ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ

ಸಂಘದ ಬಹುದಿನಗಳ ಬೇಡಿಕೆಗಳನ್ನು ಈಡೇರಿಸಲಾಗುವುದು : ಮುಖ್ಯ ಮಂತ್ರಿಯವರ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಭರವಸೆ

ಬೆಂಗಳೂರು : ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ನೇತೃತ್ವದ ಪದಾಧಿಕಾರಿಗಳ ನಿಯೋಗ ಫೆಬ್ರವರಿ 24 ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿಯವರ
ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರನ್ನು
ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಸಂಘದ ಪ್ರಮುಖ ಮೂರು ಬೇಡಿಕೆಗಳನ್ನು ಈಡೇರಿಸಿ
ಕೊಡುವಂತೆ ಮನವಿ ಮಾಡಿತು.

ಸಂಘದ ಮನವಿ ಸ್ವೀಕರಿಸಿ, ಪದಾಧಿಕಾರಿಗಳೊಂದಿಗೆ ಬೇಡಿಕೆಗಳ‌ ಕುರಿತು ಶಾಂತಚಿತ್ತದಿಂದ‌ ಸುಧೀರ್ಘವಾಗಿ ಚರ್ಚಿಸಿದ ಕೆ.ವಿ.ಪ್ರಭಾಕರ್ ಅವರು ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರಿಂದ ಈ ಮೂರು ಬೇಡಿಕೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ಕೊಂಡರು.

ಜನವರಿ 2024 ರಿಂದ ಇಲ್ಲಿಯವರೆಗೆ ಆನೇಕ ಬಾರಿ ಇಲಾಖೆಗೆ , ಸರ್ಕಾರಕ್ಕೆ ಸಂಘದಿಂದ ಮನವಿ ಸಲ್ಲಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ.ಇದರಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯಾಧ್ಯಕ್ಷರು ಮಾಧ್ಯಮ ಸಲಹೆಗಾರರಿಗೆ ಮನವರಿಕೆ ಮಾಡಿಕೊಟ್ಟರು.

