ವರದಿ:ಶಬ್ಬೀರ್ ಅಹ್ಮದ್
ಅರ್ಕ ಶಾಲೆಯಲ್ಲಿ ಮಾನಸಿಕ ಆರೋಗ್ಯ, ಸಂವಹನ ಕಾರ್ಯಾಗಾರ : ಕಲಿಕೆಗೆ ಮನೋವಿಜ್ಞಾನವು ಪೂರಕ-ಡಾ.ಸುಬ್ರಹ್ಮಣ್ಯಂ ಅಭಿಮತ
ಕೋಲಾರ:- ಮಕ್ಕಳ ಮನಸ್ಸಿನ ಭಾವನೆಗೆ ಘಾಸಿಗೊಳಿಸದೆ ಪೋಷಣೆ ಮಾಡಿದಲ್ಲಿ ಸಕಾರಾತ್ಮಕ ವ್ಯಕ್ತಿತ್ವ ರೂಪಗೊಂಡು ಸಮಾಜಕ್ಕೆ ಮಾದರಿಯಾಗಲು ಸಾಧ್ಯ ಎಂದು ಮನೋವೈದ್ಯ ಡಾ|| ಎಸ್. ಸುಬ್ರಹ್ಮಣ್ಯ ತಿಳಿಸಿದರು.
ಶನಿವಾರ ತಾಲ್ಲೂಕಿನ ಮಡೇರಹಳ್ಳಿಯ ಅರ್ಕ ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸಂವಹನೆ ಕುರಿತಾಗಿ ಶಿಕ್ಷಕರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡುತ್ತಿದ್ದರು.
ಪೋಷಕರು ಬಾಲ್ಯದಿಂದಲೇ ಮಗುವಿನ ಗುಣಗಳನ್ನು ಗಮನಿಸುತ್ತಾ ಅವಶ್ಯವಿದ್ದಲ್ಲಿ ಸೂಕ್ತ ರೀತಿಯ ತಿದ್ದುಪಡಿ ನೀಡಿ ಭಾವನಾತ್ಮಕವಾದ ಸಂಬಂಧಗಳನ್ನು ಕಲ್ಪಿಸಿಕೊಟ್ಟರೆ ಮುಂದೆ ತನ್ನ ಮತ್ತು ಇತರರ ಬಗ್ಗೆ ಕಾಳಜಿಯ ಅರಿವು ಮಗುವಿಗಾಗುತ್ತದೆ ಎಂದರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಬೇಕು ಮತ್ತು ಅಂತಹ ಮಕ್ಕಳನ್ನು ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದಲ್ಲಿ ಮಕ್ಕಳು ಕಲಿಕೆಗೆ ಆಸಕ್ತಿತೋರುತ್ತಾರೆಂದರು.
ಯಾವುದೇ ಮಗು ಕಲಿಕೆಯಲ್ಲಿ ಹಿಂದುಳಿದಿದ್ದರೆ ಅವರನ್ನು ಕೀಳಾಗಿ,ಅಸಹನೆಯಿಂದ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಬಾರದು, ಇತರೆ ಮಕ್ಕಳಿಗೆ ಅವರನ್ನು ಹೋಲಿಸಿ ಹೀಗಳೆಯುವುದು ಸಹಾ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಮಕ್ಕಳು ನಲಿಯುತ ಕಲಿಯುವ ವಾತಾವರಣ ಸೃಷ್ಟಿಸುವ ಮೂಲಕ ಶಿಕ್ಷಕರೆಂದರೆ ಅವರಿಗೆ ಭಯ ಇರಬಾರದು, ಪ್ರೀತಿ,ಗೌರವವಿದ್ದರೆ ಬೇಗ ಕಲಿಕೆಯಲ್ಲಿ ಪ್ರಗತಿ ಕಾಣಬಹುದು ಎಂದರು.
ವಿವಿಧ ಚಟುವಟಿಕೆಗಳ ಮೂಲಕ ಕಲಿಕೆಯಲ್ಲಿ ಮನೋವಿಜ್ಞಾನದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಟ್ಟ ಅವರು, ಪ್ರತಿ ಹಂತದಲ್ಲೂ ಮಕ್ಕಳ ಮೇಲೆ ಶಿಕ್ಷಕರು ಸಕಾರಾತ್ಮಕ ಪರಿಣಾಮ ಬೀರುವಂತೆ ಕೆಲಸ ಮಾಡಬೇಕೆಂದರು.
ಕಾರ್ಯಾಗಾರದಲ್ಲಿ ಶಾಲೆಯ ಅಧ್ಯಕ್ಷ ಡಾ|| ಆರ್. ವೇಣುಗೋಪಾಲ್, ತಂತ್ರಜ್ಞ ಸಂತೋಷ್, ಪ್ರಾಂಶುಪಾಲ ಪ್ರೀತಿರೋಜ್ಲನ್, ಆಡಳಿತಾಧಿಕಾರಿ ಜೆ. ಎನ್. ರಾಮಕೃಷ್ಣ ಮತ್ತು ಶಾಲಾ ಸಿಬ್ಬಂದಿ ಹಾಜರಿದ್ದರು.