ ಇತರೆ ಉದ್ದೇಶಗಳಿಗೆ ಸಾರ್ವಜನಿಕರು ನೇರವಾಗಿ ಬಳಕೆ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದ ಅವರು, ಸಾರ್ವಜನಿಕರು ಅಂತಹ ಸಂದರ್ಭಗಳಿಗೆ ಎಡೆಮಾಡಿಕೊಡಬಾರದು ಎಂದು ಮನವಿ ಮಾಡಿದರು.
ನರಸಾಪುರ ಗ್ರಾಮದಿಂದ ಕೊಳಚೆ ನೀರು ಕೆರೆಗೆ ಬಂದು ಸೇರುತ್ತಿದ್ದು, ಇದರಿಂದ ನೀರು ಕಲುಷಿತವಾಗುತ್ತಿದೆ ಇದರ ಪ್ರಭಾವ ಕೆ.ಸಿ ವ್ಯಾಲಿಯ ನೀರಿನ ಗುಣಮಟ್ಟ ಸರಿಯಿಲ್ಲ ಎಂದು ತಪ್ಪು ಮಾಹಿತಿ ಹಬ್ಬಿಸುವ ಸಂದರ್ಭ ಉದ್ಭವವಾಗುತ್ತಿದೆ. ಆದ್ದರಿಂದ ಕೂಡಲೇ ನರಸಾಪುರ ಗ್ರಾಮ ಪಂಚಾಯಿತಿಯ ಕೆರೆಯ ಹೊರವಲಯದಲ್ಲಿ ಕಾಲುವೆ ನಿರ್ಮಿಸಿ ಕೊಳಚೆ ನೀರನ್ನು ಬೇರೆ ಕಡೆ ಹರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಹಂತ ಹಂತವಾಗಿ ನೀರಿನ ಪ್ರಮಾಣ ಹೆಚ್ಚಳ: ಕೆ.ಸಿ ವ್ಯಾಲಿ ನೀರು ಪ್ರಾರಂಭದಲ್ಲಿ ಜಿಲ್ಲೆಗೆ ಹರಿಯುವಾಗ ಪ್ರತಿದಿನ 100 ಎಂ.ಎಲ್.ಡಿ ಹರಿಸಲಾಗುತ್ತಿತ್ತು. ಪ್ರಸ್ತುತ 250 ಎಂ.ಎಲ್.ಡಿ ನೀರನ್ನು ಹರಿಸುತ್ತಿದ್ದು, ಇದನ್ನು ಜೂನ್ 10 ರ ವೇಳೆಗೆ 290 ಎಂ.ಎಲ್.ಡಿ ಹಾಗೂ ಜೂನ್ ಅಂತ್ಯಕ್ಕೆ 330 ಎಂಎಲ್‍ಡಿ ಅಷ್ಟು ಹೆಚ್ಚು ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
2ನೇ ಹಂತದ ಕಾಮಗಾರಿ: ಕೆ.ಸಿ ವ್ಯಾಲಿಯ ಮೊದಲನೆ ಹಂತದ ಕಾಮಗಾರಿಯಲ್ಲಿ 136 ಕೆರೆಗಳನ್ನು ಡಿಸೆಂಬರ್ ಅಂತ್ಯದ ವೇಳೆಗೆ ತುಂಬಿಸಲಾಗುವುದು. ಇದಲ್ಲದೆ 2 ನೇ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, 450 ಕೋಟಿ ವೆಚ್ಚದಲ್ಲಿ 230 ಕೆರೆಗಳಿಗೆ ನೀರನ್ನು ಪಂಪ್ ಮಾಡುವ ಮೂಲಕ ತುಂಬಿಸಲಾಗುವುದು. ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ಟೆಂಡರ್ ಕರೆಯಲಾಗಿದೆ ಎಂದರು.
ಮೀನುಗಾರಿಕೆಗೆ ಉತ್ತೇಜನ: ಕೆ.ಸಿ ವ್ಯಾಲಿ ನೀರಿನಿಂದ ಜಿಲ್ಲೆಯ ಕೆರೆಗಳು ತುಂಬಲಿದ್ದು, ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಗೆ ಮೀನುಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಮೀನು ಮರಿಗಳನ್ನು ಬಿಟ್ಟು ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಲಾಗುವುದು. ಇದರಿಂದ ಪ್ರತಿ ಕೆರೆಯಿಂದ ಕನಿಷ್ಠ 10 ಕುಟುಂಬಗಳು ಜೀವನ ನಿರ್ವಹಣೆ ಮಾಡಬಹುದಲ್ಲದೆ ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಕೆರೆಯಲ್ಲಿ ಮೀನುಗಳು ಇರುವುದರಿಂದ ನೀರು ಸಹ ಶುದ್ಧವಾಗಿಯೂ ಇರುತ್ತದೆ ಎಂದು ತಿಳಿಸಿದರು.
