ವರದಿ:ಶಬ್ಬೀರ್ ಅಹ್ಮದ್
ಉತ್ತಮ ಪರಿಸರ ಕಲ್ಪಿಸಲು ಯತ್ನ:ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ರೇಣುಕಾ ಅಭಿಮತ
ಕೋಲಾರ : ನಮ್ಮ ಪೂರ್ವಿಕರು ಬೆಳೆಸಿದ ಗಿಡ, ಮರಗಳನ್ನು ಪ್ರಸ್ತುತ ಕಟಾವು ಮಾಡುತ್ತಿರುವುದನ್ನು ನಿಲ್ಲಿಸಿ ಮತ್ತೆ ಗಿಡ, ಮರಗಳನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಲು ಶ್ರಮಿಸಲಾಗುತ್ತಿದೆ ಎಂದು ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಕೆ. ರೇಣುಕಾ ಹೇಳಿದರು.
ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತೇಜಸ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಂಟಿಯಾಗಿ 12 ದಿನಗಳ ಕಾಲ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಅಂಗವಾಗಿ ಬಂಗಾರಪೇಟೆ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಹೊಸದಾಗಿ 60 ಗಿಡಗಳನ್ನು ನೆಟ್ಟು ಮಾತನಾಡಿದರು.
ಪಟ್ಟಣದ ಮಹಿಳಾ ಮತ್ತು ಮಕ್ಕಳ ಅಭವೃದ್ಧಿ ಇಲಾಖೆ ಕಚೇರಿಯಲ್ಲಿ 5 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶದೊಂದಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದ್ದು, ಮಕ್ಕಳಿಗೆ ಪರಿಸರದ ಬಗ್ಗೆ ಜ್ಞಾನ ಮೂಡಿಸುವ ಸಲುವಾಗಿ ಸಂಸ್ಥೆಯಿಂದ 60 ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಣೆ ಮಾಡುವ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುತ್ತಿದೆ ಎಂದರು.
ಬೇಸಿಗೆ ಶಿಬಿರದಲ್ಲಿ 70ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಳ, ಜೇಡಿಮಣ್ಣಿನ ಕಲೆ, ಕಸದಿಂದ ರಸ ತೆಗೆಯುವ ಕೆಲಸ, ಸಮೂಹ ಸಂಗೀತ, ಸಮೂಹ ನೃತ್ಯ, ಯೋಗಾಸನ ಮುಂತಾದ ಚಟುವಟಿಕೆಗಳ ಸಮಗ್ರ ಮಾಹಿತಿ ನೀಡುವುದರಿಂದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನವಾಗುವುದಕ್ಕೆ ಬೇಸಿಗೆ ಶಿಬಿರ ದಾರಿ ದೀಪವಾಗಿದೆ ಎಂದರು.
ಕರ್ನಾಟಕ ಯುವಶಕ್ತಿ ರಾಜ್ಯಾಧ್ಯಕ್ಷ ಸುಗಟೂರು ಮಂಜುನಾಥ್, ದೈಹಿಕ ಶಿಕ್ಷಕ ಸಂಯೋಜಿತ ಮದಿವಣ್ಣನ್, ಸಿಡಿಪಿಒ ಇಲಾಖೆ ರೂಪಾ, ಜ್ಯೋತಿ, ಮಾತೃ ಭೂಮಿ ಯುವ ಕಲಾ ಸಂಘದ ಅಧ್ಯಕ್ಷ ಶೆಟ್ಟಿಕೊತ್ತನೂರು ನಾಗೇಂದ್ರ, ತೇಜುಶ್ರೀ.ಕೆ, ಯೋಗ ಶಿಕ್ಷಕ ಎಸ್.ಕೃಷ್ಣಯ್ಯ, ಭರತನಾಟ್ಯ ಶಿಕ್ಷಕಿ ಪಲ್ಲವಿ, ಚಿತ್ರಕಲಾ ಶಿಕ್ಷಕಿ ಶೋಭಾರಾಣಿ, ಕರಾಟೆ ಶಿಕ್ಷಕಿ ಆರತಿ, ಪಾಶ್ಚಾತ್ಯ ನೃತ್ಯ ಶಿಕ್ಷಕ ಜಿತು, ಜನಪದ ಕಲಾವಿದ ಮಾರುತಿ ಮತ್ತಿತರರು ಉಪಸ್ಥಿತರಿದ್ದರು.