ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಅನಧಿಕೃತವಾಗಿ ಕೆ.ಸಿ.ವ್ಯಾಲಿ ನೀರನ್ನು ಕದಿಯುವವರ ವಿರುದ್ಧ ಕಾನೂನು ಕ್ರಮ -ಹೆಚ್.ನಾಗೇಶ್
ಕೋಲಾರ: ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲು 1350 ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಸಿ.ವ್ಯಾಲಿ ನೀರನ್ನು ಹರಿಸುತ್ತಿದ್ದು, ಕೆರೆಗಳು ತುಂಬಲು ಬಿಡದೆ ಅನಧಿಕೃತವಾಗಿ ನೀರನ್ನು ಕದಿಯುವವರ ವಿರುದ್ಧ ಕಾನೂನು ರೀತಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್. ನಾಗೇಶ್ ರವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಕೆ.ಸಿ.ವ್ಯಾಲಿ ಟಾಸ್ಕ್ ಫೋರ್ಸ್ ಸಮಿತಿಯ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆ.ಸಿ ವ್ಯಾಲಿ ನೀರು 300 ಎಂಎಲ್‍ಡಿ ವರೆಗೂ ನೀರು ಬರುತ್ತಿತ್ತು. ಜನ್ನಘಟ್ಟ ಕೆರೆಯು 2 ತಿಂಗಳಾದರು ತುಂಬಲಿಲ್ಲ ಇದರ ಬಗ್ಗೆ ಅಧಿಕಾರಿಗನ್ನು ವಿಚಾರಿಸಿದಾಗ ಕೆಲವರು ಅನಧಿಕೃತವಾಗಿ ಪಂಪ್‍ಸೆಟ್ ನೀರನ್ನು ಪಡೆಯುತ್ತಿರುವುದರಿಂದ ತಡವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಕೆರೆಗೆ ನೀರು ಹರಿಸಬೇಕು ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು.
ಜಿಲ್ಲೆಯಲ್ಲಿ ಅಂತರ್ಜಲವನ್ನು ವೃದ್ಧಿಸುವ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಅದರೆ ಕೆ.ಸಿ ವ್ಯಾಲಿ ನೀರನ್ನು ರೈತರ ಹೆಸರಿನಲ್ಲಿ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನೀರನ್ನು ಕದಿಯುವುದನ್ನು ತಡೆಗಟ್ಟಲು ಟಾಸ್ಕ್‍ಫೋರ್ಸ್ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುತ್ತಿದೆ. ಕೆ ಸಿ ವ್ಯಾಲಿ ಯೋಜನೆಯ ಮಹತ್ವದ ಕುರಿತು ರೈತರಲ್ಲಿ ಆರಿವು ಮೂಡಿಸಬೇಕು. ಇದರಿಂದ ನೀರು ಕದಿಯುತ್ತಿರುವವರ ವಿರುದ್ಧ ರೈತರೇ ಪೊಲೀಸರಿಗೆ ಮಾಹಿತಿಯನ್ನು ನೀಡುತ್ತಾರೆ ಎಂದು ತಿಳಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಕೆಸಿವ್ಯಾಲಿ ನೀರು ಸರಿಯಾದ ಸಮಯಕ್ಕೆ ಕೆರೆಗಳಿಗೆ ತುಂಬುತ್ತಿಲ್ಲ. ಅನಧಿಕೃತವಾಗಿ ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟಿ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಬೇಕು. ಕೆರೆಗಳಲ್ಲಿ ಬತ್ತಿ ಹೋಗಿರುವ ಬೋರ್‍ವೆಲ್‍ಗಳನ್ನು ಸಂಪೂರ್ಣವಾಗಿ ಮುಚ್ಚಿಸಬೇಕು. ಇದರಿಂದ ಕೆರೆ ತುಂಬಿ ಮುಂದಿನ ಕೆರೆಗೆ ನೀರು ಹೋಗಲು ಸಹಕಾರಿಯಾಗುತ್ತದೆ. ಇಲ್ಲವಾದಲ್ಲಿ ನೀರು ಆ ಬೋರ್‍ವೆಲ್‍ಗಳಲ್ಲಿ ಇಂಗಿ ಪೋಲಾಗುತ್ತದೆ. ಕೆಲವರು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಕೋಡಿ ಕಡಿಮೆ ಮಾಡಿದ್ದಾರೆ. ಇದರಿಂದ ಕೆರೆಯ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗುತ್ತಿದೆ. ಆದ್ದರಿಂದ ಕೆರೆಯ ಒತ್ತುವರಿ ತೆರವುಗೊಳಿಸಿ ಕೆರೆಯ ಸುತ್ತ ಮರಗಳನ್ನು ಬೆಳೆಸುವುದರಿಂದ ಪ್ರಾಣಿ ಪಕ್ಷಿಗಳಿಗೆ ಆನುಕೂಲವಾಗಲಿದೆ ಎಂದು ತಿಳಿಸಿದರು.
