ಸೆಪ್ಟಂಬರ್ 26 ರಂದು  ಪವರ್‍ಲಿಪ್ಟರ್ ವಿಶ್ವನಾಥ ಗಾಣಿಗ ಹುಟ್ಟೂರಿಗೆ ಆಗಮನ:ಅದ್ದೂರಿಯ ಸ್ವಾಗತಕ್ಕೆ ಸಿದ್ಧತೆ

jananudi.com network

ಸೆಪ್ಟಂಬರ್ 26 ರಂದು  ಪವರ್‍ಲಿಪ್ಟರ್ ವಿಶ್ವನಾಥ ಗಾಣಿಗ ಹುಟ್ಟೂರಿಗೆ ಆಗಮನ:ಅದ್ದೂರಿಯ ಸ್ವಾಗತಕ್ಕೆ ಸಿದ್ಧತೆ


ಕುಂದಾಪುರ:ಕೆನಡಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಭಾರಎತ್ತುವ ಸ್ಪರ್ಧೆಯಲ್ಲಿ ನೂತನ ದಾಖಲೆಯನ್ನು ನಿರ್ಮಿಸಿ ಸ್ಟ್ರಾಂಗ್ ಮ್ಯಾನ್ ಆಗಿ ಮೂಡಿಬಂದ ಪವರ್‍ಲಿಪ್ಟರ್ ವಿಶ್ವನಾಥ ಗಾಣಿಗ ಸೆ.26ರಂದು ತನ್ನ ಹುಟ್ಟೂರಿಗೆ ಆಗಮಿಸುತ್ತಿದ್ದು, ದೇಶ,ರಾಜ್ಯ, ಜಿಲ್ಲೆ ಜತೆಗೆ ನಮ್ಮ ತಾಲೂಕಿಗೆ ಕೀರ್ತಿ ತಂದ ಈ ಕ್ರೀಡಾಪಟುವನ್ನು ಅದ್ಧೂರಿಯಾಗಿ ಸ್ವಾಗತಿಸಲು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಜತೆಗೆ ಕುಂದಾಪುರ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗರ ಹುಟ್ಟೂರಿನ ಅನೇಕ ಸಂಘ ಸಂಸ್ಥೆಗಳು ನಿರ್ಧರಿಸಿದೆ.
ಸೆ.26ರಂದು ಮಧ್ಯಾಹ್ನ 3 ಗಂಟೆಗೆ ಸಾಲಿಗ್ರಾಮಕ್ಕೆ ಆಗಮಿಸುವ ಅವರು ಅಲ್ಲಿ ಸಾಲಿಗ್ರಾಮ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಅವರಿಗೆ ಗೌರವವನ್ನು ಸಲ್ಲಿಸಿಕೊಂಡು, ತೆರೆದ ಜೀಪ್‍ನಲ್ಲಿ ಮೆರವಣಿಗೆ ಹೊರಡಲಿದೆ. ಮೈಕ್, ಚಂಡೆ, ಒಂದಷ್ಟು ಕಾರುಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಮೆರವಣಿಗೆಯು ಕೋಟ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಸಾಗಿ, ಕೋಟೇಶ್ವರದ ಒಳಪೇಟೆಯ ಮೂಲಕ ಮುಂದೆ ಹೋಗಿ ಅಲ್ಲಿಂದ ಕುಂದಾಪುರದ ಕಡೆಗೆ ಸರ್ವಿಸ್ ರಸ್ತೆಯಲ್ಲೇ ಸಾಗಿ ಶಾಸ್ತ್ರೀವೃತ್ತದಲ್ಲಿ ತೆರೆದ ವಾಹನದಲ್ಲೇ ಸ್ಥಳೀಯ ಸಂಘ ಸಂಸ್ಥೆಗಳು ಅವರಿಗೆ ಹಾರಾರ್ಪಣೆಯನ್ನು ಮಾಡುವ ವ್ಯವಸ್ಥೆ ಮಾಡಲಾಗಿದ್ದು, ಜತೆಗೆ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ವತಿಯಿಂದ ನಗದು ಚೆಕ್‍ನ್ನು ನೀಡಿ ಅವರಿಗೆ ಗೌರವ ಸಲ್ಲಿಸಲಿದೆ. ಅಲ್ಲಿಂದ ಕುಂದಾಪುರದಲ್ಲಿ ಮೆರವಣಿಗೆ ನಡೆಸಿ ಹೆಮ್ಮಾಡಿಗೆ ತಲುಪಿ, ಮೆರವಣಿಗೆ ಅವರ ಹುಟ್ಟೂರಿಗೆ ಸಾಗಲಿದೆ. ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸುವಂತೆ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಕೊಗ್ಗ ಗಾಣಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.