ಕವಿನಮನದ ಮೂಲಕ ನನಗೆ ನೀಡಿರುವ ಗೌರವವನ್ನು ಕವಿಗಳಿಗೆ ಸಮರ್ಪಣೆ ಮಾಡುತ್ತೇನೆ-ಕವಿ ಆರ್.ಚೌಡರೆಡ್ಡಿ

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಮನ್ವಂತರ ಪ್ರಕಾಶನ,ಮನ್ವಂತರ ಜನಸೇವಾ ಟ್ರಸ್ಟ್ ಕವಿನಮನದ ಮೂಲಕ ನನಗೆನೀಡಿರುವ ಈ ಗೌರವವನ್ನು ಕವಿ ಹಾಗೂ ಲೇಖಕ ಸಮುದಾಯಕ್ಕೆ ಸಮರ್ಪಿಸುತ್ತೇನೆ ಎಂದು ಕವಿ,ಲೇಖಕ ಆರ್.ಚೌಡರೆಡ್ಡಿ ತಿಳಿಸಿದರು.
ನಗರದ ಕೆಇಬಿ ಸಮುದಾಯ ಭವನದಲ್ಲಿ ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್‍ನ ಕವಿನಮನ-2020 ಕಾರ್ಯಕ್ರಮದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕವಿನಮನ ಕಾಯಕ್ರಮ ಕವಿ ಸಮುದಾಯಕ್ಕೆ ಸಂಬಂಧಿಸಿದ್ದು. ಹೀಗಾಗಿ ಈ ಗೌರವವನ್ನು ಕವಿಗಳಿಗೆ ಸಮರ್ಪಿಸಿದ್ದೇನೆ, ನಾನು ಬರೆದ ಕವಿತೆ, ಸಾಹಿತ್ಯಗಳನ್ನು 6 ವರ್ಷದ ಮಕ್ಕಳಿಂದ ಹಿಡಿದು ನೂರು ವರ್ಷದ ಹಿರಿಯರು ಓದುತ್ತಿರುವ ಓದುಗರಿಗೆ ಚಿರಋಣಿಯಾಗಿದ್ದೇನೆ ಎಂದರು.
ಶಿಶು ಗೀತೆಗಳನ್ನು ಮಕ್ಕಳು ಹಾಡಿ ಆನಂದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ ಎಂದ ಅವರು, ಇದನ್ನು ಕಂಡಾಗ ನಾನು ಬರೆದಿದ್ದಕ್ಕೆ ಮೌಲ್ಯ ಇದೆ, ಇತರರಿಗೆ ಸ್ಪೂರ್ತಿಯೂ ಆಗಿದೆ ಎಂದು ಅನಿಸಲಾರಂಭಿಸಿದೆ. ಇನ್ನಷ್ಟು ಕವಿತೆ, ಸಾಹಿತ್ಯಗಳನ್ನು ರಚಿಸಲು ಪ್ರೋತ್ಸಾಹ ಸಿಕ್ಕಿರುವುದರಿಂದ ಬರವಣಿಗೆಯನ್ನು ಮುಂದುವರಿಸುವುದಾಗಿ ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಜಿಲ್ಲೆಯ ಸಾಹಿತ್ಯದ ಬೆಳವಣಿಗೆ ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಜನಸೇವಾ ಟ್ರಸ್ಟ್‍ನ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಕವಿಗಳಿಗೆ ಸ್ಪೂರ್ತಿ ನೀಡಿದೆ. ಪ್ರತಿ ಮನುಷ್ಯನಿಗೂ ಸಾಧಿಸುವ ಹಂಬಲ ಇರುತ್ತದೆ. ಎಲ್ಲರೊಡನೆ ಸೇರುವ ಸಾಹಿತ್ಯ ಜೀವಂತಿಕೆಯಿರುತ್ತದೆ. ಆರ್. ಚೌಡರೆಡ್ಡಿ ಅವರ ಕವಿ, ಲೇಖನಗಳಿಗೆ ಆ ಶಕ್ತಿ ಇದೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅರ್ಹತೆಯೂ ಅವರಿಗೆ. ಮುಂದಿನ ದಿನಗಳಲ್ಲಿ ಸಮ್ಮೇಳನಗಳಲ್ಲಿ ಅವರ ಲೇಖನಗಳನ್ನು ಹೊರಗೆ ತರುವ ಕೆಲಸ ಮಾಡೋಣ ಎಂದರು.
ಸಮಾರೋಪ ನುಡಿಗಳನ್ನಾಡಿದ ಉಪನ್ಯಾಸಕ ಡಾ.ಡಿ.ಎಸ್.ಶ್ರೀನಿವಾಸಪ್ರಸಾದ್, ಚೌಡರೆಡ್ಡಿಯವರು ದೇಸೀಯ ಕವಿ ಕಾವ್ಯ ಕೃಷಿಕ. ಕವಿಯ ಒಳಗೆ ದೇಸೀಯತನ ಹಾಗೂ ತನ್ನತನ ಉಳಿಸಿಕೊಂಡವರು. ಈ ನೆಲದ ಬೇರು ಅವರ ಕವಿತೆ, ಲೇಖನಗಳಲ್ಲಿ ಉಸಿರಾಡುತ್ತಿದೆ. ಹೃದಯಕ್ಕೆ ಹತ್ತಿರವಾಗುವ, ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆದಿದ್ದಾರೆ. ಇಂತಹವರನ್ನು ಪ್ರಧಾನಧಾರೆಯಲ್ಲಿ ಗುರುತಿಸುವ ಕೆಲಸ ಆಗಬೇಕೆಂದು ನುಡಿದರು.

