ಕೆಜಿಎಫ್: ಗಣೇಶನನ್ನು ವಿಸರ್ಜನೆ ಮಾಡಲು ಹೊರಟ ಆರು ಪುಟ್ಟ ಮಕ್ಕಳು ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ಕ್ಯಾಸಂಬಳ್ಳಿ ಸಮೀಪದ ಮರದಘಟ್ಟದಲ್ಲಿ ನಡೆದಿದೆ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

ಕೆಜಿಎಫ್: ಗಣೇಶನನ್ನು ವಿಸರ್ಜನೆ ಮಾಡಲು ಹೊರಟ ಆರು ಪುಟ್ಟ ಮಕ್ಕಳು ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ಕ್ಯಾಸಂಬಳ್ಳಿ ಸಮೀಪದ ಮರದಘಟ್ಟದಲ್ಲಿ ನಡೆದಿದೆ

 

ಕೆಜಿಎಫ್: ಗಣೇಶನನ್ನು ವಿಸರ್ಜನೆ ಮಾಡಲು ಹೊರಟ ಆರು ಪುಟ್ಟ ಮಕ್ಕಳು ಕುಂಟೆಯಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ  ಸೆಪ್ಟಂಬರ್ 10 ರಂದು  ಕ್ಯಾಸಂಬಳ್ಳಿ ಸಮೀಪದ ಮರದಘಟ್ಟದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೈಷ್ಣವಿ (12), ರೋಹಿತ್ (10), ತೇಜಶ್ರೀ (11), ರಕ್ಷಿತ (8), ವೀಣಾ ( 11), ಧನುಷ್ (7) ಮೃತಪಟ್ಟವರು.
ಶಾಲೆಗೆ ರಜ ಇದ್ದ ಕಾರಣ ಮಕ್ಕಳೆಲ್ಲಾ ಕೂಡಿ ಮಣ್ಣಿನ ಗಣೇಶನನ್ನು ಮಾಡಿದರು. ಮಕ್ಕಳಾಟವಾಡಿ ಗ್ರಾಮದ ಹೊರವಲಯದ ಹುಣಸೇಮರದ ಬಳಿ ಗಣೇಶನನ್ನು ಇಟ್ಟು ಪೂಜೆ ಮಾಡುವ ಆಟ ಆಡಿದರು. ನಂತರ ಮೂರು ಗಂಟೆ ಸಮಯದಲ್ಲಿ ಗಣೇಶನನ್ನು ತೆಗೆದುಕೊಂಡು ಸುಮಾರು ಅರ್ಧ ಕಿ.ಮೂ ದೂರವಿರುವ ಕುಂಟೆಗೆ ವಿಸರ್ಜನೆ ಮಾಡಲು ಹೋದರು.
ಕುಂಟೆ ಸುಮಾರು ಹತ್ತು ಅಡಿ ಗಿಂತಲೂ ಹೆಚ್ಚು ಆಳವಿದ್ದ ಕಾರಣ ಮಕ್ಕಳು ನೀರಿಗೆ ಹೋದ ತಕ್ಷಣ ಮುಳುಗಿದರು. ಆರು ಮಕ್ಕಳ ಜೊತೆ ಬಂದಿದ್ದ ಇಬ್ಬರು ಮಕ್ಕಳು ಮುಳುಗುತ್ತಿದುದನ್ನು ಕಂಡು ಓಡಿಹೋದರು. ಅಲ್ಲಿಯೇ ಇದ್ದ ರೈತ ಗಂಟಪ್ಪ ಎಂಬಾತ ತಕ್ಷಣವೇ ಧಾವಿಸಿ ರಕ್ಷಿಸಲು ಬಂದರೂ ಪ್ರಯೋಜನವಾಗಲಿಲ್ಲ. ಆತಫೋನ್ ಮಾಡಿ ಊರಿನವರಿಗೆ ವಿಷಯ ಮುಟ್ಟಿಸಿದರು.
ಆರು ಮಕ್ಕಳು ಕೆರೆಯಲ್ಲಿ ಪ್ರಾಣ ತ್ಯಜಿಸಿರುವುದನ್ನು ಕಂಡ ಗ್ರಾಮಸ್ಥರು ಗೋಳೋ ಎಂದು ಅಳಲಾರಂಭಿಸಿದರು. ತನ್ನ ಇಬ್ಬರೂ ಮಕ್ಕಳಾದ ರಕ್ಷಿತ ಮತ್ತು ತೇಜಶ್ರೀಯನ್ನು ಕಳೆದುಕೊಂಡು ಉಷ, ಕಳೆದ ವರ್ಷವಷ್ಟೇ ತನ್ನ ಗಂಡ ಜಯರಾಮರೆಡ್ಡಿಯವರನ್ನು ಕಳೆದುಕೊಂಡಿದ್ದರು. ಉಷ ಕ್ಯಾಸಂಬಳ್ಳಿಯಲ್ಲಿ ಹೋಟೆಲ್‍ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾರೆ.
ದೂರದ ಶಿರಡಿಗೆ ಸಾಯಿಬಾಬ ದರ್ಶನ ಮಾಡಲು ಹೋಗಿದ್ದ ರವಿರೆಡ್ಡಿ ತನ್ನ ಇಬ್ಬರು ಮಕ್ಕಳಾದ ವೈಷ್ಣವಿ ಮತ್ತು ರೋಹಿತ್‍ನನ್ನು ಕಳೆದುಕೊಂಡಿದ್ದಾರೆ.
ಆಕ್ರೋಶ: ಗ್ರಾಮದ ಹೊರಭಾಗದಲ್ಲಿ ಮರಳು ಧಂಧೆ ವ್ಯಾಪಕವಾಗಿ ನಡೆಯುತ್ತಿದೆ. ಮರಳು ತೆಗೆದ ಜಾಗದಲ್ಲಿ ನೀರು ನಿಂತಿದೆ. ಅದನ್ನು ಅರಿಯದ ಕಂದಮ್ಮಗಳು ನೀರಿಗೆ ಮುಳುಗಿ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಪೊಲೀಸರನ್ನು ದೂಷಿಸುತ್ತಿದ್ದ ಘಟನೆ ಕೂಡ ನಡೆಯಿತು.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಮಹಮದ್ ಸುಜೀತ, ಡಿವೈಎಸ್ಪಿ ಬಿ.ಎಲ್.ಶ್ರೀನಿವಾಸಮೂರ್ತಿ, ಸರ್ಕಾರಿ ನೌಕರರ ಸಂಘದ ರವಿರೆಡ್ಡಿ, ಶಿಕ್ಷಣ ಇಲಾಖೆಯ ಮದಿವಳಗನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಮುಖಂಡ ಮೋಹನ್‍ಕೃಷ್ಣ ಭೇಟಿ ನೀಡಿ ಸಾಂತ್ವನ ಮಾಡಿದರು.
ಕೆಜಿಎಫ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.