ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಗಳು ವೈರಲ್

ಶ್ರೀನಿವಾಸಪುರ: ಕವಿ ಪನಸಮಾಕನಹಳ್ಳಿ ಆರ್.ಚೌಡರೆಡ್ಡಿ ಅವರು ರಚಿಸಿರುವ ಕೊರೊನಾ ಜಾಗೃತಿ ಗೀತೆಯ ಎರಡು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
‘ಕಾಣದಂತೆ ಕಾಡುತಿಹುದು ಪಾಪಿ ಕೊರೊನಾ , ಮನೆಯ ಬಿಟ್ಟು ಮಾರುದೂರ ಹೋಗದಿರೋಣ’ ಎಂದು ಪ್ರಾರಂಭವಾಗುವ ಗೀತೆಯನ್ನು ಶ್ರೀನಿವಾಸಪುರದ ಗಾಯಕಿ ಮಾಯಾ ಬಾಲಚಂದ್ರ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ. ವೇದಾಂತ್ ಶಾಸ್ತ್ರಿ ವೀಡಿಯೊದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಹಾಕಿ ಸಂಕಲಿಸಿದ್ದಾರೆ. ಅದೇ ಗೀತೆಯನ್ನು ಗಾಯಕ ಅಹನ್ಯ ಜಿ.ಪ್ರಭಾಕರರೆಡ್ಡಿ ಪ್ರತ್ಯೇಕವಾಗಿ ರಾಗ ಸಂಯೋಜನೆ ಮಾಡಿ ಹಾಡಿದ್ದಾರೆ.
ಈ ಇಬ್ಬರೂ ಗಾಯಕರು ಹಾಡಿರುವ ವೀಡಿಯೊಗಳು ಕೊರೊನಾ ಚಿಂತೆಯಲ್ಲಿ ಮುಳುಗಿರುವ ಜನರ ಗಮನ ಸೆಳೆದಿವೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡುತ್ತಿರುವ ಈ ಹಾಡಿನ ಸಾಲುಗಳು ಪಟ್ಟಣ ಪ್ರದೇಶದಲ್ಲಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ಜನರ ಬಾಯಲ್ಲೂ ನಲಿದಾಡುತ್ತಿವೆ. ಕೊರೊನಾ ಜಾಗೃತಿ ಕಾರ್ಯಕ್ರಮಗಲ್ಲಿ ಈ ಗೀತೆಯನ್ನು ಹಾಡಲಾಗುತ್ತಿದೆ.
ಕೊರೊನಾ ಬಗ್ಗೆ ಜನರಲ್ಲಿ ಭಯ ಬಿತ್ತದೆ, ಮೃದು, ಮಧುರ ಗಾಯನದ ಮೂಲಕ ಜಾಗೃತಿ ಉಂಟು ಮಾಡುವುದು ಈ ಗೀತೆಯ ವಿಶೇಷ. ‘ಗೀತೆ ರಚನೆ ಸೊಗಸಾಗಿದೆ. ಪ್ರಾಸ ಲಯಬದ್ಧವಾಗಿ ಅರ್ಥಪೂರ್ಣವಾಗಿದೆ. ಇಬ್ಬರೂ ಗಾಯಕರು ಚೆನ್ನಾಗಿ ಹಾಗೂ ವಿಭಿನ್ನವಾಗಿ ಹಾಡಿದ್ದಾರೆ’ ಎಂದು ಸಾಹಿತಿ ಟಿ.ಎಸ್.ನಾಗರಾಜಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.


