ಇ-ಶಕ್ತಿ ಯೋಜನೆ ಅನುಷ್ಟಾನದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ-ಎಚ್ಚರಿಕೆ ಯೋಜನೆಯಿಂದ ಮಹಿಳಾ ಸಂಘಗಳ ಬಲವರ್ಧನೆ-ಬ್ಯಾಲಹಳ್ಳಿಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಸ್ತ್ರೀಶಕ್ತಿ ಸಂಘಗಳ ಸಬಲೀಕರಣದ ಜತೆ ಬ್ಯಾಂಕಿನ ಬಗ್ಗೆ ಮಹಿಳೆಯರಲ್ಲಿ ನಂಬಿಕೆ ಬಲಗೊಳಿಸುವ ಇ-ಶಕ್ತಿ ಯೋಜನೆ ಅನುಷ್ಟಾನದಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇ-ಶಕ್ತಿಯೋಜನೆಯಡಿ ನೇಮಕಗೊಂಡಿರುವ ಪ್ರೇರಕರಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ಶುಕ್ರವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಗಂಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ವತಿಯಿಂದ ನಡೆದ ಇ-ಶಕ್ತಿ ಯೋಜನೆಯ ಪ್ರೇರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರೇರಕರು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು, ಇ ಶಕ್ತಿ ಯೋಜನೆ ಅನುಷ್ಟಾನದಲ್ಲಿ ಲೋಪವಾಗದಂತೆ ಎಚ್ಚರವಹಿಸಿ ಎಂದ ಅವರು, ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಖ್ಯಾತಿಯನ್ನು ಡಿಸಿಸಿ ಬ್ಯಾಂಕ್ ಹೊಂದಿದೆ, ಈ ಹಿನ್ನಲೆಯಲ್ಲಿ ಇ-ಶಕ್ತಿ ವ್ಯಾಪ್ತಿಗೆ ಸಂಘಗಳ ಕಾರ್ಯಚಟುವಟಿಕೆಗಳನ್ನು ತರುವ ಪ್ರಾಯೋಗಿಕ ಪ್ರಯತ್ನಕ್ಕಾಗಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ನಬಾರ್ಡ್ ಆಯ್ಕೆ ಮಾಡಿಕೊಂಡಿದೆ ಎಂದರು.
ಬ್ಯಾಂಕಿನ ಸಾಧನೆಯ
ಸಹಿಸದವರಿಂದ ಟೀಕೆ
ಡಿಸಿಸಿ ಬ್ಯಾಂಕಿನ ಸಾಧನೆಯನ್ನು ಸಹಿಸಲಾರದವರು ನಾನ ರೀತಿ ಟೀಕೆ ಮಾಡುತ್ತಿದ್ದಾರೆ, ಬ್ಯಾಂಕ್ ದಿವಾಳಿಯಾಗಿದ್ದಾಗ ಇವರೆಲ್ಲಾ ಎಲ್ಲಿಗೋ ಹೋಗಿದ್ದರೋ ಎಂದ ಅವರು, ಇಂತಹ ಟೀಕೆಗಳಿಗೆ ತಕ್ಕ ಪಾಠ ಕಲಿಸಲು ಪ್ರೇರಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ವತಿಯಿಂದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ 4.40 ಲಕ್ಷಕ್ಕೂ ಎಚ್ಚು ಮಹಿಳೆಯರಿಗೆ ಸಾಲ ನೀಡಿದ್ದು, ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ, ಬಡ ಮಹಿಳೆಯರನ್ನು ಖಾಸಗಿ ಬಡ್ಡಿ ಮಾಫಿಯಗಳಿಂದ ಮುಕ್ತವನ್ನಾಗಿಸುವುದೇ ನಮ್ಮ ಗುರಿ ಎಂದರು.
ಸಾಲ ನೀಡುವಾಗ ಪಕ್ಷ, ಜಾತಿ ಬೇಧ ಬಿಟ್ಟು ಕೆಲಸ ಮಾಡುತ್ತಿದ್ದೆವೆ, ಆದರೂ ಸಹ ರಾಜಕೀಯವಾಗಿ, ನಾನಾ ರೀತಿಯ ಟೀಕೆ ಮಾಡುತ್ತಿದ್ದಾರೆ, ಬ್ಯಾಂಕಿನ ಪ್ರಗತಿಯನ್ನು ಅವರಿಂದ ಸಹಿಸಲಾಗುತ್ತಿಲ್ಲ ಆದ್ದರಿಂದಲೇ ಮನಬಂದಂತೆ ಮಾತನಾಡುತ್ತಾರೆ, ಇಂತಹ ವ್ಯಕ್ತಿಗಳಿಗೆ ತಾಯಂದಿರೇ ತಕ್ಕ ಉತ್ತರ ನೀಡುತ್ತಾರೆ ಎಂದರು.
