ಸರ್ಕಾರಿ ಆಸ್ಪತ್ರೆಗೆ ಔಷಧಿಗಳ ಸರಬರಾಜು ಆಗದೆ ಇರುವುದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಸ್ಪೀಕರ್ ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಸರ್ಕಾರಿ ಆಸ್ಪತ್ರೆಗೆ ಔಷಧಿಗಳ ಸರಬರಾಜು ಆಗದೆ ಇರುವುದರ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವ ಸ್ಪೀಕರ್ ರಮೇಶ್ ಕುಮಾರ್.


ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವಲ್ಲಿ ಇಲಾಖೆಯವರು ನಿರ್ಲಕ್ಷ್ಯ ತೋರುತ್ತಿದ್ದೀರಿ. ಸರ್ಕಾರ ಬಿಕ್ಕಟ್ಟಿನಲ್ಲಿ ಇದೆ ಎಂದು ನೀವು ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಸರ್ಕಾರ ಇರಲಿ ಅಥವಾ ಬೇರೆ ಸರ್ಕಾರ ಬರಲಿ ಔಷಧಿ ವಿತರಣೆ ಮಾಡದೆ ಖಾಸಗಿ ಆಸ್ಪತ್ರೆಗಳ ಹಾಗೂ ಔಷಧಿ ಕಂಪನಿಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ ನೀಡಿದರು.
ಕಳೆದ ಒಂದು ವಾರದಿಂದ ರಾಜ್ಯದ ಸಮ್ಮಿಶ್ರ ಸರ್ಕಾರದ ಶಾಸಕರ ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ಅಪಘಾತದಲ್ಲಿ ಮೃತಪಟ್ಟಿದ್ದ ತನ್ನ ಕಾರ್ಯಕರ್ತನ ಶವ ನೋಡಲು ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದಾಗ ಮಾಧ್ಯಮದೊಂದಿಗೆ ಸಮಾಧಾನದೊಂದಿಗೆ ಮಾತನಾಡಿದರಲ್ಲದೆ ಸರ್ಕಾರಿ ಆಸ್ಪತ್ರೆಯ ಮೂಲಭೂತ ಸೌಲಭ್ಯಗಳು ಹಾಗೂ ಔಷಧಿಗಳ ಸರಬರಾಜಿನ ಬಗ್ಗೆ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡು ತನ್ನ ಮಾಮೂಲಿ ಶೈಲಿನಲ್ಲಿಯೇ ಸರ್ಕಾರ ಬೀಳುತ್ತಿದೆ ಎಂದು ಆಟ ಆಡುತ್ತಿದ್ದೀರ ಯಾವುದೇ ಸರ್ಕಾರ ಬರಲಿ ನಾನಂತೂ ನಿಮ್ಮನ್ನು ಬಿಡುವುದಿಲ್ಲ ಖಾಸಗಿ ಆಸ್ಪತ್ರೆಗಳೊಂದಿಗೆ ಹಾಗೂ ಔಷಧಿ ಕಂಪನಿಗಳೊಂದಿಗೆ ಶಾಮೀಲಾಗಿ ವಿತರಣೆಯಲ್ಲಿ ವಿಳಂಭ ಮಾಡುತ್ತಿದ್ದೀರಿ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಕೆಂಡಮುಂಡಲಾದರು.
ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ತಾವು ಶಿಫಾರಸ್ಸು ಮಾಡಿರುವ ಯಂತ್ರಗಳು ಹಾಗೂ ಔಷಧಿಗಳ ಬೇಡಿಕೆ ಇದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ಶ್ರೀನಿವಾಸ್ ಸ್ಪೀಕರ್‍ರವರಿಗೆ ತಿಳಿಸಿದರು. ದೂರವಾಣಿ ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಬೆಂಗಳೂರಿನ ಔಷಧಿಗಳ ಸರಬರಾಜು ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡ ಸ್ಪೀಕರ್ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಹೊರಗಿನ ಔಷದಿಗೆ ಚೀಟಿ ಬರೆದುಕೊಡುವಂಗಿಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ನೀವು ಔಷಧಿ ಸರಬರಾಜು ಮಾಡುವುದಿಲ್ಲವಾದರೆ ರೋಗಿಗಳ ಗತಿ ಏನಾಗಬೇಕು ನಾನು ಶ್ರೀನಿವಾಸಪುರ ಆಸ್ಪತ್ರೆಗೆ ಸಂಬಂಧಿಸಿದಂತೆ ನಾನು ಮಾತನಾಡುತ್ತಿಲ್ಲ. ರಾಜ್ಯದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿಗಳು ಸರಬರಾಜು ಆಗುತ್ತಿಲ್ಲ ಎಂದು ದೂರುಗಳು ಬಂದಿವೆ ಎಂದು ಕರ್ನಾಟಕ ಡ್ರಗ್ಸ್ ಲಾಜಿಕಲ್ ನಿರ್ದೇಶಕರಿಗೆ ತರಾಟೆಗೆ ತೆಗೆದುಕೊಂಡು ಔಷಧಿಗಳು ಇಲ್ಲ ಎಂದರೆ ಟೆಂಡರ್‍ಗಾಗಿ ಕಾಯುವಂತಿಲ್ಲ ಮೊದಲು ಔಷಧಿ ಸರಬರಾಜು ಮಾಡಿರಿ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ವಿಜಯ್ ಕುಮಾರ್ ಹಾಗೂ ಜಿಲ್ಲಾ ಔಷಧಿ ಉಗ್ರಾಣದ ಶ್ರೀರಾಮ್, ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರಗೆ ಆಗಮಿಸುತ್ತಿದ್ದಂತೆಯೆ ಆರೋಗ್ಯಾಧಿಕಾರಿ ವಿಜಯ್ ಕುಮಾರ್‍ರವರನ್ನು ತರಾಟೆಗೆ ತೆಗೆದುಕೊಂಡು ಕಮೀಷನರ್ ಸಭೆಗಳಿಗೆ ಆಗಮಿಸಿದಾಗ ಔಷಧಿಗಳ ಬಗ್ಗೆ ಮಾತನಾಡಲು ನಿನಗೇನಾಗಿದೆ. ಎ.ಆರ್.ವಿ. ಚುಚ್ಚುಮದ್ದು, ಸಿರಂಜಿಗಳು ಸೇರಿದಂತೆ ಕೆಲವೊಂದು ಔಷಧಿಗಳು ಸರಬರಾಜು ಆಗುತ್ತಿಲ್ಲ ಎಂದು ದೂರುಗಳು ಬಂದಿವೆ ಎಂದಾಗ ಸರಬರಾಜು ಮಾಡಲಾಗುತ್ತಿದೆ ಎಂದು ಔಷಧಿ ಉಗ್ರಾಣದ ಶ್ರೀರಾಮ್ ತಿಳಿಸಿದಾಗ ಸುಳ್ಳನ್ನು ಹೇಳಬೇಡಿ ದೇವರು ಸಹ ನಿಮ್ಮನ್ನು ಕ್ಷಮಿಸುವುದಿಲ್ಲ ಬಡವರ ಜೊತೆ ಚೆಲ್ಲಾಟ ಆಡುವುದನ್ನು ತಕ್ಷಣ ನಿಲ್ಲಿಸಿ ಎಂದು ಎಚ್ಚರಿಕೆ ನೀಡಿದರು.
ಎಚ್ಚರಿಕೆ : ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಾಧಿಕಾರಿ ಮೋಹನ್ ಕುಮಾರ್ ಜೊತೆ ಚರ್ಚಿಸಿದ ಸ್ಪೀಕರ್ ಕೊಳವೆ ಬಾವಿಗಳನ್ನು ಕೊರೆಸಲು ಟೆಂಡರ್ ಕರೆಯಲಾಗಿದೆ. ಟೆಂಡರ್ ಅನುಮೋಧನೆ ವಿಳಂಭವಾಗಿದೆ ಎಂದಾಗ ಕೋಲಾರದ ಎಇಇಯವರನ್ನು ಸಂಪರ್ಕಿಸಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಸಮಸ್ಯೆ ಉಂಟಾಗಿದ್ದರೂ ಟೆಂಡರ್ ಅನುಮೋಧನೆ ಮಾಡಲು ನಿಮಗೆ ಕಷ್ಟವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಟೆಂಡರ್‍ನಲ್ಲಿ ಭಾಗವಹಿಸಿರುವ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.