ಕುಂದಾಪುರದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ: ಆರೋಪಿ ಪೊಲೀಸ್ ವಶಕ್ಕೆ

JANANUD.COM NETWORK

 

ಕುಂದಾಪುರದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ: ಆರೋಪಿ ಪೊಲೀಸ್ ವಶಕ್ಕೆ

ಕುಂದಾಪುರ, ಮಾ.2: ‘ಪಾಕಿಸ್ತಾನ, ಜಿಂದಾಬಾದ್’ ಘೋಷಣೆ ಕೂಗಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ವ್ಯಕ್ತಿಯನ್ನು ಕುಂದಾಪುರದ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ(43) ಎಂದು ಗುರುತಿಸಲಾಗಿದೆ.

ಈತ ಕುಂದಾಪುರ ಮಿನಿ ವಿಧಾನಸೌಧದ ಎದುರು ನಿರಂತರವಾಗಿ ‘ಪಾಕಿಸ್ತಾನ ಜಿಂದಾಬಾದ್’ ಕೂಗುತ್ತಿರುವ ವೀಡಿಯೋ ವೈರಲ್ ಆಗಿದೆ.

ರಾಘವೇಂದ್ರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಎಂಟು ವರ್ಷಗಳ ಹಿಂದೆ ಶಿಕ್ಷಕನಾಗಿದ್ದ ರಾಘವೇಂದ್ರ ಬಳಿಕ ಮಾನಸಿಕ ಅಸ್ವಸ್ಥತೆಯ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದನೆನ್ನಲಾಗಿದೆ. ಇಂದು ಕೂಡಾ ತಾಯಿ ಜೊತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಈತ ತಾಯಿಯ ಕಣ್ತಪ್ಪಿಸಿ ಅಲ್ಲಿಂದ ಮಿನಿ ವಿಧಾನಸೌಧಕ್ಕೆ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಪರ ಘೋಷಣೆ ಕೂಗುವ ಪರಿಪಾಠ ಇಂದು ಅಧಿಕೃತವಾಗಿ ಕುಂದಾಪುರಕ್ಕೂ ಕಾಲಿಟ್ಟಿದೆ. ಕುಂದಾಪುರದ ಸರ್ಕಾರೀ ಕಚೇರಿಗಳ ಸಂಕೀರ್ಣ ಮಿನಿ ವಿಧಾನ ಸೌಧದ ಒಳಗೆ ವ್ಯಕ್ತಿಯೊಬ್ಬ ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾ ನಿರಂತರವಾಗಿ ಘೋಷಣೆ ಕೂಗಿದ ಘಟನೆ ಸೋಮವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ನಡೆದಿದೆ. ಘೋಷಣೆ ಕೂಗಿದ ವ್ಯಕ್ತಿಯನ್ನು ಕೋಡಿ ನಿವಾಸಿಯಾಗಿರುವ ರಾಘವೇಂದ್ರ ಗಾಣಿಗ(43) ಎಮದು ಗುರುತಿಸಲಾಗಿದ್ದು, ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

ಸೋಮವಾರ ಬೆಳಿಗ್ಗೆ ಸುಮಾರು 9.45ರ ಸುಮಾರಿಗೆ ಆರೋಪಿ ರಾಘವೇಂದ್ರ ಗಾಣಿಗ ಕುಂದಾಪುರ ಕುಂದಾಪುರದ ಸರ್ಕಾರೀ ಕಚೇರಿಗಳ ಸಂಕೀರ್ಣ ಮಿನಿ ವಿಧಾನಸೌಧಕ್ಕೆ ಬಂದಿದ್ದಾನೆ. ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆಯೇ ಪಾಕಿಸ್ತಾನ ಜಿಂದಾಬಾದ್ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕಾರಿಡಾರ್ ಉದ್ದಕ್ಕೂ ಕೂಗುತ್ತಾ ಸಾಗಿದ್ದಾನೆ. ಇದನ್ನು ಗಮನಿಸಿದ ಸಾರ್ವಜನಿಕರು ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಕುಂದಾಪುರ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದಾರೆ. ಬಳಿಕ ಆರೋಪಿ ರಾಘವೇಂದ್ರ ಗಾಣಿಗ ಕಾರಿಡಾರ್‍ನಿಂದ ಮಿನಿ ವಿಧಾನಸವಧದ ಒಳಗೆ ಪ್ರವೇಶಿಸಿದ್ದು, ಅಲ್ಲಿಯೂ ನಿರಂತರವಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ್ದಾನೆ. ಈ ಸಂದರ್ಭ ಮಾಹಿತಿ ಪಡೆದ ಕುಂದಾಪುರ ತಹಸೀಲ್ದಾರ್ ಲಿಖಿತವಾಗಿ ಆರೋಪಿಯ ವಿರುದ್ದ ದೂರು ನೀಡಿದ್ದು, ಪೊಲೀಸರು ಆರೋಪಿ ರಾಘವೇಂದ್ರ ಗಾಣಿಗನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

 

