ಕವಿತೆ :ಸಾವನ್ ಕೆ ಸಿಂಧನೂರು
ಕನಸುಗಳಿಗೆ ಬಣ್ಣಗಳೇ ಇಲ್ಲ
ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ
ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ.
ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ..
ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು
ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ
ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ
ಸ್ಮಶಾನ ನೆನಪಾಗುತ್ತದೆ.
ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ
ನನ್ನ ಕತ್ತಿ, ಗುರಾಣಿ ತುಕ್ಕು ಹಿಡಿದಿವೆ.
ಗಾಂಧಿ ನೋಟಿನ ಹಿಂದೆ ಬಿದ್ದ ನನಗೆ
ಅದಕ್ಕಂಟಿದ ಬೆವರು, ರಕ್ತ, ವೀರ್ಯ ಮಿಶ್ರಣದ
ಹೊಚ್ಚ ಹೊಸ ವಾಸನೆ.
ತೊಳೆದರೂ ಅಳಿಯದ ಕಲೆಗಳ ಕಂಡು
ಈ ಬಣ್ಣದ ಹಾಳೆಗೆ ಬೆನ್ನು ಮಾಡುತ್ತೇನೆ.
ನಿದ್ರೆಗೆಟ್ಟು ರಾತ್ರಿ ಪೂರಾ ಬರೀ ಬೆತ್ತಲೆ ಕಣ್ಣುಗಳೇ
ಈಗೀಗ ರೆಪ್ಪೆಗಳೂ ಪಟಪಟಿಸುತ್ತಿಲ್ಲ
ಕತ್ತಲೆಗೆ ದೃಷ್ಟಿಯಿಲ್ಲವಲ್ಲ.!
ಬೆನ್ನ ಹಿಂದೆ ಕಣ್ಣು ಮೂಡಿ ಚೂರಿ ಹಾಕಿದವರೂ
ಸಿಸಿಟಿವಿ ಅಡಿಯಲ್ಲಿ.
ಅವರಿಗೇ ತೋರಿಸಿ ಎದೆಗಿರಿಯುವ ತಾಕತ್ತಿಲ್ಲ ನನಗೆ
ಕುಳಿತಲ್ಲೇ ಕೆಮ್ಮುತ್ತೇನೆ.
ನಾನೂ ಸಾಯಲು ಅಂಜುತ್ತೇನೆ.
ಇತ್ತೀಚಿಗೆ ಬೀಳುವ ಕನಸುಗಳಿಗೆ ಬಣ್ಣಗಳೇ ಇಲ್ಲ,
ಇದ್ದರೂ ನೆರಳಿನ ಪ್ರಭಾವಕ್ಕೆ ಒಳಗಾಗುತ್ತಿವೆ.
ಒಡೆದ ಕನ್ನಡಿಯ ಚೂರುಗಳಲ್ಲಿ ಒಡೆದ ಮುಖಗಳಂತೆ
ಅವು ಚದುರಿ ಛಿದ್ರ, ಛಿದ್ರ..
ಸಟಕ್ಕನೆ ಎದ್ದು ಜಿದ್ದಿಗೆ ಬಿದ್ದು
ಗಂಡಸು ಎಂದು ದಾಖಲಿಸಲು ಕಾಯುತ್ತೇನೆ,
ಗುರುತಿನ ಉಂಗುರವೂ, ರಾಜಮುದ್ರೆಯೂ
ಯಾರ ಬಳಿಯೂ ಸಿಕ್ಕುತ್ತಿಲ್ಲ.
ಸೋತು ಹೋಗಿದ್ದೇನೆ ಎನ್ನಲು
ಈ ನಾಲಿಗೆಗೆ ಸೊಕ್ಕು.
ಅಳಲು ಸಾಕಷ್ಟು ಕಣ್ಣೀರೆ ಇಲ್ಲ
ಧ್ವನಿಯೂ ಈಗೀಗ ಅಸ್ಪಷ್ಟ.
ಇರುವಷ್ಟು ದಿನ ಗುಡ್ಡೆ ಹಾಕುವುದರಲ್ಲೇ ಕಳೆದೆ
ಗುಂಡಿ ತೋಡಿ ಮುಚ್ಚುವ ಗಳಿಗೆ ಬಂದಾಗ
ಗುಂಡಿಗೆ ಬಿರಿಯುವಷ್ಟು ಅಳುವವರಿಲ್ಲ.
ಬೇಲಿ ಹಾಕಿದ ಜಾಗ, ಮುರಿದ ಮಂಚದ ಕಾಲು, ಅರಮನೆಯ ತೊಲೆಗಂಬ, ಉದುರಿದ ಉಂಗುರಗಳು, ರೇಷ್ಮೆ ವಸ್ತ್ರಗಳು ಇಡುವಷ್ಟು ಜಾಗವಿಲ್ಲ.
ಕಫನ್ನಿಗೆ ಕಿಸೆಯೇ ಇಲ್ಲ..!
ಅಲ್ಲಿ ಮತ್ತೆ ಯಾರೋ ಗೊಣಗುತ್ತಿದ್ದಾರೆ “ಬೇಗ ಇಳಿಸಿ, ಮುಚ್ಚಿಬಿಡಿ, ಉಣ್ಣಲು ಸಮಯವಾಯಿತು”