ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ತೋಟಗಾರಿಕೆ ಇಲಾಖೆ, ಕೋಲಾರ, ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರ ಹಾಗೂ ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ, ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರಿಗೆ “ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ” (ಂಖಅ) ಎಂಬ ಹೊಸ ತಂತ್ರಜ್ಞಾನ ಪರಿಚಯಿಸಲು ತರಬೇತಿ ಕಾರ್ಯಕ್ರಮವನ್ನು ದಿನಾಂಕ: 12.11.2020 ರಂದು ಬೆಳಿಗ್ಗೆ 11.00 ಗಂಟೆಗೆ ವಿಚಾರ ಸಂಕಿರಣ ಕೊಠಡಿ, ತೋಟಗಾರಿಕೆ ಮಹಾವಿದ್ಯಾಲಯ, ಟಮಕ, ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಡ್ಡೆಗಳನ್ನು ದುಬಾರಿ ಬೆಲೆ ನೀಡಿ ಖರೀದಿಸುವುದು ಮತ್ತು ಎಲ್ಲಿಂದಲೋ ಬಂದ ಗಡ್ಡೆಗಳನ್ನು ಬಿತ್ತನೆಗೆ ಉಪಯೋಗಿಸುವುದನ್ನು ತಪ್ಪಿಸಲು ಹಾಗೂ ಉತ್ಪಾದನಾ ಖರ್ಚು ಕಡಿತಗೊಳಿಸಲು ಆಲೂಗಡ್ಡೆ ಬೆಳೆಯ ಬೀಜೋತ್ಪಾದನೆಯ ನೂತನ ತಂತ್ರಜ್ಞಾನದ ಅರಿವು ಮೂಡಿಸುವುದು ಈ ತರಬೇತಿಯ ಮುಖ್ಯ ಉದ್ದೇಶವಾಗಿತ್ತು. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಪ್ರಾದೇಶಿಕ ಸಂಶೋಧನಾ ಕೇಂದ್ರ, ಬೆಂಗಳೂರು ಮತ್ತು ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದಿರುವ ಸಂಶೋಧನೆಯ ಫಲಿತಾಂಶವಾಗಿ “ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ” ಎಂಬ ವಿನೂತನ ತಂತ್ರಜ್ಞಾನದಿಂದ ಆಲೂಗಡ್ಡೆ ಸಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ ರೈತರಿಗೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂಬ ನಿಟ್ಟಿನಲ್ಲಿ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತರಬೇತಿಯ ಉದ್ಘಾಟನೆಯನ್ನು ನೆರವೇರಿಸಿದ ಶ್ರೀಮತಿ ಗಾಯತ್ರಿ ಡಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ಕೋಲಾರರವರು ಮಾತನಾಡುತ್ತ, ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ ಎಂಬ ಈ ಹೊಸ ತಂತ್ರಜ್ಞಾನವು ಕೋಲಾರದ ರೈತರಿಗೆ ವರದಾನವಾಗಲಿದೆ. ಆಲೂಗಡ್ಡೆಯನ್ನು ಇಲ್ಲಿ ಹಿಂಗಾರು ಬೆಳೆಯಾಗಿ ಬೆಳೆಯುತ್ತಿದ್ದು, ಉತ್ಪಾದನಾ ವೆಚ್ಚ ಅಧಿಕವಾಗಿದೆ. ಈ ಹೊಸ ತಂತ್ರಜ್ಞಾನದಿಂದ ಕಡಿಮೆ ವೆಚ್ಚದಲ್ಲಿ ಬೀಜದ ಗಡ್ಡೆಗಳು ಸಿಗುವುದಾದರೆ ರೈತರಿಗೆ ಅನುಕೂಲವಾಗುತ್ತದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ನರ್ಸರೀ ಮಾಡುವವರು ಇಂದು ಈ ತರಬೇತಿಯಲ್ಲಿ ಪಾಲ್ಗೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇಂದು ನಾವು ಪಂಜಾಬದಿಂದ ಬೀಜದ ಗಡ್ಡೆಗಳನ್ನು ತರಿಸಿಕೊಳ್ಳುತ್ತಿದ್ದು, ಈ ಹೊಸ ತಂತ್ರಜ್ಞಾನವನ್ನು ಸರ್ಕಾರದ ಸಂಸ್ಥೆಗಳಲ್ಲದೇ, ಸರ್ಕಾರೇತರ ಸಂಸ್ಥೆಗಳು ಹಾಗೂ ನರ್ಸರೀ ಉತ್ಪಾದಕರು ಸಹ ಮಾಡಲು ಮುಂದೆ ಬಂದರೆ ಜಿಲ್ಲೆಗೆ ಬೇಕಾಗಿರುವ ಬೀಜದ ಗಡ್ಡೆಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣದಲ್ಲಿ ಡಾ. ಬಿ.ಜಿ. ಪ್ರಕಾಶ್, ಡೀನ್, ತೋಟಗಾರಿಕೆ ಮಹಾವಿದ್ಯಾಲಯ, ಕೋಲಾರರವರು ಮಾತನಾಡಿ ಇದು ಕೋಲಾರ ಜಿಲ್ಲೆಯ ರೈತರಿಗೆ ಉಪಯುಕ್ತವಾದಂತಹ ತರಬೇತಿಯಾಗಿದೆ. ಹಾಸನದಲ್ಲಿ ಆಲೂಗಡ್ಡೆ ಬೆಳೆಯುತ್ತಿದ್ದು, ಕೋಲಾರದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆಯಲು ಪ್ರೋತ್ಸಾಹದ ಅವಶ್ಯವಿದೆ. ಆಲೂಗಡ್ಡೆಗಳಲ್ಲಿ ಹಲವು ತಳಿಗಳು ಇದ್ದು, ಸಣ್ಣ ಆಲೂಗಡ್ಡೆಯನ್ನು ಸಾಂಬಾರ ಮಾಡಲು ಉಪಯೋಗಿಸಿದರೆ, ಇನ್ನೀತರ ಆಲೂಗಡ್ಡೆ ತಳಿಗಳನ್ನು ಮೌಲ್ಯವರ್ಧನೆ (ಚಿಪ್ಸ್ ಹಾಗೂ ಡ್ರಿಂಕ್ಸ್) ಮಾಡಲು ಉಪಯೋಗಿಸುತ್ತಾರೆ. ಅಂಗಾಂಶ ಕೃಷಿಯಿಂದ ಆಲೂಗಡ್ಡೆ ಬೆಳೆಯನ್ನು ಸಮೃದ್ಧಿಯಾಗಿ ಬೆಳೆಯಬಹುದು ಎಂದು ತಿಳಿಸಿದರು.
ಈ ಕಾರ್ಯಾಗಾರದ ಪ್ರಾಸ್ತಾವಿಕ ಭಾಷಣದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಕೆ. ತುಳಸಿರಾಮ್‍ರವರು ಮಾತನಾಡಿ, ಎಲ್ಲರೂ ಇಷ್ಟಪಡುವ ಹಾಗೂ ‘ತರಕಾರಿಗಳ ರಾಜ’ ಎಂದೇ ಕರೆಯಲ್ಪಡುವ ಆಲೂಗಡ್ಡೆಯನ್ನು ನಮ್ಮ ದೇಶದಲ್ಲಿ ಹೆಚ್ಚು ಬೆಳೆಯುತ್ತಾರೆ. 100 ಕ್ಕಿಂತ ಹೆಚ್ಚು ದೇಶಗಳಲ್ಲಿಯೂ ಆಲೂಗಡ್ಡೆಯನ್ನು ಬೆಳೆಯುತ್ತಾರೆ. ಕರ್ನಾಟಕದಲ್ಲಿ ಹಾಸನ, ಬೆಳಗಾವಿ, ಧಾರವಾಡದಲ್ಲಿ ಮಳೆಯಾಶ್ರಿತ ಬೆಳೆಯಾಗಿ ಬೆಳೆದರೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಾವರಿಯಲ್ಲಿ ಬೆಳೆಯುತ್ತಾರೆ. ಆಲೂಗಡ್ಡೆ ಬೆಳೆಯಲು ಬೀಜೋತ್ಪಾದನೆ ನಮ್ಮಲ್ಲಿ ಆಗುತ್ತಿಲ್ಲ, ಇದನ್ನು ಪಂಜಾಬದಿಂದ ನಾವು ತರಿಸಿಕೊಳ್ಳುತ್ತಿರುವುದರಿಂದ ಸಾರಿಗೆ ವೆಚ್ಚ ಅಧಿಕವಾಗಿರುತ್ತದೆ ಅಲ್ಲದೇ ಆಲೂಗಡ್ಡೆಗಳು ಹಾಳಾಗುವ ಸಂಭವವಿರುತ್ತದೆ. ಆದುದರಿಂದ ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ (ಂಖಅ) ಎಂಬ ಈ ಹೊಸ ತಂತ್ರಜ್ಞಾನವನ್ನು ಪರಿಚಯಿಸುತ್ತಿದ್ದು, ಆಲೂಗಡ್ಡೆ ಬೆಳೆಗೆ ರೋಗರುಜಿನ ಕಡಿಮೆ ಇರುತ್ತದೆ ಎಂದು ತಿಳಿಸಿದರು.
