ಸಹಕಾರಿ ಲ್ಯಾಬ್ ಸ್ಥಾಪನೆಗೆ ಎಂಡಿ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷರಿಂದ ಅಟೆಂಡರ್‍ವರೆಗೆ ಠೇವಣಿ ಸಂಗ್ರಹದ ಗುರಿ – ಡಿಸಿಸಿ ಬ್ಯಾಂಕ್ ಮೊಬೈಲ್, ಮೂಕ್ರೋ ಎಟಿಎಂ ಸೇವೆ ಮಾರ್ಚ್‍ನಲ್ಲಿ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

 

 

 

ಸಹಕಾರಿ ಲ್ಯಾಬ್ ಸ್ಥಾಪನೆಗೆ ಎಂಡಿ ನೇತೃತ್ವದಲ್ಲಿ ಸಮಿತಿ ಅಧ್ಯಕ್ಷರಿಂದ ಅಟೆಂಡರ್‍ವರೆಗೆ ಠೇವಣಿ ಸಂಗ್ರಹದ ಗುರಿ – ಡಿಸಿಸಿ ಬ್ಯಾಂಕ್ ಮೊಬೈಲ್, ಮೂಕ್ರೋ ಎಟಿಎಂ ಸೇವೆ ಮಾರ್ಚ್‍ನಲ್ಲಿ

 

 

