ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಮಳೆ ನೀರು ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಹೂಳು ತೆಗೆದು ನೀರು ನಿಲ್ಲುವಂತೆ ಮಾಡಬೇಕು – ತೆಲುಗು ಚಲನ ಚಿತ್ರ ನಟ ಪವನ್ ಕಲ್ಯಾಣ್
ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ, ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಮಾನ ಗೋಪುರ ಕುಂಭಾಭಿಷೇಕ ಸಮಾರಂಭದಲ್ಲಿ ಮಾತನಾಡಿ, ಆಂಧ್ರಪ್ರದೇಶ ಹಾಗೂ ಕರ್ನಾಟಕದ ರೈತರು ಬಹುತೇಕ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತರ್ಜಲ ಕೊರತೆ ಕಾಡುತ್ತಿದೆ. ಚೆಕ್ ಡ್ಯಾಂ, ಕೆರೆ, ಕುಂಟೆಗಳಲ್ಲಿ ಮಳೆ ನೀರು ತುಂಬಿ ಅಂತರ್ಜಲ ವೃದ್ಧಿಸಬೇಕಾಗಿದೆ ಎಂದು ಹೇಳಿದರು.
ಎಲ್ಲ ಧರ್ಮಗಳನ್ನೂ ಗೌರವಿಸುವುದು ಹಿಂದೂ ಧರ್ಮದ ಹೆಗ್ಗಳಿಕೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಆಚರಿಸುತ್ತ, ಇತರ ಧರ್ಮಗಳನ್ನು ಗೌರವಿಸುವುದು ಇಂದಿನ ಅಗತ್ಯವಾಗಿದೆ. ಮಾನವ ಧರ್ಮಕ್ಕೆ ಮನ್ನಣೆ ದೊರೆಯಬೇಕಾಗಿದೆ ಎಂದು ಹೇಳಿದರು.
ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಮಹಾತ್ಮರನ್ನು ಕೊಂದವರನ್ನು ಆರಾಧಿಸುವ ದಿನಗಳು ಹತ್ತಿರವಾಗುತ್ತಿವೆ. ಇದನ್ನು ನೋಡಿದರೆ ನಾವು ಎತ್ತ ಸಾಗಿದ್ದೇವೆ ಎಂಬ ಪ್ರಶ್ನೆ ಮೂಡುತ್ತದೆ. ಬೆವರಿಗೆ ಬೆಲೆ ಕಟ್ಟುವಂತೆ ಕೋರಿದರೆ, ಪ್ರಸಾದನ ಸಾಮಗ್ರಿ ಬೆಲೆ ಹೆಚ್ಚಿಸುತ್ತಿದ್ದೇವೆ ಎನ್ನುವವರು ಸರ್ಕಾರದಲ್ಲಿದ್ದಾರೆ ಎಂದು ಹೇಳಿದರು.
‘ಆಂಧ್ರಪ್ರದೇಶದಲ್ಲಿ ವಿಚಾರ ದಾರಿದ್ರ್ಯದಿಂದ ನಾಯಕತ್ವ ಇಲ್ಲದೆ ಶೂನ್ಯ ಏರ್ಪಟ್ಟಿದೆ. ಪ್ರಜೆಗಳಿಗಾಗಿ ನಾವು ಇರುತ್ತೇವೆ. ನಮಗಾಗಿ ಪ್ರಜೆಗಳು ಇರುವುದಿಲ್ಲ. ಈ ಸತ್ಯವನ್ನು ರಾಜಕಾರಣಿಗಳು ಅರಿಯಬೆಕು. ಸಾರ್ವಜನಿಕರ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು. ಇಲ್ಲಿನ ಜನರು ಸಾಮಾನ್ಯ ಕುಟುಂಬದಿಂದ ಬಂದ ನನ್ನನ್ನು ರಾಜಕೀಯ ಕ್ಷೇತ್ರದಲ್ಲಿ ಉಳಿಸಿ ಬೆಳೆಸಿದ್ದಾರೆ. ಸೋಲು ಗೆಲವಿನಲ್ಲಿ ಬೆಂಬಲವಾಗಿ ನಿಂತಿದ್ದಾರೆ. ಅವರ ಹಿತ ಕಾಯುವುದು ನನ್ನ ಆದ್ಯ ಕರ್ತವ್ಯವಾಗಿದೆ, ಎಂದು ಹೇಳಿದರು.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, ಕೃಷಿಕರು ತಮ್ಮ ಉತ್ಪನ್ನಗಳಿಗೆ ಬೆಲೆ ಕುಸಿತದಿಂದ ಕುಸಿದು ಹೋಗಿದ್ದಾರೆ. ಸರ್ಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಕಾರ್ಮಿಕರ ಹಿತ ಕಾಯಬೇಕು ಎಂದು ಹೇಳಿದರು.
ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ ಜ್ಯೋತಿ ಬೆಳಗಿಸಿ ಆಶೀರ್ವಚನ ನೀಡಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಡಿವೈಎಸ್ಪಿ ಉಮೇಶ್, ತಹಶೀಲ್ದಾರ್ ಕೆ.ಎನ್.ಸುಜಾತ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ,ದೇವಾಲಯದ ಧರ್ಮಾಧಿಕಾರಿಗಳಾದ ರೇಖಾ, ಜಿ.ಎಸ್.ವೇಣುಗೋಪಾಲ್, ಮಖಂಡರಾದ ಕೆ.ಕೆ.ಮಂಜು, ಅಮರೇಂದ್ರಬಾಬು ಇದ್ದರು.