ವರದಿ: ಎಸ್.ಡಿ.ಪಿ.ಐ.ಬೆಂಗಳೂರು
ಎಸ್ಡಿಪಿಐ ಸಂಘಟನೆ: ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಹೋರಾಡಲಿದೆ
ಬೆಂಗಳೂರು, ಮಾ.5: ರಾಜ್ಯದಲ್ಲಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳ ಮರು ವಶಪಡಿಸಲು ಎಸ್ಡಿಪಿಐ ನಿರಂತರ ಹೋರಾಟ ಮಾಡಲಿದೆ. ಕೆಲವು ರಾಜಕೀಯ ನಾಯಕರ ಮೇಲೆ ವಕ್ಫ್ ಆಸ್ತಿ ಒತ್ತುವರಿ-ಮಾರಾಟದ ಆರೋಪವಿದೆ. ಮುಸ್ಲಿಮ್ ಸಮುದಾಯದಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ದಾಖಲಾತಿ ಕ್ರಮಬದ್ಧಗೊಳಿಸುವ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು.
ಅವರು ಪಕ್ಷದ ವತಿಯಿಂದ ನಗರದ ದಾರುಸ್ಸಲಾಂ ಸಭಾಂಗಣದಲ್ಲಿ ಎಸ್ಡಿಪಿಐ ಕರ್ನಾಟಕ ರಾಜ್ಯ ಸಮಿತಿಯು ಆಯೋಜಿಸಲಾಗಿದ್ದ “ವಕ್ಫ್ ಬಚಾವೋ ಆಂದೋಲನ’ನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರಸ್ತಾವಿಕವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಮಾತನಾಡಿ, ಸಮುದಾಯದ ಹಿರಿಯರು ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿ ಬಂದಿದ್ದಾರೆ. ಮುಂದಿನ ಪೀಳಿಗೆಗೆ ಈ ಆಸ್ತಿಗಳನ್ನು ಉಳಿಸಿ ಸದ್ಬಳಕೆ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲನಾ ಅತೀಕುರ್ರಹ್ಮಾನ್, ಒಮ್ಮೆ ಅಲ್ಲಾಹನ ಹೆಸರಲ್ಲಿ ವಕ್ಫ್ ಮಾಡಲಾದ ಆಸ್ತಿಗಳು ಶಾಶ್ವತವಾಗಿ ಸಮುದಾಯದ ಸೊತ್ತಾಗಿರುತ್ತದೆ. ಅದರ ಮಾರಾಟ, ದುರ್ಬಳಕೆಗೆ ಅವಕಾಶವಿಲ್ಲ ಎಂದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಫ್ ಮಾತನಾಡಿ, ಇಸ್ಲಾಮಿನಲ್ಲಿ ನ್ಯಾಯ ಪಾಲನೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಸಮಾಜದಲ್ಲಿ ಶಾಂತಿ-ಸಮಾಧಾನ ಮತ್ತು ನ್ಯಾಯ ಪಾಲನೆಗೆ ಹೋರಾಡುವ ಎಸ್ಡಿಪಿಐ ನ ವಕ್ಫ್ ಹೋರಾಟಕ್ಕೆ ಪಾಪ್ಯುಲರ್ ಫ್ರಂಟ್ ಬೆಂಬಲ ಸೂಚಿಸುತ್ತದೆ ಎಂದು ಹೇಳಿದರು.
ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ ಮಾತನಾಡಿ, ಬಿಜೆಪಿಯ ಅನ್ವರ್ ಮಾನಿಪ್ಪಾಡಿ ವರದಿ ಬಗ್ಗೆ ಅನಾವಶ್ಯಕ ರಾಜಕೀಯ ಮಾಡುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅತ್ಯಂತ ಹೆಚ್ಚು ವಕ್ಫ್ ಆಸ್ತಿಗಳ ಕಬಳಿಕೆ ನಡೆದಿದೆ. ಬಿಜೆಪಿ ಮೊದಲು ಆ ರಾಜ್ಯದ ಒತ್ತುವರಿ ತೆರವುಗೊಳಿಸಿ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಲಿ ಎಂದರು.
ಎಸ್ಡಿಪಿಐ ರಾಷ್ಟೀಯ ಉಪಾಧ್ಯಕ್ಷೆ ಫ್ರೋ.ನಾಝ್ನೀನ್ ಬೇಗಂ ಮಾತನಾಡಿ, ವಕ್ಫ್ ಆಸ್ತಿಗಳ ಆದಾಯದಿಂದ ಸಮುದಾಯದ ಸಂಪೂರ್ಣ ಬಡತನ ಮತ್ತು ಅನಕ್ಷರತೆಯನ್ನು ಹೋಗಲಾಡಿಸಬಹುದು ಎಂದರು.
ಸಾಮಾಜಿಕ ಹೋರಾಟಗಾರರಾದ ಸರ್ದಾರ್ ಖುರೈಶಿ, ಇಲ್ಯಾಸ್ ಆರ್ಟಿಓ, ಇಮ್ರಾನ್ ರಫಾಯಿ, ಇನಾಯತುಲ್ಲಾ ಶಾಬಂದ್ರಿ ಮತ್ತಿತರರು ವಕ್ಫ್ ಹೋರಾಟದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಮೆಹಬೂಬ್ ಷರೀಫ್, ರಾಜ್ಯ ಉಪಾಧ್ಯಕ್ಷ ಅಡ್ವಕೇಟ್ ಅಬ್ದುಲ್ ಮಜೀದ್ ಖಾನ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಜಾವೀದ್ ಆಝಾಂ ಸ್ವಾಗತಿಸಿದರು. ಎಸ್ಡಿಟಿಯು ರಾಜ್ಯಾಧ್ಯಕ್ಷ ಅಬ್ದುಲ್ ರಹೀಮ್ ಪಟೇಲ್ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಸಮಿತಿ ಸದಸ್ಯ ಸಮಿ ಹಝ್ರತ್ ವಂದಿಸಿದರು. ಸಭೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಧಾರ್ಮಿಕ ನೇತಾರರು, ವಕ್ಫ್ ಪದಾಧಿಕಾರಿಗಳು ಮತ್ತು ಎಸ್ಡಿಪಿಐ ಜಿಲ್ಲಾ ನಾಯಕರು ಭಾಗವಹಿಸಿದ್ದರು.