ಶ್ರೀನಿವಾಸಪುರ: ವಿಜೃಂಭಣೆಯ 105ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

ವರದಿ: ಶಬ್ಬೀರ್ ಅಹ್ಮದ್

ಶ್ರೀನಿವಾಸಪುರ: ವಿಜೃಂಭಣೆಯ 105ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ


ಕನ್ನಡ ಸಾಹಿತ್ಯ ಭಾಷೆ ಯಾವುದೇ ಜಾತಿ ಮತ ಬೇಧವಿಲ್ಲದೆ ಇರುವಂತಹ ಸಾಹಿತ್ಯ ಕನ್ನಡ ನಾಡಿನ ಸಮಸ್ತ ಕನ್ನಡಿಗರಿಗೆ ನಾಡು ಮತ್ತು ಭಾಷೆ ಹೃದಯ ಮಿಡಿತವಾಗಿದೆಯೆಂದು ಐಐಬಿಎಂ ವಿಧ್ಯಾಸಂಸ್ಥೆಗಳ ಅಧ್ಯಕ್ಷೆ ಖುರ್ಷಿದ್ ಉನ್ನೀಸಾ ಹೇಳಿದರು.
ಪಟ್ಟಣದ ಐಐಬಿಎಂ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಲಾಗಿದ್ದ 105ನೇ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯಕ್ಕೆ ನಾಡಿನ ಹಲವಾರು ಕವಿ ಪುಂಗವರು ತಮ್ಮ ತನು, ಮನ, ಧನವನ್ನು ಅರ್ಪಿಸಿ ಕನ್ನಡವನ್ನು ಶ್ರೀಮಂತವಾಗಿಸಿದ್ದಾರೆ. ಅವರ ಹಾದಿಯಲ್ಲಿ ನಡೆದು ಇಂದಿನ ಯುವ ಪೀಳಿಗೆ ನಾಡಿಗೆ ಸೇವೆ ಮಾಡುತ್ತಾ ಆಚಾರ ವಿಚಾರ ಸಂಪ್ರದಾಯವನ್ನು ಅನುಸರಿಸುತ್ತಾ ನಾಡು ಕಟ್ಟಿದ ಮಹಾನುಭಾವರಿಗೆ ಅರ್ಪಣೆ ಮಾಡಬೇಕಿದೆ ಎಂದು ಹೇಳಿದರು.
ಹಿರಿಯ ಸಾಹಿತಿಗಳು ಮತ್ತು ಕ.ಸಾ.ಪ ಗೌರವಾಧ್ಯಕ್ಷರಾದ ಆರ್.ಚೌಡರೆಡ್ಡಿ ಮಾತನಾಡಿ ಕನ್ನಡ ಭಾಷೆ ನಮ್ಮ ನೆಲದ ಉಸಿರಾಗುವುದರೊಂದಿಗೆ ಸಾಹಿತ್ಯದಲ್ಲಿ ಪರಿಕ್ವತೆಯನ್ನು ಹಲವಾರು ಗ್ರಂಥಗಳನ್ನು ಉತ್ತಮ ಸಾಹಿತ್ಯದೊಂದಿಗೆ ರಚನೆಗೊಂಡಿದೆ. ಹಾಗೂ ದೇಶದ ಇತರೆ ಭಾಷೆಗಳ ಗ್ರಂಥಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವುದರ ಮೂಲಕ ಕನ್ನಡದ ಸಿರಿವಂತಿಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಡಿದೆ. ಸಾಹಿತ್ಯ ಪರಿಷತ್ತು ರಾಜ-ಮಹಾರಾಜರಿಂದ ಪೋಷಿಸಲ್ಪಟ್ಟು ಇಂದು ಸರ್ಕಾರ ಮತ್ತು ಪೋಷಕರಿಂದ ಪೋಷಿಸಲ್ಪಡುತ್ತಿದೆ ಎಂದು ಹೇಳಿದರು.
