ಆನ್‍ಲೈನ್ ಶಿಕ್ಷಣಕ್ಕೆ ಸರ್ಕಾರದಿಂದಲೇ ಉಚಿತವಾಗಿ ಲ್ಯಾಪ್‍ಟಾಪ್, ಮೊಬೈಲ್, ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಕೋಲಾರ ರೈತ ಸಂಘದಿಂದ  ಸರ್ಕಾರಕ್ಕೆ ಮನವಿ ನೀಡಿ ಒತ್ತಾಯ.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

 

ಆನ್‍ಲೈನ್ ಶಿಕ್ಷಣಕ್ಕೆ ಸರ್ಕಾರದಿಂದಲೇ ಉಚಿತವಾಗಿ ಲ್ಯಾಪ್‍ಟಾಪ್, ಮೊಬೈಲ್, ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ಕೋಲಾರ ರೈತ ಸಂಘದಿಂದ  ಸರ್ಕಾರಕ್ಕೆ ಮನವಿ ನೀಡಿ ಒತ್ತಾಯ.

 

 

ಕೋಲಾರ,ಜು.07: ಆನ್‍ಲೈನ್ ಶಿಕ್ಷಣಕ್ಕೆ ಸರ್ಕಾರದಿಂದಲೇ ಉಚಿತವಾಗಿ ಲ್ಯಾಪ್‍ಟಾಪ್, ಮೊಬೈಲ್, ಇಂಟರ್ನೆಟ್ ಸೌಲಭ್ಯ ಕಲ್ಪಿಸುವಂತೆ ರೈತ ಸಂಘದಿಂದ ಉಪ ನಿರ್ದೇಶಕರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ನೀಡಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ ವಿಶ್ವದಾದ್ಯಂತ ಕಳೆದ 4-5 ತಿಂಗಳಿನಿಂದ ರಣಕೇಕೆ ಹಾಕುತ್ತಿರುವ ಕೊರೊನಾ ವೈರಸ್‍ನಿಂದಾಗಿ ಎಲ್ಲ ವರ್ಗದ ಜನರ ಜೀವನದ ಮೇಲೆಯೂ ಪರಿಣಾಮಕಾರಿಯಾಗಿ ಹೊಡೆತ ಬಿದ್ದಿರುವುದರಿಂದಾಗಿ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ. ಸದ್ಯ ಕೊರೊನಾ ಮಹಾಮಾರಿಯಿಂದ ಪಾರಾಗಿ ಜೀವನ ಕಟ್ಟಿಕೊಳ್ಳುವುದೇ ದೊಡ್ಡ ಸವಾಲಾಗಿದ್ದು, ಕೋಟ್ಯಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಕೆಲಸಗಳನ್ನು ಕಳೆದುಕೊಂಡು ವಿಧಿ ಇಲ್ಲದೆ ಮನೆಗಳನ್ನು ಖಾಲಿ ಮಾಡಿಕೊಂಡು ತಮ್ಮ ಸ್ವಗ್ರಾಮಗಳತ್ತ ಜನರು ತೆರಳುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಇದ್ಯಾವುದನ್ನೂ ಲೆಕ್ಕಿಸದೆ ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆನ್‍ಲೈನ್ ಶಿಕ್ಷಣ ವ್ಯವಸ್ಥೆ ಜಾರಿಗೆ ಶಿಕ್ಷಣ ಇಲಾಖೆಯು ಹಠದಿಂದ ಮುಂದಾಗಿರುವ ಧೋರಣೆಯೇ ಸರಿಯಲ್ಲ. ಆದರೂ ಹೈಕೋರ್ಟ್‍ನಿಂದಲೂ ಸಮ್ಮತಿ ಪಡೆದುಕೊಂಡಿರುವುದರಿಂದ ಜಾರಿಯಾಗುವುದರಲ್ಲಿ ಸಂಶಯವೇ ಇಲ್ಲ.
ಕೊರೊನಾದಿಂದಾಗಿ ಬಯಲುಸೀಮೆ ಜಿಲ್ಲೆಗಳಲ್ಲಿನ ರೈತರು, ಸಾಮಾನ್ಯ ವರ್ಗದ ಜನರ ಪಾಡು ಹೇಳತೀರದಾಗಿದ್ದು, ಇದೀಗ ಆನ್‍ಲೈನ್ ಶಿಕ್ಷಣ ಜಾರಿಯಿಂದಾಗಿ ಅದಕ್ಕೆ ಬೇಕಾಗುವ ಲ್ಯಾಪ್‍ಟಾಪ್, ಆಂಡ್ರ್ಯಾಯ್ಡ್ ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕ ಪಡೆದುಕೊಳ್ಳಲು ಸಾವಿರಾರು ರೂಪಾಯಿ ವೆಚ್ಚವನ್ನು ಪೋಷಕರು ಭರಿಸಬೇಕಾಗಿದ್ದು, ಇದು ನಿಜಕ್ಕೂ ಗಾಯದ ಮೇಲೆ ಬರೆ ಎಳೆಯುವುದೇ ಹೊರತು ಬೇರೆ ಏನೂ ಅಲ್ಲ. ಆನ್‍ಲೈನ್ ಶಿಕ್ಷಣ ಜಾರಿಗೆ ತರುವಷ್ಟು ಸುಲಭವಾಗಿ ಅನುಷ್ಟಾನ ಸಾಧ್ಯವಿಲ್ಲ ಎಂದು ಅಸಮಾದಾನ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ದಿನನಿತ್ಯ ಸಾಮಾನ್ಯವಾಗಿರುತ್ತದೆ. ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶಗಲ್ಲಿ ಕರೆ ಮಾಡುವುದಕ್ಕೂ ಕೆಲವು ಕಡೆ ನೆಟ್‍ವರ್ಕ್ ಇರುವುದಿಲ್ಲ. ಇನ್ನು ಇಂಟರ್ನೆಟ್ ಹೇಗೆ. ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳು 10 ಸಾವಿರರೂ ಮೊಬೈಲ್, 25 ಸಾವಿರರೂ ಲ್ಯಾಪ್‍ಟಾಪ್‍ಗಳನ್ನು ಕೊಳ್ಳಲು ಸಾಧ್ಯವಿಲ್ಲ. ಅವೆಲ್ಲ ಸಮಸ್ಯೆಗಳನ್ನೂ ಮನಗಂಡು ಸರ್ಕಾರವು ಉಚಿತವಾಗಿ ಲ್ಯಾಪ್‍ಟಾಪ್, ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಿದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಪೋಷಕರಿಗೂ ಹೊರೆ ತಪ್ಪಿದಂತಾಗುತ್ತದೆಂದು ಒತ್ತಾಯಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ದನಲಕ್ಷೀರವರು ಈ ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಮನವಿ ನೀಡುವಾಗ ಮಂಗಸಂದ್ರ ತಿಮ್ಮಣ್ಣ, ಈಕಂಬಳ್ಳಿ ಮಂಜುನಾಥ್, ಕ್ಯಾವ್ಯಾಂಜಲಿ ಮುಂತಾದವರಿದ್ದರು.