ಆಗ್ನೇಯ ಪದವೀಧರರ ಕ್ಷೇತ್ರ-ಬಿಜೆಪಿ ಗೆಲುವಿನ ಓಟಕ್ಕೆ ಅಡ್ಡಿಯಿಲ್ಲ,ಬೋಗಸ್ ಮತದಾರರ ಪಟ್ಟಿ ನೋಟೀಸ್ ಜಾರಿ-ವೈಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ಪದವೀಧರರಲ್ಲದವರನ್ನು ಮತಪಟ್ಟಿಗೆ ಸೇರಿಸಿರುವ ಪ್ರಕರಣದ ಸಂಬಂಧ ಶ್ರೀನಿವಾಸಪುರ ತಾಲ್ಲೂಕಿನ ತಹಸಿಲ್ದಾರ್ ಹಾಗೂ ಇಬ್ಬರು ಉಪತಹಸೀಲ್ದಾರರಿಗೆ ಚುನಾವಣಾ ಆಯೋಗ ಷೋಕಾಸ್ ನೋಟೀಸ್ ಜಾರಿ ಮಾಡಿದೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಸೋಮವಾರ ವಿಧಾನಪರಿಷತ್ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಸಂಬಂಧ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ ಪರ ನಗರದ ವಿವಿಧೆಡೆ ಮತಯಾಚನೆ ಮಾಡಿ ಅವರು ಮಾತನಾಡುತ್ತಿದ್ದರು.
30 ಮಂದಿ ಬೋಗಸ್ ಮತದಾರರು ಎಂದು ದೂರು ನೀಡಲಾಗಿದ್ದು, ಇದರಲ್ಲಿ 14 ಮಂದಿ ಪದವೀಧರರೇ ಅಲ್ಲ ಎಂಬುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಅ.17 ರಂದು ಆಯೋಗ ಶ್ರೀನಿವಾಸಪುರ ತಹಸೀಲ್ದಾರ್ ಸುಜಾತಾ, ರೋಣೂರು ಉಪತಹಸೀಲ್ದಾರ್ ನರೇಶ್, ನೆಲವಂಕಿ ಉಪತಹಸೀಲ್ದಾರ್ ಮಲ್ಲೇಶ್ ಅವರಿಗೆ ನೋಟೀಸ್ ನೀಡಿದೆ ಎಂದು ತಿಳಿಸಿದರು.
ಇದೇ ರೀತಿ ಕಳೆದ ಏಪ್ರಿಲ್ 27 ರಂದು ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿ ಈಗಾಗಲೇ ಮೇ.14 ರಂದು 124 ಮಂದಿಯನ್ನು ಬೋಗಸ್ ಮತದಾರರು ಎಂದು ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ವಿವರಿಸಿದರು
.

ಬೋಗಸ್ ಮತಹಾಕಿದರೆ ಶಿಕ್ಷೆ

ಪದವೀಧರರಲ್ಲದವರು ಬೋಗಸ್ ಮತದಾರರಾಗಿ ಮತ ಹಾಕಲು ಬಂದರೆ ಅವರನ್ನು ವೀಡಿಯೋ ಚಿತ್ರೀಕರಿಸಿ, ಎಫ್‍ಐಆರ್ ದಾಖಲಿಸಿ ಶಿಕ್ಷೆಗೆ ಗುರಿಪಡಿಸಲು ಚುನಾವಣಾ ನಿಯಮಗಳಲ್ಲಿ ಅವಕಾಶವಿದ್ದು, 1 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಿಜೆಪಿ ಗೆಲುವಿಗೆ ಅಡ್ಡಿಯೇ ಇಲ್ಲ

