ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ – ಜೆ.ಮಂಜುನಾಥ್ 

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಆರೋಗ್ಯ, ನೈರ್ಮಲ್ಯ ಕುರಿತ ವಸ್ತು ಪ್ರದರ್ಶನವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ – ಜೆ.ಮಂಜುನಾಥ್ 

ಕೋಲಾರ: ಆರೋಗ್ಯ, ನೈರ್ಮಲ್ಯೀಕರಣ ಹಾಗೂ ಜಲ ಸಂರಕ್ಷಣೆ ಕುರಿತು ಸಾರ್ವಜನಿಕರಿಗೆ ತಿಳಿಯಬೇಕಾದ ಸಂಗತಿಗಳ ಬಗ್ಗೆ 2 ದಿನಗಳ ಕಾಲ ವಸ್ತು ಪ್ರದರ್ಶನವನ್ನು ಆಯೋಜಿಸಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರು ತಿಳಿಸಿದರು. 

ನಗರದ ಟಿ.ಚನ್ನಯ್ಯರಂಗಮಂದಿರದ ಆವರಣದಲ್ಲಿರುವ ಮಾಸ್ತಿ ಮತ್ತು ಡಿ.ವಿ.ಜಿ ಪ್ರತಿಷ್ಠಾನ ಸಭಾಂಗಣದಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಡೆಂಗ್ಯೂ, ಚಿಕನ್‍ಗುನ್ಯಾ, ಮಾನಸಿಕ ಕಾಯಿಲೆ, ರೋಗಗಳ ಉಲ್ಬಣಕ್ಕೆ ಕಾರಣಗಳು, ಅವುಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ಆರೋಗ್ಯ ಇಲಾಖೆಯ ಸೇವೆಗಳು ಹಾಗೂ ನೀರಿನ ಸಂರಕ್ಷಣೆ ಸೇರಿದಂತೆ ಸಾಕಷ್ಟು ವಿಚಾರಗಳಿಗೆ ಸಂಬಂಧಿಸಿದಂತೆ ಅರಿವು ಮೂಡಿಸಲು ಉತ್ತಮ ಮಾಹಿತಿಗಳನ್ನು ಪ್ರದರ್ಶನದಲ್ಲಿ ಅವಳಡಿಸಲಾಗಿದೆ ಎಂದರು. 

ಸಾರ್ವಜನಿಕರಿಗೆ ಆರೋಗ್ಯ ಮತ್ತು ನೈರ್ಮಲ್ಯೀಕರಣದ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದ್ದು ಇದಕ್ಕೆ ಬೇಕಾದ ಎಲ್ಲಾ ರೀತಿಯ ಮಾಹಿತಿಗಳನ್ನು ವಸ್ತು ಪ್ರದರ್ಶನದ ಮೂಲಕ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಇದನ್ನು ವೀಕ್ಷಿಸಿ ಸಾಕಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದಲ್ಲದೆ ಕೆಲವು ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಕೋಲಾರ ಜಿಲ್ಲೆಯಲ್ಲಿ ಬರ ಮುಂದುವರೆದಿದ್ದು 168 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಅದರಂತೆ 92 ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ 241 ಟ್ರಿಪ್ ನೀರನ್ನು ಪ್ರತಿನಿತ್ಯ ನೀಡಲಾಗುತ್ತಿದೆ. ಜೊತೆಗೆ 71 ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ 28 ವಾರ್ಡ್‍ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗದಂತೆ ಜಿಲ್ಲಾಡಳಿತ ಕ್ರಮವಹಿಸಿದೆ. ಸುಮಾರು 13 ವಾರಗಳಿಗೆ ಆಗುವಷ್ಟು ಮೇವು ಲಭ್ಯವಿದೆ. ಮೇವಿನ ಬ್ಯಾಂಕ್‍ಗಳನ್ನು 3 ಕಡೆ ತೆರೆಯಲಾಗಿದ್ದು ಇಲ್ಲಿ ಒಣ ಮೇವನ್ನು ಸಂಗ್ರಹಿಸಿಡಲಾಗಿದ್ದು ಅಗತ್ಯವಿರುವ ರೈತರಿಗೆ ವಿತರಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಎನ್.ಜಿ.ಓ ಗಳ ಸಹಯೋಗದೊಂದಿಗೆ ಮಾಲೂರು ಮತ್ತು ಬಂಗಾರಪೇಟೆಯಲ್ಲಿ ಗೋಶಾಲೆಗಳನ್ನು ತೆರೆಯಲಾಗಿದೆ ಇಲ್ಲಿ ಪೋಷಿಸುವ ಪ್ರತಿ ಒಂದು ಜಾನುವಾರಿಗೆ ಒಂದು ದಿನಕ್ಕೆ 70 ರೂಗಳನ್ನು ನೀಡಲಾಗುತ್ತಿದೆ ಎಂದರು. 