ಜಾಹೀರಾತು ನೀತಿ 2013 , ಅನುಷ್ಠಾನ‌ ನಿಯಮಗಳು 2014 ರ ನಿಯಮ 14 ರ ಟಿಪ್ಪಣಿ 3 ರ ಪ್ರಕಾರ ವಾರ್ತಾ ಇಲಾಖೆ ಆಯುಕ್ತರಿಗೆ ಜಾಹೀರಾತು ದರ ಹೆಚ್ಚಳ ಮಾಡಲು ಅಧಿಕಾರ ಇದ್ದರೂ ಸಹ ಕಳೆದ 4 ವರ್ಷಗಳಿಂದ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ವಾರ್ತಾ ಇಲಾಖೆ ಆಯುಕ್ತರು ಜಾಹೀರಾತು ದರ ಹೆಚ್ಚಳ ಮಾಡದೇ ಇರುವುದು, ಸರ್ಕಾರದ ಯಾವುದೇ ಆದೇಶ ಇಲ್ಲದೇ ಇದ್ದರೂ ಸಹ, ಪತ್ರಿಕೆಗಳ ಜಾಹೀರಾತು ಬಿಲ್ಲುಗಳಲ್ಲಿ ಏಜೆನ್ಸಿಗಳು ಕಾನೂನು
ಬಾಹಿರವಾಗಿ ಕಡಿತ ಮಾಡುವ ಶೇ.15 ರಷ್ಟು ಕಮಿಷನ್ ಹಣವನ್ನು ತಕ್ಷಣ ನಿಲ್ಲಿಸುವುದು, ವಾರ್ತಾ‌ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಇರುವ 5 ವರ್ಷದೊಳಗಿನ ಹಿಂದುಳಿದ ವರ್ಗಗಳ ಮತ್ತು ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಪ್ರತಿ ತಿಂಗಳು ಒಂದು ಪುಟ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತು ಬಿಡುಗಡೆ ಮಾಡಲು ಸರ್ಕಾರದಿಂದ ಆದೇಶ ಹೊರಡಿಸುವುದು ಎನ್ನುವ ಬೇಡಿಕೆಗಳಿಗೆ ಮುಕ್ತ ಮನಸ್ಸಿನಿಂದ ಸ್ಪಂದಿಸಿದ ಮಾಧ್ಯಮ ಸಲಹೆಗಾರರು ಈ ಬೇಡಿಕೆಗಳನ್ನು ಸರ್ಕಾರದಿಂದ ಈಡೇರಿಸಿ ಕೊಡುವುದಾಗಿ ಭರವಸೆ ನೀಡಿದರು. ಶೀಘ್ರದಲ್ಲೇ ಹೊಸ ಜಾಹೀರಾತು ನೀತಿ ಕೂಡ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಸಂಘದ ನಿಯೋಗದಲ್ಲಿ ಉಪಾಧ್ಯಕ್ಷರಾದ ಭೀಮರಾಯ ಹದ್ದಿನಾಳ, ರಾಮಕೃಷ್ಣ ಮಾಮರ,ಹೆಚ್.ಎಸ್.ಹರೀಶ್, ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ, ರಾಜ್ಯ ಸಮಿತಿ ನಾಮನಿರ್ದೇಶನ ಸದಸ್ಯರಾದ, ಕೆ.ಕೆ.ಕುಲಕರ್ಣಿ, ಆಶೋಕ್ ಕುಮಾರ್ ಕರಂಜಿ, ವಿಶ್ವನಾಥ್ ಬೆಳಗಲ್ ಮಠ, ಮಹೇಶ್ ಅಂಗಡಿ, ಜಂಟಿ ಕಾರ್ಯದರ್ಶಿ ಬಿ.ದಿನೇಶ್, ಸಂಘಟನಾ ಕಾರ್ಯದರ್ಶಿಗಳಾದ ರಾಜು ತಳವಾರ, ರಮೇಶ್ ರೆಡ್ಡಿ, ಸಹ‌ ಕಾರ್ಯದರ್ಶಿ ಎಂ.ಬಿ.ಕೊಡಗಲಿ, ಕಾರ್ಯದರ್ಶಿ ಶರಣು ಗದ್ದುಗೆ,ಜಿಲ್ಲಾಧ್ಯಕ್ಷರಾದ ಎಲ್.ಶಿವಶಂಕರ್, ಜಾಕೀರ್ ಹುಸೇನ್ ತಾಳಿಕೋಟೆ, ವಿಜಯಕುಮಾರ್ ಪಾಟೀಲ್, ಎಂ.ಜೆ.ಶ್ರೀನಿವಾಸ್, ಪದಾಧಿಕಾರಿಗಳಾದ ಕೌಸಲ್ಯ ಪನ್ನಾಳ್ಕರ್, ಅಜಯ್‌ ಭೋಸ್ಲೆ, ರಾಮಚಂದ್ರ ಭೋಸ್ಲೆ, ಅಬ್ದುಲ್ ಖದೀರ್, ಆನಂದ್ ಗೋರ್ಕಲ್, ಎಸ್.ಡಿ.ವೇಣುಗೋಪಾಲ ಸುನೀಲ್ ಕುಲಕರ್ಣಿ, ಪ್ರಕಾಶ್ ಗುಳೇದಗುಡ್ಡ, ದೇವಪ್ಪ ಲಿಂಗದಾಳ್ ಸೇರಿದಂತೆ ಇನ್ನಿತರ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಇದ್ದರು.