ಕೋಲಾರ: ಮಾರ್ಚ್ 1 ರಂದು ಡಿಸಿಸಿ ಬ್ಯಾಂಕ್‍ನಿಂದ ಸಂಚಾರಿ ಮತ್ತು ಮೈಕ್ರೋ ಎಟಿಎಂ ಸೌಲಭ್ಯವನ್ನು ಉದ್ಘಾಟಿಸಲು ಇಲ್ಲಿನ ಸಹಕಾರಿ ಯೂನಿಯನ್‍ನಲ್ಲಿ ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ವಿಷಯ ಪ್ರಸ್ತಾಪ ಮಾಡಿದ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರು, ಕೋಲಾರ ಡಿಸಿಸಿ ಬ್ಯಾಂಕಿನ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ ನಬಾರ್ಡ್‍ನಿಂದ ತಲಾ 20,250 ರೂ.ವೆಚ್ಚದ 200 ಮೈಕ್ರೋ ಎಟಿಎಂ ಹಾಗೂ 2 ಮೊಬೈಲ್ ಎಟಿಎಂಗಳಿಗಾಗಿ ವಾಹನ ಖರೀದಿಗೆ 27 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದು ಇದು ಸಹಕಾರಿ ವ್ಯವಸ್ಥೆಯ ಸೌಂದರ್ಯವಾಗಿದೆ ಎಂದು ಹರ್ಷಿಸಿದರು.
ಇದು ಡಿಸಿಸಿ ಬ್ಯಾಂಕ್ ವಹಿವಾಟು ಹೆಚ್ಚಳಕ್ಕೆ ವರದಾನ ಆಗಲಿದ್ದು ಹಾಲು ಡೇರಿ ಸದಸ್ಯರಿಗೆ ಮನೆ ಬಾಗಿಲಲ್ಲೇ ಸೌಲಭ್ಯ ಒದಗಿಸಲು ಸಿಬ್ಬಂದಿ ಮುಂದಾಗಬೇಕು. ಸ್ತ್ರೀ ಶಕ್ತಿ ಸಂಘಗಳ ಸದಸ್ಯರಿಗೂ ಇದರ ಸವಲತ್ತು ಒದಗಿಸುವ ಜತೆಗೆ ಇಡೀ ಹಳ್ಳಿಯ ಜನರು ಹಳ್ಳಿ ಸೊಸೈಟಿಗಳಲ್ಲಿ ಖಾತೆ ತೆರೆಯಲು ಆಂದೋಲನ ರೂಪಿಸಬೇಕೆಂದು ತಿಳಿಸಿದರು.
ಠೇವಣಿ ಆಂದೋಲನ: ಆರ್ಥಿಕ ವರ್ಷ ಮುಕ್ತಾಯದ ಹೊಸಿಲಲ್ಲಿರುವ ನಾವು ಇದೀಗ ಸಮರೋಪಾದಿಯಲ್ಲಿ ಎಲ್ಲ ಕೆಲಸಗಳನ್ನೂ ಮಾಡಬೇಕಿದ್ದು ಠೇವಣಿ ಸಂಗ್ರಹ,ಎನ್‍ಪಿಎ ಕಡಿಮೆ ಮಾಡುವುದು,ಸಾಲ ವಿತರಣೆ,ವಸೂಲಾತಿ,ಸಹಕಾರಿ ಲ್ಯಾಬ್ ಸ್ಥಾಪನೆ ಜತೆಗೆ ನಬಾರ್ಡ್ ಆಡಿಟ್‍ಗೆ ಸಜ್ಜಾಗಬೇಕಿದ್ದು ಇದು ಸವಾಲಿನ ಪರ್ವ ಸಮಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮಾರ್ಚ್ 31ವರೆಗೆ ರಜೆಯನ್ನೂ ಸಹಾ ಬಿಟ್ಟು ಸಂಘಟಿತರಾಗಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಲ್ಯಾಬ್ ಸಮಿತಿ: ಬ್ಯಾಂಕಿನ ಎಂಡಿ ರವಿ ಅವರ ನೇತೃತ್ವದಲ್ಲಿ ಸೊಸೈಟಿ ಸಿಇಒಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವ ಮೂಲಕ ಸಹಕಾರಿ ಲ್ಯಾಬ್ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ ಅಧ್ಯಕ್ಷರು ಕನಿಷ್ಟ ವೆಚ್ಚದಲ್ಲಿ ಗುಣಮಟ್ಟದ ಸೇವೆಯನ್ನು ಒದಗಿಸಬೇಕು. ಪ್ರಸ್ತುತ ಮಾರುಕಟ್ಟೆ ದರದಲ್ಲಿನ ಶೇ.25 ವೆಚ್ಚದಲ್ಲಿ ಬಡವರಿಗೆ ಲ್ಯಾಬ್ ಪ್ರಯೋಜನ ದೊರೆಯುವಂತೆ ಮಾಡಬೇಕು ಎಂದು ಸೂಚಿಸಿದರು.
