ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕುಷ್ಟರೋಗ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ- ಕೆ. ಶ್ರೀನಿವಾಸಗೌಡ
ಕೋಲಾರ: ಕುಷ್ಟರೋಗ ಮುಕ್ತ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆಯಲ್ಲದೆ ವೈದ್ಯಾಧಿಕಾರಿಗಳು ಹೆಚ್ಚು ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಶಾಸಕರಾದ
ಕೆ. ಶ್ರೀನಿವಾಸಗೌಡ ಅವರು ತಿಳಿಸಿದರು.
ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಕುಷ್ಟರೋಗ ಪ್ರಕರಣ ಪತ್ತೆಹಚ್ಚುವ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುಷ್ಟರೋಗವು ಪ್ರಾಚೀನ ಕಾಲದಿಂದ ಬಂದ ಕಾಯಿಲೆಯಾಗಿದ್ದು, ಸಾರ್ವಜನಿಕರು ಯಾವುದೇ ಸಂಕೋಚ, ತಾರತಮ್ಯವಿಲ್ಲದೆ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳಾದರೂ ಕುಷ್ಟರೋಗ ನಿವಾರಣೆಯಾಗದಿರುವುದು ಬೇಸರದ ಸಂಗತಿಯಾಗಿದೆ. ತರಕಾರಿಗಳು, ಸೊಪ್ಪು, ಹಾಲು, ಮೊಟ್ಟೆ, ಮೊಳಕೆ ಕಾಳುಗಳು, ಇನ್ನಿತರ ಪೌಷ್ಠಿಕ ಆಹಾರಗಳನ್ನು ಪ್ರತಿಯೊಬ್ಬರೂ ಸೇವಿಸುವ ಮೂಲಕ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಯಾದ ಡಾ. ನಾರಾಯಣಸ್ವಾಮಿ ಅವರು ಮಾತನಾಡಿ, ಕುಷ್ಟರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನವನ್ನು ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 23 ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನವು 14 ದಿನಗಳ ಕಾಲ ನಡೆಯಲಿದ್ದು ಆಶಾಕಾರ್ಯಕರ್ತೆಯರು ಮನೆ-ಮನೆಗೆ ಭೇಟಿ ನೀಡಿ ತಪಾಸಣೆ ಮಾಡಲಿದ್ದಾರೆ. ಇದರ ಉದ್ದೇಶ ಸಾರ್ವಜನಿಕರು ಕುಷ್ಟರೋಗವನ್ನು ತಪಾಸಣೆ ಮಾಡಿಸಿಕೊಳ್ಳಲು ಮುಂದೆ ಬರದೇ ಗೌಪ್ಯವಾಗಿಡುತ್ತಿರುವುದರಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಕುಷ್ಟರೋಗದ ಲಕ್ಷಣಗಳು ತಿಳಿ-ಬಿಳಿ ತಾಮ್ರ ವರ್ಣದ ಮಚ್ಚೆಗಳು, ಸ್ಪರ್ಶ ಜಾÐನ ಇಲ್ಲದಿರುವುದು, ನರಗಳ ಊತ, ಮಚ್ಚೆಗಳ ಮೇಲೆ ಕೂದಲು ಇಲ್ಲದಿರುವುದು, ಮಾಂಸ ಖಂಡಗಳ ನಿಷ್ಕ್ರಿಯತೆ, ಮೂಗು ಚಪ್ಪಟೆಯಾಗುವುದು, ಕಣ್ಣು ಮುಚ್ಚಲು ಆಗದಿರುವುದು, ಇನ್ನಿತರ ಅಂಶಗಳು ಕಂಡುಬಂದರೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 16,26,292 ಜನರಿದ್ದು, 3,49,481 ಮನೆಗಳಿವೆ. ಹಾಗಾಗಿ 1261 ತಂಡಗಳನ್ನು ನೇಮಿಸಿದು,್ದ ಆ ತಂಡಗಳಲ್ಲಿ 2522 ಮಂದಿ ಆಶಾಕಾರ್ಯಕರ್ತೆಯರಿದ್ದಾರೆ. 255 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ದಿನ 20 ಮನೆಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಎಲ್ಲರೂ ಸಹಕರಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಈ ವರ್ಷ 16 ಪ್ರಕರಣಗಳು ಪತ್ತೆಯಾಗಿದ್ದು, ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಕುಷ್ಠರೋಗ ನಿಯಂತ್ರಣಾಧಿಕಾರಿಯಾದ ಡಾ. ರೇಖಾ ಅವರು ಮಾತನಾಡಿ, ಸರ್ಕಾರವು 2025 ರೊಳಗೆ ಭಾರತವನ್ನು ಕುಷ್ಟರೋಗ ಮುಕ್ತ ದೇಶವನ್ನಾಗಿ ಮಾಡಲು ಪಣತೊಡಲಾಗಿದೆ. ತಪಾಸಣೆಯ ಸಮಯದಲ್ಲಿ ಕುಷ್ಠರೋಗ ಪ್ರಕರಣಗಳು ಪತ್ತೆಯಾದರೆ ಚಿಕಿತ್ಸೆ ನೀಡಲಾಗುವುದು. ಹಾಗಾಗಿ ಕುಷ್ಠರೋಗ ನಿರ್ಮೂಲನಾ ಆಂದೋಲನವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೌಷ್ಠಿಕ ಆಹಾರದ ಬಗ್ಗೆ ಸಾರ್ವಜನಿಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಡಾ.ಪ್ರೇಮ ಅವರು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಯಾದ ಡಾ.ವಿಜಯ್ಕುಮಾರ್, ತಾಲ್ಲೂಕು ಆರೋಗ್ಯ ಅಧಿಕಾರಿಯಾದ ಡಾ.ವಸಂತ್, ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿಯಾದ ಶಾಂತಮ್ಮ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ರಮ್ಯದೀಪಿಕಾ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ ಟಿ ಬಿ ಶ್ರೀನಿವಾಸ್, ಆರೋಗ್ಯ ಶಿಕ್ಷಣಾಧಿಕಾರಿಯಾದ ಪ್ರಸನ್ನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಡಾ.ಗೀತಾ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೈಲಾರಾಜ್, ಆಶಾಕಾರ್ಯಕರ್ತೆಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.