ಸಾಹಿತ್ಯದ ಬೇರೆ ಬೇರೆ ಕವಲುಗಳನ್ನು ಬೆಳೆಸುವ ಕಾರ್ಯದಲ್ಲಿ ಮತ್ತು ಸಮ್ಮೇಳನಗಳನ್ನು ನಡೆಸುವಂತಹದ್ದು ಹಾಗೂ ದತ್ತಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುವುದರೊಂದಿಗೆ ಉತ್ತಮ ಸಾಧನೆಗಳನ್ನು ಮಾಡುತ್ತಾ ಗಡಿ ಭಾಗದಲ್ಲಿ ಕನ್ನಡ ಕಂಪನ್ನು ಬೀರುತ್ತಿದೆ. ಕೆಲವು ಸಾಹಿತಿಗಾರರು ಪರಿಷತ್ತಿನ ಸೌಲಭ್ಯಗಳನ್ನು ಬಳಸಿಕೊಂಡು ಬಿಟ್ಟು ಹೋಗಿದ್ದಾರೆ. ಆದರೂ ಕನ್ನಡದ ಮನಸ್ಸುಗಳು ಪರಿಷತ್ತ್‍ನ್ನು ಗಟ್ಟಿಮಾಡುತ್ತಾ ರಾಜ್ಯದ ಮೂವತ್ತು ಜಿಲ್ಲೆಗಳಲ್ಲಿ ಹಾಗೂ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಇನ್ನಷ್ಟು ಉತ್ತಂಗಕ್ಕೆ ಏರಿಸಲು ನಾಡಿನ ಪ್ರಜೆಗಳು ಸದಸ್ಯತ್ವವನ್ನು ಪಡೆದು ದತ್ತಿ ದೇಣಿಗೆಗಳನ್ನು ನೀಡಿ ನಮ್ಮ ನಾಡಿನ ಸಂಪತ್ತಾದ ಕನ್ನಡ ಸಾಹಿತ್ಯ ಪರಿಷತ್ತು ಇನ್ನಷ್ಟು ಬಲಿಷ್ಟಗೊಳಿಸಲು ಎಲ್ಲರೂ ಕಟಿಬದ್ದರಾಗಬೇಕೆಂದು ಹೇಳಿದರು.
ಐಐಬಿಎಂ ಪ್ರಾಂಶುಪಾಲ ಎಸ್.ಎ.ಮುಬಾರಕ್ ಪಾಷ ಮಾತನಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರವೊಮ್ಮಿ ಗೌರವಾನ್ವಿತ ವ್ಯಕ್ತಿಗಳಾಗಿ ಜೀವನ ನಡೆಸಬೇಕಾದರೆ ನಮ್ಮ ಹೆಸರಾಂತ ಸಾಹಿತಗಳಾದ ಕುವೆಂಪು, ದ.ರಾ.ಬೇಂದ್ರೆ, ಕನ್ನಡದ ಆಸ್ಥಿಯೆಂದೇ ಪ್ರಖ್ಯಾತರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅನಕೃ, ಡಿವಿಜಿ, ಕಾರಂತರು ಹಾಗೂ ಸಂತರಾದ ಕನಕ, ಪುರಂದರ, ಬಸವಣ್ಣ, ಶಿಶುನಾಳರಂತಹ ಮಹಾನ್ ವ್ಯಕ್ತಿಗಳು ನಮಗೆ ದಾರಿ ದೀಪವಾಗಿ ಬಿಟ್ಟು ಹೋದ ಸಾಹಿತ್ಯಗಳನ್ನು ಓದಿ ನಿಸ್ವಾರ್ಥವಾಗಿ ಅವರ ಮಾರ್ಗದರ್ಶನದಲ್ಲಿ ನಡೆದು ನಾಡಿಗೆ ಸೇವೆ ಮಾಡಬೇಕು. ಇಂದಿನ ವ್ಯಕ್ತಿಗಳು ತಾನು, ನಾನು, ನಯ, ನಾಜೂಕು, ಸಂಸಾರಕ್ಕೆ ಆಧ್ಯತೆ ನೀಡಿದರೆ ಅಂದಿನ ಮಹಾನ್ ವ್ಯಕ್ತಿಗಳು ನಾಡಿನಲ್ಲಿ ನಯ, ನಾಜೂಕು ಹಾಗೂ ಮನೋ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಜೀವನವನ್ನು ಸವೆಸಿದ್ದಾರೆ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ವ್ಯವಸ್ಥಾಪಕರಾದ ವೆಂ.ರವಿಕುಮಾರ್ ರವರು ಡಿವಿಜಿಯವರ ಕನ್ನಡ ಭಗವದ್ಗೀತೆಯೆಂದೇ ಕರೆಸಿಕೊಂಡಿರುವ ‘ಮಂಕುತಿಮ್ಮನ ಕಗ್ಗ’ದ ಕಗ್ಗಗಳ ವಿಶ್ಲೇಷಣೆ ಹಾಗೂ ಸಂಪನ್ಮೂಲ ವ್ಯಕ್ತಿಯಾದ ಕಲ್ಲೂರು ಎ.ವೆಂಕಟರೆಡ್ಡಿರವರು ಆಧುನಿಕ ಸಾಹಿತ್ಯ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಕಸಾಪ ತಾಲೂಕು ಅಧ್ಯಕ್ಷ ಜಿ.