ಪಾರ್ಕ್‍ಗಳ ನಿರ್ಮಾಣ: ನರಸಾಪುರ ಮತ್ತು ಕೋಲಾರದ ಅಮಾನೀಕೆರೆ ಸುತ್ತ ವಾಕಿಂಗ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಇದರಿಂದ ಇವು ಪ್ರೇಕ್ಷಣೀಯ ಸ್ಥಳಗಳಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪಾರ್ಕ್‍ಗಳಲ್ಲಿ ಸಿ.ಎಸ್.ಆರ್ ಅನುದಾನ ಅಥವಾ ನರೇಗಾ ಯೋಜನೆಯಲ್ಲಿ ನಿರ್ಮಿಸುವಂತೆ ಜಿಲ್ಲಾ ಪಂಚಾಯತ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ಹಾನಿಗೆ 3.27 ಕೋಟಿ ಬಿಡುಗಡೆ: ಜಿಲ್ಲೆಯಲ್ಲಿ ಮಳೆಯಿಂದ 1800 ರೈತರ ತೋಟಗಾರಿಕೆ ಬೆಳೆಗಳು ಹಾನಿಯುಂಟಾಗಿದ್ದು, ಈ ಸಂಬಂಧ ಪರಿಹಾರ ವಿತರಿಸಲು ಈಗಾಗಲೇ 3.27 ಕೋಟಿ ಬಿಡುಗಡೆಯಾಗಿದೆ. ಈ ಹಣವನ್ನು ಜಿಲ್ಲಾಧಿಕಾರಿಗಳು, ತಾಶೀಲ್ದಾರರುಗಳಿಗೆ ಬಿಡುಗಡೆ ಮಾಡಿದ್ದು, ಒಂದು ವಾರದೊಳಗೆ ಫಲಾನುಭವಿಗಳಿಗೆ ಹಣವನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು, ಗಾಳಿ ಮತ್ತು ಮಿಂಚು ಜಾಸ್ತಿಯಿದೆ. ಏಪ್ರಿಲ್ 18 ರಿಂದ ಏಪ್ರಿಲ್ 24 ರವರೆಗೆ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿ ಕುರಿತು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿತ್ತು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹಂತ ಹಂತವಾಗಿ ಸುಧಾರಣೆಯಾಗುತ್ತಿದ್ದು, ಟ್ಯಾಂಕರ್ ಸೇವೆಯ ಬಿಲ್ಲುಗಳನ್ನು ಮೇ 15 ರವರೆಗೆ ಪಾವತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ. ಒಣಮೇವನ್ನು ತರಿಸಿ ಹೊಗಳಗೆರೆಯಲ್ಲಿ ಶೇಖರಿಸಿ ಈಗಾಗಲೇ ರೈತರುಗಳಿಗೆ ವಿತರಣೆ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಜಿ. ಜಗದೀಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಈ ಆರ್ಥಿಕ ವರ್ಷದ ಅಂತ್ಯಕ್ಕೆ 1400 ಚೆಕ್‍ಡ್ಯಾಂಗಳನ್ನು ನಿರ್ಮಿಸುವ ಗುರಿಹೊಂದಿದ್ದು, ಈಗಾಗಲೇ 300 ಚೆಕ್‍ಡ್ಯಾಂಗಳನ್ನು ನಿರ್ಮಿಸಲಾಗಿದೆ. ಪ್ರತಿ 01 ಕಿ.ಮೀ. ವ್ಯಾಪ್ತಿಗೆ 01 ಚೆಕ್‍ಡ್ಯಾಂ ಅನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುವುದಲ್ಲದೆ ಬರಗಾಲದಲ್ಲಿ ನೀರು ಬಳಕೆಗೆ ಲಭ್ಯವಾಗುತ್ತದೆ ಎಂದರು.
ಮೀನುಗಾರಿಕೆ ಇಲಾಖೆಯ ನಿರ್ದೇಶಕರಾದ ರಾಮಕೃಷ್ಣ ಅವರು ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ 2500 ಕ್ಕೂ ಹೆಚ್ಚು ಕೆರೆಗಳಿದ್ದು, 40 ಹೆಕ್ಟೇರಿಗಿಂತ ಹೆಚ್ಚಿನ ವಿಸ್ತೀರ್ಣವಿರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ಅದಕ್ಕಿಂತ ಕಡಿಮೆ ವಿಸ್ತೀರ್ಣವಿರುವ ಕೆರೆಗಳನ್ನು ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಬರುತ್ತವೆ. ಬೇತಮಂಗಲ ಮತ್ತು ಮಾರ್ಕಂಡೇಯ ಡ್ಯಾಂಬಳಿ ಮೀನುಮರಿ ಸಾಕಾಣಿಕೆ ಕೇಂದ್ರಗಳಿದ್ದು, ಈ 2 ಕೇಂದ್ರಗಳಿಂದ ಮೀನುಮರಿ ಉತ್ಪಾದಿಸಿ ಟೆಂಡರ್ ಮೂಲಕ ಮಾರಾಟ ಮಾಡಲಾಗುವುದು. ಕೆರೆಯಲ್ಲಿ ಮೀನು ಸಾಕಾಣೆ ಮಾಡಲು ಮೀನುಗಾರರ ಸಹಕಾರ ಸಂಘಗಳಿಗೆ ಹಾಗೂ ಹರಾಜು ಮೂಲಕ ಟೆಂಡರ್ ನೀಡಲಾಗುವುದು. ಗ್ರಾಮ ಪಂಚಾಯಿತಿ ಕೆರೆಗಳಿಗೆ ಗ್ರಾಮ ಪಂಚಾಯತ್‍ಗಳೆ ಸಂಪೂರ್ಣ ಹಕ್ಕನ್ನು ಹೊಂದಿದ್ದು, ಅವರೇ ಅವುಗಳ ಉಸ್ತುವಾರಿ ನೋಡಿಕೊಳ್ಳುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ|| ರೋಹಿಣಿ ಕಟೋಚ್ ಸಫೆಟ್, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.