ಆರೋಪಿ ರಾಘವೇಂದ್ರ ಗಾಣಿಗ ‘ಪಾಕಿಸ್ತಾನ ಜಿಂದಾಬಾದ್’ ಎನ್ನುತ್ತಿರುವಂತೆ ಆತ ಮಾನಸಿಕ ಅಸ್ವಸ್ಥ ಎಂಬ ಮಾಹಿತಿ ಹೊರಬರುತ್ತಿದೆ. ಆರೋಪಿ ರಾಘವೇಂದ್ರ ಗಾಣಿಗ ವಿವಾಹಿತನಾಗಿದ್ದು, ಒಂದು ಪುಟ್ಟ ಮಗುವಿದೆ. ವಿದ್ಯಾವಂತನಾಗಿರುವ ರಾಘವೇಂದ್ರ ಎಂಟು ವರ್ಷಗಳ ಹಿಂದೆ ಕುಂದಾಪುರದ ಖಾಸಗೀ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ. ಸಧ್ಯ ಪತ್ನಿ ಹಾಗೂ ಮಗುವನ್ನು ತ್ಯಜಿಸಿ ತಾಯಿಯೊಂದಿಗೆ ವಾಸ ಮಾಡುತ್ತಿದ್ದಾನೆ ಎನ್ನುವ ಮಾಹಿತಿಗಳನ್ನು ಪೊಲೀಸರು ಹೊರಹಾಕಿದ್ದಾರೆ. ಆರೋಪಿ ರಾಘವೇಂದ್ರನಿಗೆ ಮಾನಸಿಕ ಕಾಯಿಲೆಯಿದ್ದು, ಇಂದು ಕುಂದಾಪುರದ ಮಾತಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆತನ ತಾಯಿ ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ಇದೇ ಸಂದರ್ಭ ಅಲ್ಲಿಂದ ತಪ್ಪಿಸಿಕೊಂಡು ಮಿನಿ ವಿಧಾನಸೌಧಕ್ಕೆ ಬಂದಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.

 

ಕೋಡಿಯ ವಾಸು ಗಾಣಿಗ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣಕ್ಕೆ ರಾಘವೇಂದ್ರನನ್ನು ದತ್ತು ಪಡೆದು ಸಾಕಿದ್ದರು ಎನ್ನುವ ಮಾಹಿತಿ ಲಭಿಸಿದೆ. ಶಿವಮೊಗ್ಗದಲ್ಲಿ ರಾಘವೇಂದ್ರ ಹಿಂದಿ ಭಾಷೆಯಲ್ಲಿ ಬಿಎಡ್ ಮಾಡಿದ್ದ ಎನ್ನಲಾಗಿದೆ. ಬಳಿಕ ಕುಂದಾಪುರದ ಖಾಸಗೀ ಶಾಲೆಯಲ್ಲಿ ಹಿಂದಿ ಶಿಕ್ಷಕನಾಗಿದ್ದ. ಬಳಿಕ ಅಲ್ಲಿ ಆತನಿಗೆ ಸರಿ ಬಾರದೇ ಕೆಲಸ ಬಿಟ್ಟಿದ್ದ ಎನ್ನಲಾಗಿದೆ. ರಾಘವೇಂದ್ರನ ಸಾಕು ತಂದೆ ಓಮ್ನಿ ಕಾರು ಬಾಡಿಗೆ ಮಾಡಿ ಬದುಕು ಕಟ್ಟಿಕೊಂಡವರು ಎನ್ನಲಾಗಿದ್ದು, ಪ್ರತೀ ತಿಂಗಳೀಗೆ ರಾಘವೇಂದ್ರನ ಚಿಕಿತ್ಸೆಗೆ ಎರಡೂವರೆ ಸಾವಿರ ರೂಪಾಯಿ ಖರ್ಚಾಗುತ್ತಿತ್ತು ಎನ್ನಲಾಗಿದೆ. ಕೆಲವು ಸಮಯದಿಂದ ಸ್ಥಳೀಯರು ಮತ್ತು ಸಂಬಂಧಿಕರು ಹಣ ಹೊಂದಿಸಿ ರಾಘವೇಂದ್ರನ ಚಿಕಿತ್ಸೆ ವೆಚ್ಚ ಭರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಅಮೂಲ್ಯ ಮತ್ತು ಆರುದ್ರ ಪ್ರಕರಣವನ್ನು ಟಿವಿ ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡಿದ್ದ ಸಂದರ್ಬ ಈತ ನಿರಂತರವಾಗಿ ಟಿವಿ ನೋಡುತ್ತಿದ್ದ. ಪ್ರತೀ ವಾಹಿನಿಯಲ್ಲಿಯೂ ಪಾಕಿಸ್ಥಾನ ಪರ ಘೋಟಣೆಯನ್ನು ನಿರೂಪಕರಾದಿಯಾಗಿ ಹೇಳುತ್ತಿದ್ದರಿಂದ ಪ್ರಭಾವಿತನಾಗಿ ಈತ ಅವಾಂತರ ಸೃಷ್ಟಿಸಿರಬಹುದು ಎನ್ನುವುದು ಅವರ ಮನೆಯವರ ಅಭಿಪ್ರಾಯ. ಇದೀಗ ಪೊಲೀಸರು ಆರೋಪಿ ರಾಘವೇಂದ್ರನ ಆರೋಗ್ಯ ಸ್ಥಿತಿಯ ಪರೀಕ್ಷೆಗೊಳಪಡಿಸಿದ್ದು, ಬಳಿಕವಷ್ಟೆ ವಾಸ್ತವ ವಿಚಾರಗಳ ತನಿಖೆ ನಡೆಸಬೇಕಾಗಿದೆ ಎಂದು ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.