7300 ಸಂಘಗಳು
ಇ-ಶಕ್ತಿ ವ್ಯಾಪ್ತಿಗೆ
ಮೊದಲ ಹಂತದಲ್ಲಿ 7300 ಮಹಿಳಾ ಸಂಘಗಳನ್ನು ಇ-ಶಕ್ತಿ ವ್ಯಾಪ್ತಿಗೆ ತರಲಿದ್ದು, 73 ಸಾವಿರ ಮಂದಿ ತಾಯಂದಿರು ಈ ಸಂಘಗಳ ಸದಸ್ಯರಾಗಿದ್ದಾರೆ, ಮಹಿಳಾ ಸ್ವಸಹಾಯ ಸಂಘಗಳ ಮಾಸಿಕ ಸಭೆ, ಸಾಲ ವಿತರಣೆ, ಸಾಲ ಮರುಪಾವತಿ, ಉಳಿತಾಯ ಸೇರಿದಂತೆ ಎಲ್ಲಾ ಚಟುವಟಿಕೆಗಳು ಆನ್‍ಲೈನ್‍ಗೆ ದಾಖಲಾಗಬೇಕು ಎಂದರು.
ಎಲ್ಲಾ ಮಹಿಳಾ ಸಂಘಗಳಿಗೂ ಯೂಸರ್‍ಐಡಿ ಹಾಗೂ ಪಾಸ್‍ವರ್ಡ್ ನೀಡುತ್ತಿದ್ದು, 30 ಸಂಘಗಳಿಗೆ ಒಬ್ಬರಂತೆ ನೇಮಕಗೊಂಡ ಪ್ರೇರಕರು ಆನ್‍ಲೈನ್‍ಗೆ ಅಪ್‍ಲೋಡ್ ಮಾಡಬೇಕು, ಈ ಕೆಲಸ ಡಿ.31ರೊಳಗೆ ಮುಗಿಯಬೇಕು ಎಂದು ಸೂಚಿಸಿದರು.
ಸ್ವಸಹಾಯ ಸಂಘಗಳ ಹೆಚ್ಚು ಶಿಕ್ಷಣ ಪಡೆದ ಬುದ್ದಿವಂತ ಹೆಣ್ಣು ಮಕ್ಕಳನ್ನೇ ಪ್ರೇರಕರಾಗಿ ಆಯ್ಕೆ ಮಾಡಲಾಗಿದೆ, 30 ಸಂಘಗಳಿಗೆ ಒಬ್ಬರಂತೆ ನೇಮಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ತಿಂಗಳಿಗೆ 4200 ರೂ ಸಂಭಾವನೆ ಸಿಗಲಿದೆ ಜತೆಗೆ 250 ರೂ ಮೊಬೈಲ್ ಬಳಕೆಗೆ ಹಣ ಸಿಗುತ್ತದೆ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಮಹಿಳೆಯರು ಪಡೆದುಕೊಂಡಿರುವ ಸಾಲವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು, ಮರು ಪಾವತಿ, ಸಭೆ ನಡೆಸುವುದು, ಚಟುವಟಿಕೆ ಮಾಡುವುದನ್ನು ಗಮನಿಸಲಾಗುತ್ತಿರುತ್ತದೆ, ಇದು ಯಾವುದು ನಡೆಯದಿದ್ದರೆ ಸಂಘದಲ್ಲಿ ಲೋಪ ಇದೆ ಎಂಬುದು ಗಮನಕ್ಕೆ ಬರುತ್ತದೆ, ಅದನ್ನು ತಕ್ಷಣ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರವಿ ಮಾತನಾಡಿ, ಪ್ರೇರಕರು ತಮ್ಮ ವ್ಯಾಪ್ತಿಯ ಸಂಘಗಳ ಸದಸ್ಯರನ್ನು ಭೇಟಿ ಮಾಡಿ, ಕಾರ್ಯ ಚಟುವಟಿಕೆಗಳ ಬಗ್ಗೆ ವರದಿ ಸಲ್ಲಿಸಬೇಕು, ಸಕಾಲಕ್ಕೆ ವೆಬ್ ಸೈಟ್‍ನಲ್ಲಿ ದಾಖಲು ಮಾಡಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿನ ಎಜಿಎಂಗಳಾದ ಖಲೀಂವುಲ್ಲಾ, ಹುಸೇನ್ ದೊಡ್ಡಮುನಿ, ಬೇಬಿಶಾಮಿಲಿ ಮತ್ತಿತರರರು ಹಾಜರಿದ್ದರು.