ಅಸಮಾಧಾನ: ಠೇವಣಿ ಸಂಗ್ರಹವನ್ನು ಬ್ಯಾಂಕಿನ ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಗೋವಿಂದಗೌಡರು ಬ್ಯಾಂಕಿನ ಅಧ್ಯಕ್ಷರಿಂದ ಅಟೆಂಡರ್‍ವರೆಗೆ ಗುರಿ ಸಾಧಿಸಲು ಮುಂದಾಗಬೇಕಿದ್ದು ಈಗಾಗಲೇ ಸಂಗ್ರಹ ಆಗಿರುವ 20 ಕೋಟಿ ರೂ. ಸಮಾಧಾನ ತಂದಿಲ್ಲ ಎಂದರು. ಪ್ರಸ್ತುತ 850 ಕೋಟಿ ರೂ. ಸಾಲ ವಿತರಣೆ ಆಗಿದ್ದು ಮಾರ್ಚ್ ಅಂತ್ಯದೊಳಗೆ ಒಂದು ಸಾವಿರ ಕೋಟಿ ರೂ. ಗುರಿ ಸಾಧನೆ ಆಗಬೇಕು. ಸಾಲ ತೀರಿಸಿರುವ ಮಹಿಳಾ ಸಂಘಗಳಿಗೆ ತಕ್ಷಣ ಮರು ಸಾಲ ಕಡ್ಡಾಯವಾಗಿ ವಿತರಣೆ ಆಗಬೇಕಿದ್ದು ಮಹಿಳಾ ಸಂಘಗಳ ಸದಸ್ಯರ ಮನವೊಲಿಸಿ ವೈಯಕ್ತಿಕ ಖಾತೆಯಲ್ಲಿ ಕನಿಷ್ಠ 5 ಸಾವಿರ ರೂ. ಇಡುವಂತೆ ಮಾಡಬೇಕು ಎಂದು ತಿಳಿಸಿದರು.
ಆಸ್ತಿ ಹರಾಜು: ಸುಸ್ತಿ ಆಗಿರುವ ಸಾಲಗಳಿಗೆ ಕೊಟ್ಟಿರುವ ಆಸ್ತಿಯನ್ನು ತಕ್ಷಣ ಹರಾಜು ಮಾಡಬೇಕೆಂದು ಸೂಚಿಸಿದ ಬ್ಯಾಂಕಿನ ಅಧ್ಯಕ್ಷರು ಮಾರ್ಚ್ 31ರೊಳಗೆ ಯಾವುದೇ ಸಾಲದ ಖಾತೆ ಸುಸ್ತಿ ಆಗದಂತೆ ಎಚ್ಚರಿಕೆ ವಹಿಸುವ ಜತೆಗೆ ಕನಿಷ್ಠ 500 ಕೋಟಿ ರೂ. ಠೇವಣಿ ಸಂಗ್ರಹ ಆಗುವಂತೆ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಬ್ಯಾಂಕಿನಿಂದ 2 ಲಕ್ಷ ಪಾಂಪ್ಲೆಟ್ ಪ್ರಿಂಟ್ ಮಾಡಿಸಿ ಹಳ್ಳಿಗಳಲ್ಲಿ ಹಂಚುವ ಮೂಲಕ ಮಹಿಳೆಯರು,ರೈತರ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲಿ ತೆರೆಯುವಂತೆ ಮಾಡಿ ವಹಿವಾಟು ಹೆಚ್ಚು ಮಾಡಬೇಕೆಂದು ಕಟ್ಟಪ್ಪಣೆ ಮಾಡಿದರು.
ಸಾಲ ವಿತರಣೆ: ಜ.29 ರಂದು ಬುಧವಾರ ಬಡವರ ಬಂಧು ಸಾಲ ವಿತರಣೆಯನ್ನು ಕೋಲಾರದಲ್ಲಿ ಹಮ್ಮಿಕೊಳ್ಳಲು ಸೂಚಿಸಿದ ಅಧ್ಯಕ್ಷರು, ಕಾಯಕ ಯೋಜನೆ ಸಾಲವನ್ನು ಶೀಘ್ರವಾಗಿ ವಿತರಿಸಲು ಸಿದ್ದರಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿದರಲ್ಲದೆ ಮುಳಬಾಗಲು ತಾಲೂಕುನಲ್ಲಿ ಸುಸ್ತಿ ಸಾಲ ವಿತರಣೆಗೆ ಸಮಸ್ಯೆ ಆಗಿರುವುದರಿಂದಾಗಿ ನಿರ್ದೇಶಕ ಸೊಣ್ಣೇಗೌಡರು ಜವಾಬ್ದಾರಿ ವಹಿಸಿಕೊಂಡು ಸಮಸ್ಯೆ ಪರಿಹರಿಸಬೇಕೆಂದು ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಆರ್.ನಾರಾಯಣರೆಡ್ಡಿ,ಎಚ್.ನರಸಿಂಹರೆಡ್ಡಿ,ನಾಗನಾಳಸೋಮಣ್ಣ,ಎಂ.ಎಲ್.ಅನಿಲ್‍ಕುಮಾರ್,ಬಿ.ವಿ.ವೆಂಕಟರೆಡ್ಡಿ,ಯಲವಾರ ಸೊಣ್ಣೇಗೌಡ, ಅಶ್ವಥಪ್ಪ, ಎಂಡಿ ರವಿ, ಎಜಿಎಂಗಳಾದ ಎಂ.ಆರ್.ಶಿವಕುಮಾರ್,ಎನ್.ಬೈರೇಗೌಡ,ಕಲೀಂವುಲ್ಲಾ,ಎಂ.ಚೌಡಪ್ಪ,ವ್ಯವಸ್ಥಾಪಕ ಕೆ.ನಾಗೇಶ್ ಇದ್ದರು.
ಫೋಟೋ ಕ್ಯಾಪ್ಷನ್: ಕೋಲಾರದ ಸಹಕಾರಿ ಮಯೂನಿಯನ್‍ನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡರು ಸೊಸೈಟಿ ಆನ್‍ಲೈನ್‍ಗೆ ಸಂಬಂಧಿಸಿದಂತೆ ಹೈದರಾಬಾದ್‍ನ ವಿ ಸಾಫ್ಟ್ ಟೆಕ್ನಾಲಜೀಸ್ ತಜ್ಞರ ಜತೆ ಚರ್ಚೆ ನಡೆಸಿದರು.