ಎನ್.ಕುಬೇರಗೌಡ ಮಾತನಾಡಿ ವ್ಯಕ್ತಿಯು ಪ್ರತಿವರ್ಷ ತನ್ನ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುವ ರೀತಿಯಲ್ಲಿ ನಾಡಿನಲ್ಲಿ ನಾಡು ಮತ್ತು ನುಡಿಗಾಗಿ ಕಟ್ಟಿದ ಸಂಸ್ಥೆಯು ಹುಟ್ಟಿಕೊಂಡ ದಿನದ ವಿಶೇಷವಾಗಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಭಾಷೆಗಾಗಿ ಕೃಷ್ಣರಾಜ ಓಡೆಯರ್‍ರವರ ಆಧ್ವರ್ಯದಲ್ಲಿ ಕರ್ಪೂರ ಶ್ರೀನಿವಾಸರಾಯರು ಹಾಗೂ ವಿಶ್ವೇಶ್ವರಯ್ಯನವರ ಆಧಿಯಾಗಿ ಹಲವಾರು ಕನ್ನಡ ಪ್ರೇಮಿಗಳ ಮುಂಧಾಳತ್ವದಲ್ಲಿ ಪ್ರಾರಂಭವಾದ ಸಂಸ್ಥೆ ಇಂದು ರಾಷ್ಟ್ರದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ಥಿಗಳನ್ನು ಪಡೆದುಕೊಳ್ಳುವುದಕ್ಕೆ ಈ ಸಂಸ್ಥೆ ಮೇಲ್ಪಂಕ್ತಿಯಾಗಿದೆ. ಇಂದಿನ ಹಲವಾರು ಸಾಹಿತಿಗಾರರಿಗೆ ಮಾರ್ಗದರ್ಶನದ ಸಂಸ್ಥೆಯಾಗಿ ಬೆಳೆಯುತ್ತಿದ್ದು ಹಿರಿಯರಿಂದ ಕಿರಿಯರಿಗೆ ಮಾರ್ಗದರ್ಶನ ನೀಡುತ್ತಿದೆ. ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಅಜೀವ ಸದಸ್ಯರನ್ನು ಹೊಂದಿದ ಸಾಂಸ್ಕøತಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸರ್ಕಾರಿ ಮಾದರಿ ಶಾಲೆಯಗೆ ಅನ್ವರ್ಥನಾಮವಾಗಿ ಬೈರೆಡ್ಡಿ ಶಾಲೆಯೆಂದೇ ಪ್ರಖ್ಯಾತಿ ಗಳಿಸಿದ ತ್ಯಾಗರಾಜ ಬಡಾವಣೆಯ ಮಾದರಿ ಶಾಲೆಯಲ್ಲಿ ಸೇವೆ ಸಲ್ಲಿಸಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತರಾದ ನಿವೃತ್ತ ಎ.ಬೈರಾರೆಡ್ಡಿರವರಿಗೆ ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ 125 ಅಂಕಗಳನ್ನು ಗಳಿಸುವುದರೊಂದಿಗೆ ತಾಲೂಕಿಗೆ ಪ್ರಥಮರಾಗಿ ಹೊರವೊಮ್ಮಿದ ಕುಮಾರಿ ಸಿರಿ.ಆರ್.ಕುಲಕರ್ಣಿರವರಿಗೆ ಸನ್ಮಾನವನ್ನು ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಐಐಬಿಎಂ ಕಾಲೇಜು ಕಾರ್ಯದರ್ಶಿ ಎಸ್.ಎ.ರಹಮತ್‍ಪಾಷ, ಕಸಾಪ ಕಾರ್ಯದರ್ಶಿಗಳಾದ ಚಲಪತಿ, ಜಿ.ಎನ್.ಚನ್ನಪ್ಪ, ಮುರಳೀಬಾಬು, ಕಲಾಶಂಕರ್, ಆಶಾರವಿಕುಮಾರ್, ಗಗನ್ ಮತ್ತು ದೀಪಾ ಚಕ್ರವರ್ತಿ, ಡಾ.ಎನ್.ಎಸ್.ಮೂರ್ತಿ, ಗೋವಿಂದಯ್ಯ, ರವಿ.ಆರ್.ಕುಲಕರ್ಣಿ, ದೀಪಾಕುಲಕರ್ಣಿ, ಕಸಾಪ ಪಧಾಧಿಕಾರಿಗಳು, ಉಪನ್ಯಾಸಕರುಗಳಾದ ಸುಪ್ರಿಯ, ಎಂ.ಎಸ್.ಸತೀಶ್, ಫರ್ಹೀನ್ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.