ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬೆಳೆಯಬೇಕು ಎಂದು ಸತ್ಯಸಾಯಿ ಸೇವಾ ಸಮಿತಿ ಮುಖ್ಯಸ್ಥ ವೆಂಕಟೇಶ ಪಾಟೀಲ ಹೇಳಿದರು.
ಪಟ್ಟಣದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ಸತ್ಯಸಾಯಿ ಸೇವಾ ಸಮಿತಿ ಹಾಗೂ ಗುರುದೇವ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಸೇವಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾನವ ಸೇವೆಯೇ ಮಾಧವ ಸೇವೆ ಎಂಬುದು ನಮ್ಮ ಪೂರ್ವಿಕರ ಧ್ಯೇಯ ವಾಕ್ಯವಾಗಿದೆ. ಅದರಂತೆ ಅಗತ್ಯವಿರು ವಿಕ್ತಿಗಳಿಗೆ ಕೈಲಾದ ಸೇವೆ ಮಾಡುವುದು ನಮ್ಮ ಸಾಮಾಜಿಕ ಕರ್ತವ್ಯ ಎಂದು ಭಾವಿಸಬೇಕು ಎಂದು ಹೇಳಿದರು.
ಸೇವೆ ಮಾಡಲು ಹಣ ಇರಬೇಕು ಎಂಬುದು ಸರಿಯಲ್ಲ. ಸೇವೆಗೆ ಹಣವೇ ಮುಖ್ಯವಲ್ಲ. ಹಣ ರಹಿತವಾಗಿಯೂ ಸೇವೆ ಸಲ್ಲಿಸಬಹುದಾಗಿದೆ ಎಂಬ ವಿಷಯವನ್ನು ಮನಗಾಣಬೇಕು. ಸೇವೆಗೆ ವಯೋಮಾನದ ಗಣನೆ ಇಲ್ಲ. ಎಲ್ಲ ವಯಸ್ಸಿನವರೂ ತಮ್ಮ ಕೈಲಾದ ಸೇವೆ ಮಾಡಬಹುದಾಗಿದೆ. ಸೇವೆಯಲ್ಲಿ ದೊಡ್ಡದು ಚಿಕ್ಕದು ಎಂಬ ಭೇದವಿಲ್ಲ ಎಂದು ಹೇಳಿದರು.
ಬದಲಾದ ಪರಿಸ್ಥಿತಿಯಲ್ಲಿ ಮಾನವೀಯ ಮೌಲ್ಯಗಳು ಮಣ್ಣುಗೂಡುತ್ತಿವೆ. ಪಾಪ ಪ್ರಜ್ಞೆ ಕಡಿಮೆಯಾಗುತ್ತಿದೆ. ಇದು ನೈತಿಕತೆಗೆ ಮಾರಕವಾಗಿ ಪರಿಣಮಿಸಿದೆ. ಶಿಕ್ಷಕ ಸಮುದಾಯ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ನೆರವಾಗಬೇಕು. ಸೇವೆ ಸಮಾಜಕ್ಕೆ ವರವಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲ ಶ್ರೀನಿವಾಸರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜ ಸೇವಾ ಸಂಸ್ಥೆಗಳು ಸಮಾಜಕ್ಕೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಅದರಲ್ಲೂ ಯುವ ಸಮುದಾಯವನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ನೆರವಾಗಬೇಕು. ಸೇವೆ ಮತ್ತು ಸಹಕಾರ ಮನೋಭಾವ ಗರಿಗೆದರುವತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಹರೀಶ್ ಕುಮಾರ್್, ಆನಂದ್ ಕುಮಾರ್, ಸತೀಶ್ ನಾಯಕ್, ಸತ್ಯನಾರಾಯಣ, ರಘು, ಕಮಲಾಕ್ಷ, ಮನೋಹರ್, ಹರೀಶ್, ರಾಜ್ಕುಮಾರ್, ಲೋಕೇಶ್ ಇದ್ದರು.