 

ಸೊಸೈಟಿ ಲೆಕ್ಕ ಇನ್ನು ಪಕ್ಕಾ

ಅವಳಿ ಜಿಲ್ಲೆಗಳ ಸೊಸೈಟಿ ಲೆಕ್ಕ ಇನ್ನು ಮುಂದೆ ಪಕ್ಕಾ ಆಗಲಿದ್ದು ಇದಕ್ಕಾಗಿ ಹೈದರಾಬಾದ್ ಮೂಲದ ವಿ ಸಾಫ್ಟ್ ಟೆಕ್ನಾಲಜೀಸ್ ಅವರ ತಂತ್ರಾಂಶವನ್ನು ಆನ್‍ಲೈನ್‍ಗಾಗಿ ಅಳವಡಿಸಿಕೊಳ್ಳಲಾಗುತ್ತಿದೆ.
ಪ್ರಥಮ ಹಂತದಲ್ಲಿ ಮಾರ್ಚ್ 31ರೊಳಗೆ ಅವಳಿ ಜಿಲ್ಲೆಗಳ 60 ಸೊಸೈಟಿಗಳು ಆನ್‍ಲೈನ್ ಆಗಲಿದ್ದು ಏಪ್ರಿಲ್‍ನಲ್ಲಿ ಶೇ.100 ಗುರಿ ಸಾಧಿಸಲು ಡಿಸಿಸಿ ಬ್ಯಾಂಕ್ ಯೋಜನೆ ರೂಪಿಸಿದೆ.
ವಿಂಡೋಸ್ 10 ಜತೆಗೆ ಆಫೀಸ್ 2013 ವ್ಯವಸ್ಥೆ ಆನ್‍ಲೈನ್‍ನಲ್ಲಿ ಅಳವಡಿಸಲಾಗಿದ್ದು ಕೋರ್ ಬ್ಯಾಂಕಿಂಗ್ ಮಾಡಲಾಗಿದೆ. ಹಳ್ಳಿ ಸೊಸೈಟಿಯಲ್ಲಿ ನಡೆಯುವ ಪ್ರತಿಯೊಂದು ವಹಿವಾಟು ಡಿಸಿಸಿ ಬ್ಯಾಂಕ್ ಸರ್ವರ್, ಬೆಂಗಳೂರು ಹಾಗೂ ಹೈದರಾಬಾದ್‍ನ ಕೇಂದ್ರ ಕಚೇರಿಯಲ್ಲಿ ದಾಖಲಾಗುತ್ತದೆ. ಆಡಿಟ್ ಮೋಡ್‍ನಿಂದಾಗಿ ಒಂದೇ ಕ್ಷಣದಲ್ಲಿ ಆಡಿಟರ್‍ಗೆ ದಾಖಲೆಗಳನ್ನು ಒದಗಿಸುವ ಮೂಲಕ ನಿಗದಿತ ಸಮಯದಲ್ಲಿ ಸೊಸೈಟಿ ಆಡಿಟ್ ಮಾಡಿಸಬಹುದಾಗಿದೆ.