ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಮಾದಿಗ ಸಮುದಾಯದ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು – ಜೆ.ಎಂ.ದೇವರಾಜ್
ಶ್ರೀನಿವಾಸಪುರ: ಮಾದಿಗ ಸಮುದಾಯದ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಎಂದು ರಾಜ್ಯ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಆಗ್ರಹಪಡಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕು ಮಾದಿಗ ದಂಡೋರ ಮೀಸಲಾಗಿ ಹೋರಾಟ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿ, ಮಾದಿಗರು ಭಾರತದ ಮೂಲ ನಿವಾಸಿಗಳು. ಆದರೂ ಎಲ್ಲ ರಂಗಗಳಲ್ಲೂ ಹಿಂದುಳಿದ್ದಾರೆ. ಈ ಸಮುದಾಯಕ್ಕೆ ಮೀಸಲಾತಿ ಲಾಭ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಇರುವ ಶೇ.18 ರಷ್ಟು ಮೀಸಲಾತಿಯಲ್ಲಿ ಇತರರನ್ನು ಹೊರತುಪಡಿಸಿ, ಮಾದಿಗರಿಗೆ ಸಿಗುತ್ತಿರುವ ಮೀಸಲಾತಿ ಅತ್ಯಲ್ಪ ಎಂದು ಹೇಳಿದರು.
ಮಾದಿಗ ಸಮುದಾಯಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಮಾ.11 ರಂದು ವಿಧಾನ ಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮುದಾಯಕ್ಕೆ ಸೇರಿದ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ್ ಮಾತನಾಡಿ, ಮಾದಿಗ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ರಾಜಕೀಯವಾಗಿಯೂ ಮುಂದೆ ಬಂದಿಲ್ಲ. ಈ ಸಮುದಾಯದ ಹಿತದೃಷ್ಟಿಯಿಂದ ಸದಾಶಿವಯ್ಯ ವರದಿ ಜಾರಿಗೆ ತರಬೇಕು. ಮೀಸಲಾಗಿ ಪ್ರಮಾಣ ಹೆಚ್ಚಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಮಿತಿಯ ರಾಜ್ಯ ಉಪಾಧ್ಯಕ್ಷ ಆರ್. ವೇಣು, ಕಲಾ ತಂಡದ ಅಧ್ಯಕ್ಷ ಶಾಮರಾಜ್, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಧನಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮಂಜುಳ, ಜಿಲ್ಲಾಧ್ಯಕ್ಷೆ ಶಶಿಕಲ, ಜಿಲ್ಲಾಧ್ಯಕ್ಷ ಚಂದ್ರಪ್ಪ, ಮುಖಂಡರಾದ ಪೂಲ ಶಿವಾರೆಡ್ಡಿ, ಕೆ.ಕೆ.ಮಂಜುನಾಥರೆಡ್ಡಿ, ತಿಪ್ಪಣ್ಣ, ಕೆಂಚಪ್ಪ, ಈರಪ್ಪ, ನರಸಿಂಹಪ್ಪ, ಎಂ.ಗಂಗುಲಪ್ಪ ಇದ್ದರು.