ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ಹೊರ ವಲಯದ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿದರು.
ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಹೊರ ವಲಯದ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಮಾತನಾಡಿ, ಸಿಸಿ ರಸ್ತೆ, ಚರಂಡಿ ನಿರ್ಮಾಣದಂಥ ಕಾಮಗಾರಿಗಳನ್ನು ಎನ್ಆರ್ಇಜಿ , 14ನೇ ಆರ್ಥಿಕ ಯೋಜನೆಯಡಿ ಕೈಗೊಳ್ಳಬೇಕು. ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ತಾಲ್ಲೂಕಿನಲ್ಲಿ ಅಗತ್ಯ ಇರುವ ಸರ್ಕಾರಿ ಪ್ರೌಢ ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಬೇಕು. ಸುಸಜ್ಜಿತ ಪ್ರಯೋಗ ಶಾಲೆ ನಿರ್ಮಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸಬೇಕು. ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಹೇಳಿದರು.
ಪಟ್ಟಣದ ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ತಾಲ್ಲೂಕು ರಾಜ್ಯ ಮಟ್ಟದಲ್ಲಿ ಉತ್ತಮ ಸ್ಥಿತಿಯಲ್ಲಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಫಲಿತಾಂಶ ಹೆಚ್ಚಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಅದಕ್ಕೆ ಪೂರಕವಾಗಿ ಏನಾದರೂ ಕೊರತೆಗಳಿದ್ದಲ್ಲಿ ಸರಿಪಡಿಸಿಕೊಳ್ಳಬೇಕು. ಮಕ್ಕಳ ಹಿತದೃಷ್ಟಿಯಿಂದ ವಿಶೇಷ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಕಂದಾಯ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಅಗತ್ಯವಾದ ಕನಿಷ್ಠ 5 ಎಕರೆಯಷ್ಟು ಸರ್ಕಾರಿ ಜಮೀನು ಗುರುತಿಸಬೇಕು. ಈಗಾಗಲೆ ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಸಮಸ್ಯೆ ಬೃಹದಾಕಾರ ತಳೆದಿದೆ. ಮುಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಅಂಥದ್ದೇ ಸಮಸ್ಯೆ ತಲೆದೋರುವ ಸಂಭವ ಇರುವುದರಿಂದ, ಮುಂಜಾಗ್ರತಾ ಕ್ರಮವಾಗಿ ಕಸ ವಿಲೇವಾರಿ ಘಟಕಗಳನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಸುದರ್ಶನ್, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್, ತಹಶೀಲ್ದಾರ್ ಕೆ.ಎನ್.ಸುಜಾತ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಬಿಇಒ ಉಮಾದೇವಿ ಇದ್ದರು.