ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು

ವರದಿ: ವಾಲ್ಟರ್ ಮೊಂತೇರೊ

ಇಂದಿನ ಫಲಾನುಭವಿಗಳೇ ಮುಂದೆ ದಾನಿಗಳಾಗುವಂತಾಗಬೇಕು


ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್‍ನ ವಿದ್ಯಾರ್ಥಿವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಬೆಳ್ತಂಗಡಿ ಸಂತ ಥಾಮಸ್ ಕಾಲೇಜಿನ ಪ್ರಾಂಶುಪಾಲ ಪಿ.ಪಿ ಜೋಸೆಫ್ ಹೇಳಿದರು. ಸುಮಾರು 32 ವರ್ಷಗಳಿಂದ ಟ್ರಸ್ಟ್ ಮಾಡುತ್ತಿರುವ ಈ ಸ್ತುತ್ಯ ಕಾರ್ಯ ಅಭಿನಂದನೀಯ ಎಂದರು. ಫಲಾನುಭವಿಗಳೇ ಮುಂದೆ ದಾನಿಗಳಾದಾಗ ಸಾಧನೆ ಸಾರ್ಥಕವಾಗುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಎನ್. ತುಕರಾಮ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಸರ್ವರನ್ನೂ ಸ್ವಾಗತಿಸಿದರು. ಟ್ರಸ್ಟಿನ 44 ನಿಧಿಗಳಿಂದ ಪರಿಸರದ 190 ಮಕ್ಕಳಿಗೆ ಸುಮಾರು ರೂ. 1,35,000 ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಭಾರತೀಯ ಜೇಸಿಸ್‍ನ ವಲಯ 15ರ ಕಾರ್ಯದರ್ಶಿ ರಾಘವೇಂದ್ರ ಕರ್‍ವಾಲ್ ಅವರು ಕಾರ್ಯಕ್ರಮದ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ರಸ್ಟ್ ನಿಧಿ ಇನ್ನಷ್ಟು ಬೆಳೆದು ಹೆಚ್ಚಿನ ಫಲಾನುಭವಿಗಳು ಪ್ರಯೋಜನ ಪಡೆಯುವಂತಾಗಲಿ ಎಂದರು.
ವಲಯ ಪೂರ್ವ ಅಧ್ಯಕ್ಷ ರಾಜೇಂದ್ರ ಭಟ್ ಅವರು ಭಾರತೀಯ ಜೇಸಿಸ್‍ನ ಇತಿಹಾಸದಲ್ಲೇ ಬೆಳ್ಮಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಪ್ರಪ್ರಥಮವಾದುದು ಎನ್ನುತ್ತಾ ಕಾರ್ಕಳ ತಾಲೂಕಿನಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಶರಣ್ಯಾ ಶೆಟ್ಟಿಯವರನ್ನು ಅಭಿನಂದಿಸಿದರು. ಟ್ರಸ್ಟ್ ವತಿಯಿಂದ ಶರಣ್ಯಾಳನ್ನು ಸನ್ಮಾನಿಸಲಾಯಿತು.
ಬೆಳ್ಮಣ್ ದೊಡ್ಡಮನೆ ಶ್ರೀನಿವಾಸ ತಂತ್ರಿಯವರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ದತ್ತಿ ನಿಧಿಯೊಂದನ್ನು ಸ್ಥಾಪಿಸಿದರು. ಡಾ| ಪ್ರಕಾಶತ್ಮ ಮತ್ತು ಬೆಳ್ಮಣ್ ಕರಮಡ್ಕ ರಾಮಚಂದ್ರ ರಾವ್ ಇವರು ತಮ್ಮ ಹೆಸರಿನ ನಿಧಿಗಳ ಮೊತ್ತವನ್ನು ಹೆಚ್ಚಿಸಿದರು.
ವೇದಿಕೆಯಲ್ಲಿ ಜೇಸಿಐ ಅಧ್ಯಕ್ಷೆ ಶ್ವೇತಾ ಸುಭಾಸ್, ಟ್ರಸ್ಟ್ ಗೌರವಾಧ್ಯಕ್ಷ ಜಯಂತ್ ರಾವ್ ಪಿ., ಕಾರ್ಯದರ್ಶಿ ಅನಿಲ್ ಕುಮಾರ್, ಖಚಾಂಚಿ ಗಣಪತಿ ಕಾಮತ್, ಯುವ ಜೇಸಿಐ ಅಧ್ಯಕ್ಷ ದೀಕ್ಷಿತ್, ಜೇಸೀರೆಟ್ ಅಧ್ಯಕ್ಷೆ ಪ್ರತಿಭಾ ಎನ್ ರಾವ್ ಉಪಸ್ಥಿತರಿದ್ದರು.
ಟ್ರಸ್ಟ್ ದಾನಿಗಳು ಜೇಸಿ ಪೂರ್ವಾಧ್ಯಕ್ಷರುಗಳು, ಜೇಸಿ ವಲಯಾಧಿಕಾರಿಗಳು, ಶಿಕ್ಷಕರು ಸಹಕರಿಸಿದರು. ಕುಮಾರಿ ಶರಣ್ಯಾ ಮತ್ತು ಗಣೇಶ್ ಫಲಾನುಭವಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತಾ ಶುಭ ಹಾರೈಸಿದರು. ಜೇಸಿಐ ಕಾರ್ಯದರ್ಶಿ ಸರಿತಾ ದಿನೇಶ್ ಧನ್ಯವಾದ ಸಮರ್ಪಿಸಿದರು. ಗಣಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.