ಸಂಘದ ಪ್ರಮುಖ ಬೇಡಿಕೆಗಳು

  1. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀತಿ 2013 ಅನುಷ್ಠಾನ ನಿಯಮಗಳು 2014 ರ ನಿಯಮ 14 ರ ಟಿಪ್ಪಣೆ 3 ರ ಪ್ರಕಾರ ದಿನಾಂಕ: 01-04-2023 ರಿಂದ ಅನ್ವಯವಾಗುವಂತೆ ಹಾಲೀ ಜಾಹೀರಾತು ದರಕ್ಕೆ ಶೇ. 12 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕು. ದಿನಾಂಕ: 01-04-2025 ರಿಂದ ಅನ್ವಯವಾಗುವಂತೆ ಹಾಲೀ ಜಾಹೀರಾತು ದರಕ್ಕೆ ಮತ್ತೇ ಶೇ. 12 ರಷ್ಟು ಹೀಗೆ ಶೇ.24 ರಷ್ಟು ಜಾಹೀರಾತು ದರವನ್ನು ಹೆಚ್ಚಳ ಮಾಡಬೇಕು.

2 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅಂಗೀಕೃತ ಜಾಹೀರಾತು ಸಂಸ್ಥೆಗಳ ಮೂಲಕ ಬಿಡುಗಡೆ ಮಾಡಲಾಗುವ ಎಲ್ಲಾ ಬಗೆಯ ಜಾಹೀರಾತು ವೆಚ್ಚದ ಬಿಲ್ಲುಗಳಲ್ಲಿ ಸರ್ಕಾರದ ಯಾವುದೇ ಆದೇಶ ಇಲ್ಲದಿದ್ದರೂ ಸಹ ಕಾನೂನು ಬಾಹಿರವಾಗಿ ಕಡಿತಗೊಳಿಸುತ್ತಿರುವ ಶೇ.15 ರಷ್ಟು ಕಮಿಷನ್ ಹಣವನ್ನು ಕಡಿತಗೊಳಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಎಲ್ಲಾ ಬಗೆಯ ಜಾಹೀರಾತುಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದಲೇ ಬಿಡುಗಡೆ ಮಾಡಬೇಕು, ಅದರ ವೆಚ್ಚವನ್ನು ಇಲಾಖೆಯಿಂದಲೇ ಪಾವತಿಸುವ ವ್ಯವಸ್ಥೆಯನ್ನು ಮಾಡಬೇಕು.

  1. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ 5 ವರ್ಷ ಪೂರೈಸಿರುವ ಒಬಿಸಿ/ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಪ್ರತಿ ಮಾಹೆ 02 ಪುಟಗಳ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಈ ಸಮುದಾಯದ ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರವು ಸಹಾಯ, ಸಹಕಾರ ನೀಡುತ್ತಿದೆ. ಆದರೆ 5 ವರ್ಷ ಪೂರೈಸಿರದ ಒಬಿಸಿ / ಬ್ರಾಹ್ಮಣ ಸಮುದಾಯದ ಪತ್ರಿಕೆಗಳಿಗೆ ಪ್ರತಿ ಮಾಹೆ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಇಲಾಖೆಯಿಂದ ಬಿಡುಗಡೆ ಮಾಡುವುದಕ್ಕೆ ಸರ್ಕಾರದ ಆದೇಶ ಇರುವುದಿಲ್ಲ. ಹೀಗಾಗಿ ಈ ಎರಡು ಸಮುದಾಯದ ಪತ್ರಿಕೆಗಳ ಬೆಳವಣಿಗೆಗೆ ಮತ್ತು ಪತ್ರಿಕೆ ನಡೆಸಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ತಳಹದಿಯಲ್ಲಿ ಈ ಎರಡು ಸಮುದಾಯದ ಪತ್ರಿಕೆಗಳಿಗೆ ಮಾಸಿಕ 01 ಪುಟದ ಸರ್ಕಾರದ ಪ್ರೋತ್ಸಾಹ ರೂಪದ ಜಾಹೀರಾತನ್ನು ಸರ್ಕಾರದ ವತಿಯಿಂದ ಬಿಡುಗಡೆ ಮಾಡಲು ಸೂಕ್ತ ಆದೇಶವನ್ನು ಹೊರಡಿಸುವುದರ ಮೂಲಕ ಈ ಎರಡೂ ಸಮುದಾಯಗಳ ಪತ್ರಿಕೆಗಳಿಗೆ ಅನುಕೂಲ ಮಾಡಿಕೊಡಬೇಕು.