ಕೆಸಿವ್ಯಾಲಿ ನೀರು ನರಸಾಪುರ ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ಬೋರ್‍ವೆಲ್‍ಗಳ ನೀರು ಮರುಪೂರಣವಾಗಿದೆ. ಇದರಿಂದ ಅಲ್ಲಿನ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಕೆರೆಗಳಿಗೆ ನೀರು ಬಿಡುವ ಮುಂಚಿತವಾಗಿ ಕೆರೆಯನ್ನು ಸ್ವಚ್ಚಗೊಳಿಸಬೇಕು ಹಾಗೂ ನೀರು ಸೋರಿಕೆಯಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಶ್ರೀನಿವಾಸಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ರಮೇಶ್‍ಕುಮಾರ್ ಅವರು ಮಾತನಾಡಿ, ಕೆಸಿವ್ಯಾಲಿ ಯೋಜನೆಯ ಮುಖ್ಯ ಉದ್ದೇಶ ಜಿಲ್ಲೆಯ ಕೆರೆಗಳಿಗೆ ನೀರನ್ನು ತುಂಬಿಸಿ ಅಂತರ್ಜಲವನ್ನು ವೃದ್ದಿಸುವುದಾಗಿದೆ. ಜಿಲ್ಲೆಯ ಕೆಲ ರೈತರು ಕೆಸಿ ವ್ಯಾಲಿ ನೀರನ್ನು ಅಕ್ರಮವಾಗಿ ಬಳಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯವರು ಸ್ಕ್ವಾಡ್ ಮೂಲಕ ಕಾರ್ಯಾಚರಣೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಕೆರೆಯಲ್ಲಿರುವ ಜಾಲಿ ಮರಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ. ನಂಜೇಗೌಡ ಅವರು ಮಾತನಾಡಿ, ನರಸಾಪುರ ಪಂಪ್‍ಹೌಸ್‍ನಿಂದ ಮಾಲೂರು ತಾಲ್ಲೂಕಿಗೆ ಕೆಸಿ ವ್ಯಾಲಿ ನೀರು ಹರಿಸುತ್ತಿದ್ದು, ಶಿವಾರಪಟ್ಟಣದ ಕೆರೆಗೆ
60 ಎಂಎಲ್‍ಡಿ ನೀರು ಹರಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ 20 ರಿಂದ 25 ಎಂಎಲ್‍ಡಿ ನೀರು ಮಾತ್ರ ಬರುತ್ತಿದೆ. ಇದರಿಂದ ಕೆರೆಗಳು ತುಂಬುವುದು ನಿಧಾನವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಮುಂದಿನ ದಿನಗಳಲ್ಲಿ 60 ಎಂಎಲ್‍ಡಿ ನೀರನ್ನು ನೀಡಲೇಬೇಕು ಎಂದು ಹೇಳಿದರು.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಎಸ್.ಎನ್. ನಾರಾಯಣಸ್ವಾಮಿ ಅವರು ಮಾತನಾಡಿ ಕೆಸಿ ವ್ಯಾಲಿ ಯೋಜನೆಯನ್ನು ಜಾರಿಗೆ ತರಲು ರಮೇಶ್‍ಕುಮಾರ್ ಅವರ ಶ್ರಮ ಅಪಾರವಾಗಿದೆ. ಯಾವುದೇ ಕಾರಣಕ್ಕೂ ನೀರು ನಿಲ್ಲಿಸದೆ ಕಡ್ಡಾಯವಾಗಿ ಕೆರೆಗಳಿಗೆ ನೀರು ಹರಿಸುವುದು ಯೋಜನೆಯ ಉದ್ದೇಶವಾಗಿದೆ. ಕಳ್ಳತನವಾಗುತ್ತಿರುವ ನೀರನ್ನು ತಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆ.ಜಿ.ಎಫ್. ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ ಅವರು ಮಾತನಾಡಿ ಕೆ.ಸಿ ವ್ಯಾಲಿ ನೀರನ್ನು ಬೇತಮಂಗಲ ಮತ್ತು ರಾಮಸಾಗರ ಕೆರೆಗಳಿಗೆ ಶೀಘ್ರದಲ್ಲಿಯೇ ಬಿಡಬೇಕು ಎಂದ ಅವರು ಕೆ ಸಿ ವ್ಯಾಲಿ ನೀರಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.
ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಮಾತನಾಡಿ ಜಿಲ್ಲೆಗೆ ಕೆ ಸಿ ವ್ಯಾಲಿ ಯೋಜನೆಯಿಂದ 400 ಎಂಎಲ್‍ಡಿ ನೀರು ಬರಬೇಕಿತ್ತು. ಆದರೆ 250 ಎಂಎಲ್‍ಡಿ ನೀರು ಮಾತ್ರ ಬರುತ್ತಿದೆ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಹೆಚ್ಚಿಸಬೇಕು. ಕೆರೆಯ ಸುತ್ತಮುತ್ತಲಿನ ಪ್ರದೇಶವನ್ನು ಬಫರ್ ಜೋನ್ ಎಂದು ಘೋಷಣೆ ಮಾಡಿದರೆ ಕೆರೆಯ ನೀರು ಸೋರಿಕೆಯಾಗದಂತೆ ಕಾಪಾಡಿಕೊಳ್ಳಬಹುದು ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಹೆಚ್.ವಿ ದರ್ಶನ್, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ ರಡ್ಡಿ, ಕೆ.ಜಿ.ಎಫ್ ಪೋಲಿಸ್ ವರಿಷ್ಠಾಧಿಕಾರಿಗಳಾದ ಮಹಮದ್ ಸುಜಿತಾ, ಅಪರ ಜಿಲ್ಲಾಧಿಕಾರಿಗಳಾದ ಶಿವಸ್ವಾಮಿ, ಕೋಲಾರ ಉಪವಿಭಾಗಾಧಿಕಾರಿಗಳಾದ ಸೋಮಶೇಖರ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.