ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಾಗೃತಿ ವಹಿಸಿ- ಜೆ.ಮಂಜುನಾಥ್

ಕೋಲಾರ, ಜೂನ್ 18 ಜಿಲ್ಲೆಯ 105 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಈ ಪೈಕಿ 45 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 60 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಾಗ್ರತಿ ವಹಿಸಿ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟ್ಯಾಂಕರ್ ಬಿಲ್‍ಗಳನ್ನು ಸಕಾಲದಲ್ಲಿ ಸಲ್ಲಿಸಿ, ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರದಂತೆ ಜಾಗೃತಿಯನ್ನು ವಹಿಸಬೇಕು ಎಂದು ಸೂಚಿಸಿದರು.
ಇತ್ತೀಚೆಗೆ ಮಳೆಯಾಗಿದ್ದು ಜಾನುವಾರುಗಳಿಗೆ ಒಂದಷ್ಟು ಮೇವು ಲಭ್ಯವಾಗುವಂತಾಗಿದೆ. ಮೇವಿನ ಸಮಸ್ಯೆ ಎದುರಾಗಬಾರದೆಂದು ಮಿನಿಕಿಟ್‍ಗಳನ್ನು ವಿತರಿಸಲಾಗುತ್ತಿತ್ತು. ಅದರಂತೆ ಮೇವಿನ ಸಂಸ್ಕರಿಸಿ ಇಡಲಾಗಿತ್ತು. ಇನ್ನೂ 13 ವಾರಕ್ಕೆ ಆಗುವಷ್ಟು ಮೇವಿನ ಲಭ್ಯತೆ ಇದೆ. ಹಾಗಾಗಿ ಯಾವುದೇ ರೀತಿಯ ಮೇವಿನ ಸಮಸ್ಯೆ ಇಲ್ಲವೆಂದು ಹೇಳಿದರು.
ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಮೂಲಕ ಯುವ ಜನತೆಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ಪಡೆದುಕೊಂಡವರಿಗೆ ಉದ್ಯೋಗಗಳನ್ನು ಕೊಡಿಸುವ ಕೆಲಸವನ್ನೂ ಆಯಾ ಸಂಸ್ಥೆಗಳು ಮಾಡಬೇಕಾಗಿದ್ದು ಇದನ್ನು ಸೂಕ್ತವಾಗಿ ಮಾಡಲಾಗುತ್ತಿದೆಯೇ ಎಂಬ ಕುರಿತು ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರ ಹಿತದೃಷ್ಟಿಯನ್ನು ಮನಗಂಡು ಸರ್ಕಾರ ಸಾಲಮನ್ನಾ ಮಾಡಲಾಗಿದ್ದು ಜಿಲ್ಲೆಗೆ ಸಂಬಂಧಿಸಿದಂತೆ ಬಹುತೇಕ ರೈತರ ಸಾಲಮನ್ನಾ ಆಗಿದೆ. ಕೆಲವು ರೈತರ ಸಾಲಮನ್ನಾ ಮಾಡಲು ಅವರುಗಳು ಪಡಿತರಚೀಟಿ ಮತ್ತು ಆಧಾರ್ ಕಾರ್ಡ್‍ಗಳನ್ನು ನೀಡಿರುವುದಿಲ್ಲ. ಹಾಗಾಗಿ ಬಾಕಿ ಇರುವ ರೈತರ ಸಾಲಮನ್ನಾವನ್ನು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಹಾಯ ಪಡೆದುಕೊಂಡು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳನ್ನು ಕೊರೆಯಿಸಲು ಕಾರ್ಯಾದೇಶ ನೀಡಲಾಗಿದ್ದು ಇನ್ನೂ ಕೆಲಸ ಮಾಡದೆ ಇರುವವರಿಗೆ ನೋಟೀಸ್ ನೀಡಿ, ಸಕಾಲ ಯೋಜನೆಯಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿ, ಪ್ರದಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನೋಂದಣಿ ಬಗ್ಗೆ ಎಲ್ಲಾ ರೈತರಿಗೆ ಮಾಹಿತಿನ್ನು ನೀಡಿ ನೋಂದಣಿ ಮಾಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು ಇಲಾಖಾವಾರು ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.