ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ.ಆ.28: ಎ.ಪಿ.ಎಂ.ಸಿ ಮಾರುಕಟ್ಟೆಗೆ ಅವಶ್ಯಕತೆಯಿರುವ 40 ಎಕರೆ ಜಮೀನನ್ನು ಮಂಜೂರು ಮಾಡಿಬೇಕೆಂದು ರೈತಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿ ರಸ್ತೆ ಬಂದ್ ಮಾಡಿ ಶಿರೆಸ್ತಾದಾರ್ ಅನಂತ್ಕುಮಾರಿರವರಿಗೆ ಮನವಿ ನೀಡಿ ಅಗ್ರಹಿಸಲಾಯಿತು.
ಹೋರಾಟದ ನೇತೃತ್ವವಹಿಸಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆಯಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿನ ಟೊಮೆಟೊ ಮತ್ತು ತರಕಾರಿಗಳು ದೇಶವಿದೇಶಗಳಿಗೆ ರಫ್ತಾಗುತ್ತಿದ್ದು ಇಲ್ಲಿಗೆ ಬರುವ ವ್ಯಾಪಾರಸ್ಥರು ಮಾರುಕಟ್ಟೆಯಲ್ಲಿನ ಜಾಗದ ಸಮಸ್ಯೆಯಿಂದ ಬೆಳೆಗೆ ತಕ್ಕ ಬೆಲೆ ನೀಡಲು ಹಿಂಜರಿಯುತ್ತಿದ್ದಾರೆ. ಇದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದೆ ನಷ್ಟಕ್ಕೆ ಸಿಲುಕುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಮಾರುಕಟ್ಟೆಯ ಜಾಗದ ಸಮಸ್ಯೆ ಬಗ್ಗೆ ನೆಪ ಮಾತ್ರಕ್ಕೆ ಬಗೆಹರಿಸುತ್ತೇವೆಂದು ರೈತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಇತ್ತೀಚೆಗೆ ಚೆಲುವನಹಳ್ಳಿ ಬಳಿ ನೋಡಿದ್ದ ಜಮೀನು ಕೆರೆಯಂಗಳವಾಗಿದ್ದು, ಮಂಗಸಂದ್ರದ ಜಮೀನು ಅರಣ್ಯಕ್ಕೆ ಸೇರಿದೆ. ಸತತವಾಗಿ 10 ವರ್ಷಗಳಿಂದ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಪರಿಹರಿಸುವಂತೆ ಸತತವಾಗಿ ಹೋರಾಟಗಳು ಮಾಡುತ್ತಿದ್ದರೂ ಇದರ ಕಡೆ ಗಮನಹರಿಸುತ್ತಿಲ್ಲ. ರೈತರಿಗೆ ಅನುಕೂಲವಾಗುವ ಮಾರುಕಟ್ಟೆಯ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಬಳಿ ಜಾಗದ ಸಮಸ್ಯೆ ಇದೆ. ಆದರೆ ರಾತ್ರೋರಾತ್ರಿ ಸಾವಿರಾರು ಎಕರೆ ಸರ್ಕಾರಿ ಜಮೀನುಗಳನ್ನು ಅಕ್ರಮ ದಾಖಲೆಗಳನ್ನು ಸೃಷ್ಠಿ ಮಾಡಿ ರಿಯಲ್ ಎಸ್ಟೇಟ್ ದಂಧೆಕೋರರಿಗೆ ಮಂಜೂರು ಮಾಡಲು ಜಾಗವಿರುತ್ತದೆ. ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಕಿಲೋಮೀಟರ್ಗಟ್ಟಲೇ ವರ್ಷಗಳ ಕಾಲ ಹುಡುಕಾಟದಲ್ಲಿದ್ದೇವೆಂದು ಅಧಿಕಾರಿಗಳು ನೆಪ ಹೇಳುತ್ತಿದ್ದಾರೆಂದು ಜನಪ್ರತಿನಿದಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಜಿಲ್ಲೆಗೆ ಕೆಸಿವ್ಯಾಲಿ ನೀರು ಹರಿಯುವ ಜೊತೆಗೆ ಉತ್ತಮವಾದ ಮುಂಗಾರುಮಳೆ ಸುರಿಯುತ್ತಿರುವುದರಿಂದ ಕೆರೆ ಕುಂಟೆಗಳಲ್ಲಿ ನೀರು ಸಂಗ್ರಹವಾಗಿ ಕೃಷಿಯಿಂದ ವಿಮುಕ್ತಿ ಹೊಂದುತ್ತಿದ್ದ ರೈತರು ಮತ್ತೆ ಕೃಷಿಯತ್ತ ಮುಖ ಮಾಡಿರುವುದರಿಂದ ರೈತರು ಬೆಳೆದ ಬೆಳೆಗಳಿಗೆ ಉತ್ತಮವಾದ ಬೆಲೆ ಸಿಗಬೇಕಾದರೆ ಮಾರುಕಟ್ಟೆಯ ವ್ಯವಸ್ಥೆ ಸರಿಪಡಿಸಬೇಕಾದ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಜೊತೆಗೆ ಇತ್ತೀಚಿನ ದಿನಗಳಲ್ಲಂತು ಟೊಮೆಟೊ ಸೇರಿದಂತೆ ಇನ್ನಿತರೆ ತರಕಾರಿಗಳ ಅವಕ ಹೆಚ್ಚಾಗುತ್ತಿದ್ದು, ಮಾರುಕಟ್ಟೆಯಲ್ಲಿ ನಿತ್ಯವೂ ಟ್ರಾಫಿಕ್, ಅನೈರ್ಮಲ್ಯ ಸಮಸ್ಯೆಗಳು ಸಾಮಾನ್ಯವಾಗಿವೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆಗಳಿದ್ದರೂ ಮಾರುಕಟ್ಟೆಯಲ್ಲಿ ಅವ್ಯವಸ್ಥೆಯಿಂದಾಗಿ ಸಕಾಲಕ್ಕೆ ಮಾರಾಟವಾಗದೆ ಗುಣಮಟ್ಟ ಕಳೆದುಕೊಂಡು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ ಜಾಗದ ಸಮಸ್ಯೆಯನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯ ಮಾಡುವ ಜೊತೆಗೆ ಈ ಹೋರಾಟಕ್ಕೂ ಸ್ಪಂದಿಸದೇ ಮಾರುಕಟ್ಟೆ ಜಾಗದ ಸಮಸ್ಯೆ ಬಗೆಹರಿಸದೇ ಹೋದರೆ ಕೋಲಾರ ತಾಲ್ಲೂಕು ಬಂದ್ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆಂದು ಸಂಬಂಧಪಟ್ಟ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ.
ಮನವಿ ಸ್ವೀಕರಿಸಿ ಮಾತನಾಡಿದ ಆನಂತ್ಕುಮಾರಿ ರವರು ನಾನು ಹೊಸದಾಗಿ ಬಂದಿರುವೆ, ಈ ನಿಮ್ಮ ಮನವಿಯನ್ನು ಮೇಲಾದಿಕಾರಿಗಳ ಗಮನಕ್ಕೆ ತರಲಾಗುದೆಂದರು ಮತ್ತು ಎ.ಪಿಎಂಸಿ ವಿಶ್ವನಾಥ್ ರವರು ಮಾತನಾಡಿ ಮಂಗಸಂದ್ರದ ಬಳಿಯೇ ಮಾರುಕಟ್ಟೆಗೆ ಆಗಬಹುದು ಎಂಬ ಭರವಸೆ ನೀಡಿದರು
ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ, ಐತಾಂಡಹಳ್ಳಿ ಮಂಜುನಾಥ್, ನಳಿನಿ.ವಿ ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಪೊಮ್ಮರಹಳ್ಳಿ ನವೀನ್, ಸಾಗರ್, ನವೀನ್, ಸುಧಾಕರ್, ಸುನಿಲ್, ವಿನೋದ್, ಮಾಸ್ತಿ ವೆಂಕಟೇಶ್, ಸುಪ್ರೀಂಚಲ, ಚಂದ್ರಶೇಖರ್, ವೆಂಕಟೇಶ್, ಕೇಶವ, ಯಲ್ಲಪ್ಪ, ಸುಬ್ರಮಣಿ, ನಾರಾಯಣಸ್ವಾಮಿ, ಮುಂತಾದವರಿದ್ದರು