ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದೈವಾರ್ಷಿಕ ಚುನಾವಣೆಯು ಅಕ್ಟೋಬರ್ 28 ರಂದು, ಅಂತಿಮ ಕಣದಲ್ಲಿ 15 ಅಭ್ಯರ್ಥಿಗಳು ಸ್ಪರ್ದಿಸಿದ್ದಾರೆ: ಸಿ.ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : ಕರ್ನಾಟಕ ಆಗ್ನೆಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದೈವಾರ್ಷಿಕ ಚುನಾವಣೆಯು ಅಕ್ಟೋಬರ್ 28 ರಂದು ನಡೆಯಲಿದ್ದು , ಅಂತಿಮ ಕಣದಲ್ಲಿ 15 ಅಭ್ಯರ್ಥಿಗಳು ಸ್ಪರ್ದಿಸಿದ್ದಾರೆ ಎಂದು ಕೋಲಾರ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಸಿ.ಸತ್ಯಭಾಮ ಅವರು ತಿಳಿಸಿದರು. ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು . ಕರ್ನಾಟಕ ಆಗ್ನೆಯ ಪದವೀದರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದೈವಾರ್ಷಿಕ ಚುನಾವಣೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜಕೀಯ ಪಕ್ಷಗಳಿಂದ 3 ಅಭ್ಯರ್ಥಿಗಳು , ನೋಂದಾಯಿತ ರಾಜಕೀಯ ಪಕ್ಷಗಳಿಂದ 2 ಅಭ್ಯರ್ಥಿಗಳು ಹಾಗೂ ಪಕ್ಷೇತರವಾಗಿ 10 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ತಿಳಿಸಿದರು . ಜಿಲ್ಲೆಯಲ್ಲಿ ಈ ಬಾರಿ ಒಟ್ಟು 36 ಮತಗಟ್ಟೆಗಳು ಇವೆ. ಪದವೀದರ ಚುನಾವಣೆಗೆ ಪದವೀದರರು ತಮ್ಮ ಹೆಸರುಗಳನ್ನು ಈಗಾಗಲೇ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ಜಿಲ್ಲೆಯಲ್ಲಿ 13,061 ಪುರುಷ ಮತದಾರರು ಮತ್ತು 8,460 ಮಹಿಳಾ ಮತದಾರರು ಸೇರಿದಂತೆ ಒಟ್ಟು 21,521 ಮತದಾರರಿದ್ದಾರೆ. ಪಾರದರ್ಶಕವಾಗಿ ಚುನಾವಣೆ ನಡೆಸಲು ವಿವಿಧ ತಂಡಗಳನ್ನು ರಚಿಸಲಾಗಿದೆ . 18 ಫೈಯಿಂಗ್ ಪ್ಯಾಡ್ ತಂಡವನ್ನು ರಚಿಸಿದ್ದು ಪ್ರತಿ ತಂಡದಲ್ಲಿ 4 ಜನರನ್ನು ಒಳಗೊಂಡಿರುತ್ತದೆ . 6 ಸ್ಪೆಷಲ್ ವಿಡಿಯೊ ತಂಡವನ್ನು ರಚಿಸಿದ್ದು ಪ್ರತಿ ತಂಡದಲ್ಲಿ 3 ಜನರನ್ನು ಒಳಗೊಂಡಿರುತ್ತದೆ , ಹೋಬಳಿಗೆ ಒಬ್ಬರಂತೆ 27 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ .   ಕೋವಿಡ್ -19 ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಪಂಚಾಯತ್‌ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ , ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಣಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಾಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಎಂ.ಸಿ.ಎಂ.ಸಿ. ತಂಡವನ್ನು ರಚಿಸಿದ್ದು , ತಂಡದಲ್ಲಿ ಜಿಲ್ಲಾಧಿಕಾರಿಗಳು , ಜಿಲ್ಲಾ ವಾರ್ತಾಧಿಕಾರಿಗಳು , ವಿಜಯವಾಣಿ ಪತ್ರಿಕೆಯ ಜಿಲ್ಲಾ ವರದಿಗಾರರು , ಡಿ.ಐ.ಓ , ಎನ್.ಐ.ಸಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. Cash Seizure Redressal Committee ತಂಡವನ್ನು ರಚಿಸಿದ್ದು , ತಂಡದಲ್ಲಿ ಜಿಲ್ಲಾಪಂಚಾಯತ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಖಜಾನಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ. 7 ಕಂಟ್ರೋಲ್ ರೂಂ ತಂಡಗಳನ್ನು ರಚಿಸಿದ್ದು , ಜಿಲ್ಲಾಧಿಕಾರಿಗಳ ಕಛೇರಿ ಮತ್ತು ಆಯಾ ತಾಲ್ಲೂಕು ಮಟ್ಟದದಲ್ಲಿ ತಲಾ ಒಂದರಂತೆ 6 ಕಂಟ್ರೋಲ್ ರೂಂಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು . ಚುನಾವಣೆಯಲ್ಲಿ ಭಾಗವಹಿಸುವ ಮತದಾನ ಸಿಬ್ಬಂದಿಗೆ ಅಕ್ಟೋಬರ್ 16 , ಅಕ್ಟೋಬರ್ 20 ಮತ್ತು ಮಸ್ಕರಿಂಗ್ ದಿನವಾದ ಅಕ್ಟೋಬರ್ 27 ರಂದು ತರಬೇತಿಯನ್ನು ನೀಡಲಾಗುವುದು . 5 ತಾಲ್ಲೂಕುಗಳಲ್ಲಿ ಸಂಬಂಧಿಸಿದ ತಾಲ್ಲೂಕು ಕಛೇರಿಗಳಲ್ಲಿ ಮತ್ತು ಕೆ.ಜಿ.ಎಫ್ ತಾಲ್ಲೂಕಿನಲ್ಲಿ ಕೆ.ಜಿ.ಎಫ್ ನಗರಸಭೆ ಕಛೇರಿಯಲ್ಲಿ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ನಡೆಸಲಾಗುವುದು , ಚುನಾವಣೆಗೆ Micro observers 50 ಸೇರಿದಂತೆ ಒಟ್ಟು 250 ಮತದಾನದ ಸಿಬ್ಬಂದಿಗಳನ್ನು ನೇಮಿಸಲಾಗಿದೆ . ಆಗ್ನೆಯ ಪದವೀಧರರ ಚುನಾವಣೆಯು ಕೋಲಾರ ಸೇರಿದಂತೆ 5 ಜಿಲ್ಲೆಗಳನ್ನು ಒಳಗೊಂಡಿದ್ದು , ನವೆಂಬರ್ 02 ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು .
 ಕಂದಾಯ ಅದಾಲತ್ : ಜಿಲ್ಲೆಯಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದ್ದು , ಇದರಲ್ಲಿ ಪಹಣಿ ತಿದ್ದುಪಡಿ , ಎ ಮತ್ತು ಬಿ ಖರಾಬು ತಿದ್ದುಪಡಿ , 3-9 ಮಿಸ್‌ಮ್ಯಾಚ್ಯಾಗಿರುವ ಹೆಸರು ತಿದ್ದುಪಡಿ , ಬಿನ್ / ಕೋಂ ತಿದ್ದುಪಡಿಗಳನ್ನು ಕಂದಾಯ ಅದಾಲತ್‌ನಲ್ಲಿ ಮಾಡಲಾಗುವುದು . ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿಯಲ್ಲಿ ಅಕ್ಟೋಬರ್ 20 ರಂದು , ಕೋಲಾರ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಅಕ್ಟೋಬರ್ 21 ರಂದು , ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಅಕ್ಟೋಬರ್ 22 ರಂದು , ಮುಳಬಾಗಿಲು ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಅಕ್ಟೋಬರ್ 23 ರಂದು , ಕೆ.ಜಿ.ಎಫ್ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ನವೆಂಬರ್ 04 ರಂದು , ಬಂಗಾರಪೇಟೆ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ನವೆಂಬರ್ 05 ರಂದು ಕಂದಾಯ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು . ಕೋಲಾರ ಪತ್ರಿಕಾ ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ , ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ ಅವರು ಉಪಸ್ಥಿತರಿದ್ದರು .