ನಂತರ ತಾಂತ್ರಿಕ ಅಧಿವೇಶನದಲ್ಲಿ ಡಾ. ರವೀಂದ್ರ ರೆಡ್ಡಿ, ವಿಜ್ಞಾನಿ, ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ, ಬೆಂಗಳೂರುರವರು ಅಂಗಾಶ ಕೃಷಿಯಿಂದ ಆಲೂಗಡ್ಡೆ ಬೀಜೋತ್ಪಾದನೆ ಎಂಬ ವಿಷಯದ ಕುರಿತು ಮಾತನಾಡಿ, ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ ಮಾಡುವುದು, ಸರಳವಾಗಿ ಕೈಗೆಟುಕುವ ಮತ್ತು ಸುಲಭವಾಗಿ ಕೈಗೊಳ್ಳುವ ತಂತ್ರಜ್ಞಾನವಾಗಿದ್ದು, ಕಡಿಮೆ ಸಮಯದಲ್ಲಿ ಸಸ್ಯಗಳ ಅಭಿವೃದ್ಧಿ ಮಾಡಬಹುದೆಂದು ತಿಳಿಸಿದರು. ಈ ತಂತ್ರಜ್ಞಾನದ ವಿವಿಧ ಹಂತಗಳಾದ ಅಂಗಾಂಶ ಕೃಷಿ ಪ್ರಯೋಗಾಲಯದಲ್ಲಿ ಉತ್ಪಾದನೆ, ಪಾಲಿ ಮನೆಯಲ್ಲಿ ಚಿಗುರು ಕಡ್ಡಿಗಳ ಉತ್ಪಾದನೆ ಮತ್ತು ಜಮೀನಿನಲ್ಲಿ ಗಡ್ಡೆಗಳ ಉತ್ಪಾದನೆ ಮುಂತಾದವುಗಳನ್ನು ವಿಡಿಯೋ ಚಿತ್ರೀಕರಣದ ಮೂಲಕ ತೋರಿಸಿದರು ಹಾಗೂ ಇದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ತದನಂತರ ಶ್ರೀ. ಜಗದೀಶ್ ಸುಂಕದ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, Sಂಒ ಂಉಖಔ ಃIಔಖಿಇಅಊ, ದಾವಣಗೆರೆರವರು ಏರೋಪೊನಿಕ್ಸ್ ಪದ್ಧತಿಯಿಂದ ಆಲೂಗಡ್ಡೆ ಬೀಜವನ್ನು ಉತ್ಪಾದನಾ ಮಾಡುತ್ತಿದ್ದು, ಕಡಿಮೆ ವೆಚ್ದದಲ್ಲಿ ಈ ಪದ್ಧತಿಯಿಂದ ರೈತರಿಗೆ ಬೇಕಾಗಿರುವ ಬಿತ್ತನೆ ಗಡ್ಡೆಗಳನ್ನು ಸರಬರಾಜು ಮಾಡಲು ಸಾಧ್ಯತೆ ಇದೆ ಎಂದು ತಿಳಿಸಿದರು.
ಸಂವಾದದಲ್ಲಿ ಪ್ರಗತಿಪರ ರೈತರು ಹಾಗೂ ಅಧಿಕಾರಿಗಳು ಆಲೂಗಡ್ಡೆ ಅಂಗಾಂಶ ಗಿಡದ ಕಡ್ಡಿಗಳಿಂದ ಸಸ್ಯಾಭಿವೃದ್ಧಿ ಹಾಗೂ ಬೀಜೋತ್ಪಾದನೆ (ಂಖಅ) ಎಂಬ ಹೊಸ ತಂತ್ರಜ್ಞಾನದ ಬಗ್ಗೆ ಚರ್ಚಿಸಿ ಸೂಕ್ತ ಸಲಹೆಗಳನ್ನು ಪಡೆದುಕೊಂಡರು.
ಈ ತರಬೇತಿ ಕಾರ್ಯಕ್ರಮವನ್ನು ತೋಟಗಾರಿಕೆ ವಿಜ್ಞಾನಿಯಾದ ಡಾ. ಜ್ಯೋತಿ ಕಟ್ಟೆಗೌಡರ್ ಹಾಗೂ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ಅಂಬಿಕಾ ಡಿ.ಎಸ್, ಸಂಯೋಜಿಸಿದ್ದರು. ನಿರೂಪಣೆಯನ್ನು ಡಾ. ಅಂಬಿಕಾ ಡಿ.ಎಸ್, ಸ್ವಾಗತವನ್ನು ಡಾ. ಅನಿಲಕುಮಾರ್ ಎಸ್, ಹಾಗೂ ಡಾ. ಜ್ಯೋತಿ ಕಟ್ಟೆಗೌಡರ್ ವಂದನಾರ್ಪಣೆಯನ್ನು ಸಲ್ಲಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿಗಳು, ನರ್ಸರೀ ಉತ್ಪಾದಕರು, ರೈತ ಸಂಘಗಳ ಪ್ರತಿನಿಧಿಗಳು, ಪ್ರಗತಿಪರ ಆಲೂಗಡ್ಡೆ ರೈತರು ಸೇರಿ ಸುಮಾರು 100 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.