ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಮಾದಿಗ ದಂಡೋರ ಸಂಘಟನೆಯ ಅಧ್ಯಕ್ಷ ಜಿ.ಶಂಕರ ಅವರ ಮೇಲೆ ಈಚೆಗೆ ಹಲ್ಲೆ ನಡೆಸಿರುವ ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಆವಲಕುಪ್ಪ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಬಂದ ಸಂಘಟನೆಯ ಮಖಂಡರು ಹಾಗೂ ಕಾರ್ಯಕರ್ತರು ಬುಧವಾರ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಪೊಲೀಸರು ಜಿ.ಶಂಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿರುವ ಎಲ್ಲ ಆರೊಪಿಗಳನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು. ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ನರಸಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ತಾಲ್ಲೂಕಿನ ಆವಲಕುಪ್ಪ ಗ್ರಾಮದ ಸಮೀಪ ದಲಿತ ಮುಖಂಡನ ಮೇಲೆ ಈಚೆಗೆ ನಡೆಸಲಾಗಿರುವ ಹಲ್ಲೆ ಒಂದು ತಾಜಾ ಉದಾಹರಣೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳ ಮೇಲೆ ರೌಡಿ ಶೀಟ್ ತೆರೆಯಬೇಕು. ಹಲ್ಲೆಗೆ ಒಳಗಾಗಿರುವ ವ್ಯಕ್ತಿಯ ವಿರುದ್ಧ ನೀಡಲಾಗಿರುವ ದೂರನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು. ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ನೀಡಲಾಯಿತು. ಸಂಘಟನೆಯ ಮುಖಂಡರಾದ ಆರ್.ವೇಣು, ಸಿ.ವಿ.ವೀಣಾ, ಮಂಜುಳ, ಧನಲಕ್ಷ್ಮಿ , ವೆಂಕಟೇಶ್, ಎಂ.ಆಂಜಿ, ಚಂದ್ರಪ್ಪ, ಮಂಜುನಾಥ್, ಕೆ.ರಾಮಪ್ಪ, ರವಿಕುಮಾರ್, ಎ.ಎನ್.ಮಂಜುನಾಥ್, ಶಶಿಕಲಾ, ಮುನಿರಾಜು ಇದ್ದರು.ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