ಕವಿನಮನ ಅಡಿ ವಿಚಾರಗೋಷ್ಟಿ

ನಾ ಕಂಡಂತೆ ಚೌಡರೆಡ್ಡಿ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಕವಯತ್ರಿ ಮಾಯಾ ಬಾಲಚಂದ್ರ, ಚೌಡರೆಡ್ಡಿ ಅವರದ್ದು ಮಾರ್ಗದರ್ಶಿ ವ್ಯಕ್ತಿತ್ವ, ಸ್ಥಿತಪ್ರಜ್ಞೆಯನ್ನು ಅವರಲ್ಲಿ ಕಂಡಿದ್ದೇನೆ. ಬಂದಿದ್ದನ್ನು ಬಂದಹಾಗೆ ಸ್ವೀಕರಿಸುವ ವ್ಯಕ್ತಿತ್ವ, ಅವರ ಕವಿತೆ, ಲೇಖನಗಳು ಓದುಗರನ್ನು ಸರಳವಾಗಿ ಓದಿಸಿ ಮನಸ್ಸಿಗೆ ಇಳಿಸುತ್ತವೆ ಎಂದರು.
ನಿವೃತ್ತ ಮುಖ್ಯ ಶಿಕ್ಷಿಕ ಸಿ. ಬೈರಪ್ಪ ಮಾತನಾಡಿ, ಗ್ರಾಮೀಣ ಜನಜೀವನ, ಸಂಸ್ಕøತಿಯ ಚಿತ್ರಣ ಇವರ ಕವನ, ಸಾಹಿತ್ಯದಲ್ಲಡಗಿದೆ. ಗ್ರಾಮ್ಯ ಸಂಸ್ಕೃತಿಗೆ ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ, ಇನ್ನಷ್ಟು ಕೃತಿಗಳು ಹೊರಬಲಿ ಎಂದು ಆಶಿಸಿದರು.
ರೈತಪರ ಹೋರಾಟಗಾರ್ತಿ ಎ.ನಳಿನಿ ಮಾತನಾಡಿ, ಚೌಡರೆಡ್ಡಿ ಅವರ ಸಾಹಿತ್ಯ, ಕವಿತೆಗಳಲ್ಲಿ ಗ್ರಾಮೀಣ ಸೊಗಡನ್ನು ಕಾಣಬಹುದಾಗಿದೆ, ಲೇಖನ ಸಾಹಿತ್ಯದಲ್ಲಿ ಗತ್ತು, ಗಂಭೀರತೆ ತುಂಬಿದೆ, ಸಹೃದಯ ವ್ಯಕ್ತಿಯಾಗಿ ಇತರರಿಗೆ ಆದರ್ಶವಾಗಿದ್ದಾರೆ ಎಂದರು.
ಜಾಗತೀಕರಣದ ಹೆಸರಲ್ಲಿ ನಶಿಸುತ್ತಿರುವ ಗ್ರಾಮೀಣ ಸಂಸ್ಕೃತಿಯ ಸೊಗಡನ್ನು ಚೌಡರೆಡ್ಡಿ ಅವರ ಲೇಖನಗಳು ನೆನಪಿಸುತ್ತವೆ. ಇವೆಲ್ಲವನ್ನೂ ಪುಸ್ತಕವಾಗಿ ಪ್ರಕಟಿಸುವ ಕೆಲಸ ಆಗಬೇಕೆಂದು ಜನಪರ ಹೋರಾಟಗಾರ್ತಿ ವಿ.ಗೀತಾ ನುಡಿದರು.