ಹಸಿರು ಮೇವಿನ ಕೊರತೆ ಉಂಟಾಗದಂತೆ ಕ್ರಮವಹಿಸಲು ನೀರು ಲಭ್ಯವಿರುವ ರೈತರಿಗೆ ಮಿನಿಕಿಟ್‍ಗಳನ್ನು ವಿತರಿಸಿ ಮೇವು ಬೆಳೆಯಲು ಪ್ರೋತ್ಸಾಹಿಸಲಾಗಿದೆ. ಇನ್ನೂ ಹೆಚ್ಚಿನ ಮಿನಿಕಿಟ್‍ಗಳನ್ನು ನೀಡಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ರೈತರಿಗೆ ಮೇವಿನ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ಒಂದು ವಾರದಿಂದ ಸ್ವಲ್ಪ ಮಟ್ಟಿಗೆ ಮಳೆಯಾಗಿದ್ದು ಕೃಷಿ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಮುಂದಿನ ದಿನಗಳಲ್ಲಿ ಉತ್ತಮ ಹಸಿರು ಮೇವು ಲಭ್ಯವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಜಲಸಂರಕ್ಷಣೆ ಮಾಡುವ ಹಾಗೂ ಜಲ ಮೂಲಗಳನ್ನು ರಕ್ಷಿಸುವ ಕೆಲಸವನ್ನು ಜಿಲ್ಲಾಡಳಿತ ವತಿಯಿಂದ ಮಾಡಲಾಗುತ್ತಿದೆ ಎಂದರು.  

ನಗರದ ಕಸ ನಿರ್ವಹಣೆಯ ಸಮಸ್ಯೆಗೆ ಕ್ರಮವಹಿಸಲಾಗಿದೆ. ಸಂಗ್ರಹಣೆಯಾದ ಕಸವನ್ನು ಹಾಕಲು ಬಳಸಲಾಗುತ್ತಿದ್ದ ಜಾಗದಲ್ಲಿ ಕೆಲವು ಸಮಸ್ಯೆಗಳು ಎದುರಾಗಿದ್ದು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಅದಕ್ಕಾಗಿ ಕಸ ಹಾಕಲು ಹೊಸದಾಗಿ ಜಮೀನು ಗುರುತಿಸಿ 10 ಎಕರೆ ಭೂಮಿ ನೀಡಲಾಗಿದ್ದು ಇದನ್ನು ಸಿದ್ದಗೊಳಿಸಲಾಗುತ್ತಿದೆ. ಅದರ ಜೊತೆಗೆ ಪೌರ ಕಾರ್ಮಿಕರ ಸಂಖ್ಯೆ ಹೆಚ್ಚಿಸಲು ಕ್ರಮವಹಿಸಲಾಗಿದೆ. ಕಸದ ಸಮಸ್ಯೆಯ ನಿವಾರಣೆಗೆ  ಮುಂದಿನ ದಿನಗಳಲ್ಲಿ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿವರಿಸಿದರು. 

ವಸ್ತು ಪ್ರದರ್ಶನದಲ್ಲಿ ತಾಯಂದಿರಿಗೆ ಸಂಪೂರ್ಣ ವಾತ್ಸಲ್ಯ, ಸಾರ್ವತ್ರಿಕ ಲಸಿಕೆ, ತುರ್ತು ವೈದ್ಯಕೀಯ ಸೇವೆಗಳು, ನವಜಾತ ಶಿಶುಗಳ ಆರೈಕೆ, ಕ್ಷಯರೋಗ ನಿಯಂತ್ರಣ ವಿಧಾನಗಳು, ಮಾನಸಿಕ ಆರೋಗ್ಯ ಸುದಾರಿತ ಕ್ರಮಗಳು, ಡೆಂಗ್ಯೂ ಮತ್ತು ಚಿಕನ್‍ಗುನ್ಯಾ ನಿಯಂತ್ರಣ ಕ್ರಮಗಳು, ತಾಯಿ ಕಾರ್ಡ್, ಕಾಂಗುರೋ ಮಾದರಿ ಆರೈಕೆ, ಪ್ಲೋರೋಸಿಸ್ ತಡೆಯುವುದು, ಉಚಿತ ಆರೋಗ್ಯ ಸಹಾಯವಾಣಿ, ಜಲಸಂರಕ್ಷಣೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಜಾಗೃತಿ ಮತ್ತು ಮಾಹಿತಿ ನೀಡುವ ಪ್ರದರ್ಶನ ಪಲಕಗಳನ್ನು ಪ್ರದರ್ಶಿಸಲಾಗಿದೆ. 

ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ವಿಜಯ ಕುಮಾರ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಚಂದನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ದಿನಕರ್ ಎನ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.