ಆಗ್ನೇಯ ಪದವೀಧರರ ಕ್ಷೇತ್ರ ವ್ಯಾಪ್ತಿಯ 34 ತಾಲ್ಲೂಕುಗಳಲ್ಲಿ ಬಿಜೆಪಿ ಪ್ರಬಲವಾಗಿದೆ, ಅಭ್ಯರ್ಥಿ ಚಿದಾನಂದ ಎಂ.ಗೌಡ ಗೆಲುವು ನಿಶ್ಚಿತವಾಗಿದೆ, ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪ್ರಾಬಲ್ಯ ಎಲ್ಲೂ ಇಲ್ಲ ಎಂದರು.
ಕಣದಲ್ಲಿ ಚಿದಾನಂದಗೌಡರಿದ್ದರೂ, ನನಗೆ ಮತ ನೀಡಿ ಎಂದೇ ಮತಯಾಚನೆ ಮಾಡಿದ ವೈ.ಎ.ನಾರಾಯಣಸ್ವಾಮಿ, ಶಿಕ್ಷಕರು.ಪದವೀಧರರ,ನೌಕರರ ಹಿತ ಕಾಯುವ ಶಕ್ತಿ ಬಿಜೆಪಿಗೆ ಮಾತ್ರ ಇದೆ ಎಂದರು.
ಇದಕ್ಕೆ ಅನೇಕ ನಿದರ್ಶನಗಳಿವೆ, ಸರ್ಕಾರಿ ನೌಕರರಿಗೆ ಒಂದೇ ಅವಧಿಯಲ್ಲಿ ವೇತನ ಆಯೋಗ ಜಾರಿ, ಹೊಸ ಆಯೋಗ ರಚನೆ ಎರಡೂ ಕಾರ್ಯ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಶಿಕ್ಷಕರು,ನೌಕರರು, ಪದವೀಧರರ ಸಮಸ್ಯೆಗಳಿಗೆ ಸ್ಪಂದನೆ ಅಧಿಕಾರದಲ್ಲಿರುವ ಪಕ್ಷದಿಂದ ಮಾತ್ರವೇ ಸಾಧ್ಯ, ಚಿದಾನಂದ ಎಂ.ಗೌಡರ ಗೆಲುವು ನನ್ನ ಗೆಲುವು ಇದ್ದಂತೆ, ಜಿಲ್ಲೆಯ ಮತದಾರರು ನನಗೆ ಮತ ನೀಡಬೇಕು ಎಂದು ಕೋರಿದರು.
ದಾವಣಗೆರೆಯಲ್ಲಿ 19 ಸಾವಿರ,ಚಿತ್ರದುರ್ಗದಲ್ಲಿ 22 ಸಾವಿರ, ತುಮಕೂರಿನಲ್ಲಿ 32, ಕೋಲಾರ ಜಿಲ್ಲೆಯಲ್ಲಿ 21950 ಹಾಗೂ ಚಿಕ್ಕಬಳ್ಳಾಪುರದಲ್ಲಿ 14 ಸಾವಿರ ಮಂದಿ ಪದವೀಧರ ಮತದಾರರಿದ್ದಾರೆ, ಬಿಜೆಪಿಗೆ ನೆಟ್‍ವರ್ಕ್ ಇದೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ನೆಟ್‍ವರ್ಕ್ ಇಲ್ಲ ಎಂದು ತಿಳಿಸಿ ಅತಿ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲ್ಲುವರು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಭವನದ ವಿವಿಧ ಇಲಾಖೆಗಳು, ಗುಪ್ತಾ,ಮಹಿಳಾ ಸಮಾಜ, ಪಿಡಿಒಗಳ ಮತಯಾಚನೆ, ಬಿಜೆಪಿ ಕಾರ್ಯಕರ್ತರೊಂದಿಗೆ ಭೇಟಿ ನಡೆಸಿ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಸುರೇಶ್‍ಬಾಬು, ನಿಕಟಪೂರ್ವ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ರವಿಚಂದ್ರ,ಎಸ್.ಚೌಡಪ್ಪ, ಬಿ.ಎ.ಕವಿತಾ,ಲಲಿತಾಕಲಾ ವಾಣಿ, ಹಾಲಿ ಖಜಾಂಚಿ ವಿಜಯ್, ಉಪನ್ಯಾಸಕರ ಸಂಘದ ಗೋಪಿಕೃಷ್ಣನ್,ರತ್ನಪ್ಪ, ಸಹಶಿಕ್ಷಕರ ಸಂಘದ ಪದಾಧಿಕಾರಿಗಳಾದ ಶಂಕರಪ್ಪ, ಮುಕುಂದ,ಸುರೇಶ್‍ಕುಮಾರ್, ಶರಣಪ್ಪ,ಮೋಹನಾಚಾರಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಾಗರಾಜ್,ನಾರಾಯಣಪ್ಪ, ದೈಹಿಕ ಶಿಕ್ಷಕರ ಸಂಘದ ನಾಗರಾಜ್,ನಗರಸಭಾ ಸದಸ್ಯ ಮುರಳಿಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ಬಿಜೆಪಿ ಯುವಮೋರ್ಚಾ ಬಾಲಾಜಿ ಮತ್ತಿತರರಿದ್ದರು.