ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರಾಜಿ ಬೇಡ  – ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರಾಜಿ ಬೇಡ  – ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್

ಕೋಲಾರ: ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಪ್ರತಿ ಹಳ್ಳಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ರಾಜಿ ಆಗಬಾರದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ಅವರು ತಿಳಿಸಿದರು.
ಇಂದು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಖಾಸಗಿ ಬೋರ್‍ವೆಲ್‍ಗಳಿಂದ ನೀರು ಸರಬರಾಜು ಮಾಡಬೇಕು. ಖಾಸಗಿ ಬೋರ್‍ವೆಲ್‍ಗಳಲ್ಲಿ ನೀರು ಇಲ್ಲದಿದ್ದರೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಿ ಸಮಸ್ಯೆ ತಲೆದೂರದಂತೆ ಎಚ್ಚÀರಿಕೆ ವಹಿಸಬೇಕು ಎಂದು ತಿಳಿಸಿದರು. 
ಕೋಲಾರ ತಾಲ್ಲೂಕಿನ ಗದ್ದೆ ಕಣ್ಣೂರಿನ ರಾಗಿ ಖರೀದಿ ಕೇಂದ್ರದ ಕುರಿತು ದೂರುಗಳು ಬರುತ್ತಿದ್ದು ಖರೀದಿ ಅಧಿಕಾರಿಯನ್ನು  ಬದಲಾಯಿಸುವಂತೆ ಆಹಾರ ಇಲಾಖೆಗೆ ಸೂಚಿಸಿದರು. ಜಿಲ್ಲೆಯ ಹಲವು ಶಾಲೆಗಳು ಶಿಥಿಲಗೊಂಡಿವೆ ಈ ಶಾಲೆಗಳನ್ನು ದುರಸ್ಥಿಗೊಳಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಅಧಿಕಾರಿಗಳಿಗೆ ಸೂಚಿಸಿದರು.
ಕೋಲಾರ ನಗರದ ಬಾಲಕಿಯ ವಸತಿ ನಿಲಯದ ಬಗ್ಗೆ ಸರಿಯಾದ ಮಾಹಿತಿ ನೀಡಿ  ಎಂದ ಅವರು ಜಿಲ್ಲಾ ಪಂಚಾಯತಿ ವತಿಯಿಂದ ಬೇಟಿ ನೀಡಿ ಸಮಸ್ಯೆಗಳ ಬಗ್ಗೆ ವಿಚಾರಿಸುತ್ತೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವಸತಿ ನಿಲಯಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ ಎಂದು ಉಪ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯ ವಿಧ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಿಧ ವಿಧ್ಯಾರ್ಥಿ ನಿಲಯಗಳಲ್ಲಿ ಮೂಲ ಭೂತ ಸಮಸ್ಯೆಗಳು ಎದ್ದು ಕಾಣುತ್ತಿದ್ದು, ಈ ಅವ್ಯವಸ್ಥೆಯನ್ನು ಸರಿಮಾಡಬೇಕಾಗಿ ಸಮಾಜ ಕಲ್ಯಾಣ ಇಲಾಖೆಯ ಆಧಿಕಾರಿಗಳಿಗೆ ಸೂಚಿಸಿದರು. 
 ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿರುವ ವಿವಿಧ ಕಂಪನಿಗಳ ಹೆಚ್.ಆರ್‍ಗಳ ಸಭೆ ಕರೆದು ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕಂಪನಿಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ಜಿಲ್ಲಾ ಕೈಗಾರಿಕಾ ಆಧಿಕಾರಿಗಳಿಗೆ ಸೂಚಿಸಿದರು.
 ಇತ್ತಿಚೆಗೆ ಕರೋನ ವೈರಸ್ ಸಮಸ್ಯೆ ಕಂಡುಬಂದಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆ ಇರುವ ಕಾರಣ ಅವರಿಗೆ ಯಾವುದೇ ರೀತಿಯ ಸೋಂಕು ತಗಲದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಮಾಸ್ಕ್‍ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
 ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಹೆಚ್.ವಿ ದರ್ಶನ್ ಅವರು  ಮಾತನಾಡಿ, ಶಾಲೆಗಳ ದುರಸ್ಥಿಗೆ ಬಿಡುಗಡೆಯಾದ ಹಣ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ವಾಪಸ್ಸು ಹೋಗದಂತೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದರು. ಜಿಲ್ಲೆಯ ವಿವಿಧ ಶಾಲೆಯ ಕಟ್ಟಡಗಳು ಶಿಥಿಲಗೊಂಡಿವೆ ಇದರ ಬಗ್ಗೆ ಕ್ರಮಕೊಳ್ಳಬೇಕೆಂದು ಸೂಚಿಸಿದರು.
 ಕರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಬೇಕು, ಕರೋನಾ ಸೋಂಕು ಕಂಡು ಬಂದರೆ ತಪಾಸಣೆ ಮಾಡಬೇಕು. ಕೆಮ್ಮು, ಶೀತ ಈ ಸಂದರ್ಭದಲ್ಲಿ ಸಹಜ. ಕರೋನಾ ವೈರಸ್ ಸೋಂಕು ಉಂಟಾದರೆ ಎದೆಯಲ್ಲಿ ನೋವು, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಕರೋನಾ ಲಕ್ಷಣ ಕಂಡು ಬಂದ ತಕ್ಷಣ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 5 ಹಾಸಿಗೆ ಹಾಗೂ ಕೆ.ಜಿ.ಎಫ್ ನಲ್ಲಿ 10 ಹಾಸಿಗೆಳನ್ನು ಕರೋನಾ ಸೋಂಕಿತರಿಗೆ ಮೀಸಲಿಡಲಾಗಿದೆ ಎಂದು ಸೂಚಿಸಿದರು.
 ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಅವರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು.  ಸೀನುವಾಗ ಮತ್ತು ಕೆಮ್ಮುವಾಗ ಕೈಯನ್ನು ಅಡ್ಡ ಇಟ್ಟುಕೊಳ್ಳಬೇಕು. ಮಸ್ಕ್‍ಗಳನ್ನು ಅವಶ್ಯಕತೆ ಇರುವವರು ಮಾತ್ರ  ಧರಿಸಬೇಕು. ವಿನಾಕಾರಣ ಧರಿಸಿ ಸಾರ್ವಜನಿಕರಲ್ಲಿ ಭಯ ಉಂಟುಮಾಡಬಾರದು ಎಂದು ತಿಳಿಸಿದರು.
 ಕೃಷಿಹೊಂಡಗಳಲ್ಲಿ ಎರಡು ಕಡೆ ಹಗ್ಗಗಳನ್ನು ಬಿಟ್ಟರೆ ಆಕಸ್ಮಿಕವಾಗಿ ಹೊಂಡದಲ್ಲಿ ಬಿದ್ದರೂ ಮೇಲೆ ಬರಲು ಸಾಧ್ಯವಾಗುತ್ತದೆ. ಜೇನು ಸಾಕಾಣಿಕೆ ಇಲಾಖೆಯಿಂದ ತರಬೇತಿ ಪಡೆದಿರುವವರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಕುಡಿಯುವ ನೀರಗಾಗಿ ಈಗಾಗಲೇ ಖಾಸಗಿ ಬೋರ್ ವೆಲ್‍ಗಳು ಹಾಗೂ ಟ್ಯಾಂಕರ್‍ಗಳ ಮೂಲಕ ಹಳ್ಳಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಕೆ.ಸಿ ವ್ಯಾಲಿ ಯೋಜನೆಯಿಂದ ಕೆಲವು ಬೋರ್ ವೆಲ್‍ಗಳು ಮರುಪೂರ್ಣಗೊಳ್ಳುತ್ತಿವೆ ಎಂದು ತಿಳಿಸಿದರು. 
 ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಅವರು ಮಾತನಾಡಿ ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳನ್ನು ಮೂರರಿಂದ ನಾಲ್ಕು ಪಟ್ಟು ಹೆಚ್ಚಿನ ಬೆಲೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೃಷಿ ಹೊಂಡಗಳ ಸುತ್ತ ಮುತ್ತು ಬೇಲಿ ನಿರ್ಮಿಸಬೇಕು  ಎಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಯಶೋಧಮ್ಮ ಕೃಷ್ಣ ಮೂರ್ತಿ, ಸಾಮಾಜಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರೂಪಶ್ರೀ ಮಂಜುನಾಥ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಸಂಜೀವಪ್ಪ ಅವರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.