ನಿವೃತ್ತ ಶಿಕ್ಷಕ ಕೆ.ಎನ್. ಪರಮೇಶ್ವರನ್ ಮಾತನಾಡಿದರು.

ಪರಿಸರ ಲೇಖಕ ಎಚ್.ಎ.ಪುರುಷೋತ್ತಮರಾವ್ ಮಾತನಾಡಿ, ಚೌಡರೆಡ್ಡಿ ಅವರು ಸಹೃದಯಿ, ನೆಲದ ಬರಹಗಾರ. ತನ್ನತ್ವಕ್ಕೆ ಬದ್ಧನಾದ ವ್ಯಕ್ತಿ.ಜೀವನದ ಎಲ್ಲ ಸತ್ವಗಳನ್ನು ಬಿಡಿಸಿಟ್ಟ ಬರಹಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಕವಿಗೋಷ್ಠಿಯಲ್ಲಿ ಮಾಲೂರಿನ ಸಾಹಿತಿ ದೊಡ್ಡಕಲ್ಲಳ್ಳಿ ಎಂ. ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು.ಕವಿಗಳಾದ ಯು.ವಿ ನಾರಾಯಣಾಚಾರ್, ತಿಪ್ಪೇರಂಗಪ್ಪ, ಚಿಕ್ಕಕುಂತೂರು ಚಂದ್ರಪ್ಪ, ನಾ.ವೆಂಕಿ,ಶಂಕರೇಗೌಡ, ಪಿ.ವಿ. ಶ್ರೀನಿವಾಸ್, ಜಿ. ಸುಧಾಕರ್, ಡಿ. ರಾಜೇಶ್ವರಿ, ಎನ್.ಸಿ. ರಾಜೇಶ್ವರಿ, ವಿ. ರಾಧಾಕೃಷ್ಣ, ಲಕ್ಕೂರು ಎಂ.ನಾಗರಾಜ್, ಎಚ್.ಎಸ್.ಪುಷ್ಪಲತಾ ಕವನ ವಾಚಿಸುವರು.ಕವಿಗೋಷ್ಠಿಯ ಸಂಚಾಲಕರಾದ ಟಿ. ಸುಬ್ಬರಾಮಯ್ಯ, ಡಾ.ಶರಣಪ್ಪ ಗಬ್ಬೂರು, ಸಿ. ರವೀಂದ್ರಸಿಂಗ್ ಉಪಸ್ಥಿತರಿದ್ದರು.