ಕೆಜಿಎಫ್ : ಆರೋಪಿಯ ಬಂಧನ, ಕಳವು ಮಾಲು ವಶ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

 

 

ಕೆಜಿಎಫ್ : ಆರೋಪಿಯ ಬಂಧನ, ಕಳವು ಮಾಲು ವಶ

 

 

 

ಕೆಜಿಎಫ್., ಮೇ. 29 : ಕೆಜಿಎಫ್ ಪೊಲೀಸ್ ಜಿಲ್ಲೆಯ ಮಾರಿಕುಪ್ಪಂ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಇತ್ತೀಚೆಗೆ ನಡೆದಿದ್ದ ಮನೆ ಕಳ್ಳತನಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಿ, ರೂ: 3.15 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ ಅವರು ತಿಳಿಸಿದ್ದಾರೆ.
ವಿಲೇಜ್ ಮಾರಿಕುಪ್ಪಂನಲ್ಲಿ ಆರ್. ಮೂರ್ತಿ ಅವರ ಮನೆಯವರೆಲ್ಲರೂ ಮೇಲಿನ ಮಹಡಿಯಲ್ಲಿ ಮಲಗಿದ್ದಾಗ, ಕೆಳಅಂತಸ್ತಿನ ಮನೆಯ ಬೀಗ ಒಡೆದು, ಮನೆಯಲ್ಲಿದ್ದು ಚಿನ್ನಾಭರಣ, ನಗದನ್ನು ದೋಚಿ ಪರಾರಿಯಾಗಿದ್ದರ ಸಂಬಂಧ ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಉರಿಗಾಂ ಸಿಪಿಐ ಮುಸ್ತಾಕ್‍ಪಾಷ ನೇತೃತ್ವದ ಅಪರಾಧ ಪತ್ತೆ ತಂಡದವರು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯು ಪತ್ತೆಯಾಗಿದ್ದು, ಮಾರಿಕುಪ್ಪಂ ಗ್ರಾಮದ ಹೆಚ್.ಗಣೇಶ್ (28 ವರ್ಷ) ಎಂಬಾತನನ್ನು ಬಂಧಿಸಿ, ಆತನಿಂದ ರೂ: 3 ಲಕ್ಷ ಮೌಲ್ಯದ ಚಿನ್ನಾಭರಣಗಳು, ನಗದು ರೂ: 14,400 ಗಳನ್ನು ವಶಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜೀತ ಅವರು ವಿವರಿಸಿದ್ದಾರೆ.