ಶ್ರೀನಿವಾಸಪುರ: ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ: ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ ಹೇಳಿದರು.
  ಪಟ್ಟಣದ ಸರ್ಕಾರಿ ಬಾಲಕಿಯರ ಅದವಿ ಪೂರ್ವ ಕಾಲೇಜು ಮೈದಾನದಲ್ಲಿ ಕರ್ನಾಟಕ ದರ್ಶನ ಯೋಜನೆಯಡಿ ವಿದ್ಯಾರ್ಥಿಗಳ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿ, ಜ್ಞಾನಾರ್ಜನೆಗೆ ಎರಡು ಮಾರ್ಗಗಳಿವೆ. ದೇಶ ಸುತ್ತುವುದು ಒಂದು ಮಾರ್ಗವಾದರೆ, ಕೋಶ ಓದುವುದು ಇನ್ನೊಂದು ಮಾರ್ಗ. 8ನೇ ತರಗತಿಯ 150 ಆಯ್ದ ವಿದ್ಯಾರ್ಥಿಗಳನ್ನು 3 ಬಸ್‌ಗಳಲ್ಲಿ ರಾಜ್ಯದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸ ಕಳಿಸಲಾಗುತ್ತಿದೆ. ಈ ಪ್ರವಾಸದಲ್ಲಿ ಪ್ರತಿ ಬಸ್‌ಗೆ ಇಬ್ಬರು ಶಿಕ್ಷಕರಿದ್ದು, ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
  ಪ್ರವಾಸ ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಮಾತ್ರ ಸೀಮಿತಗೊಳ್ಳಬಾರದು ಎಂಬ ಉದ್ದೇಶದಿಂದ ಸರ್ಕಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಪ್ರವಾಸಕ್ಕೆ ಅನುವು ಮಾಡಕೊಟ್ಟಿದೆ. ಪೋಷಕರು ಮಕ್ಕಳನ್ನು ಪ್ರವಾಸ ಕಳುಹಿಸಲು ಮುಂದಾಗಬೇಕು. ಹೆಣ್ಣು ಮಕ್ಕಳಿಗೂ ಪ್ರವಾಸ ಮುಖ್ಯವಾಗುತ್ತದೆ ಎಂದು ಹೇಳಿದರು.
  ನಾಲ್ಕು ದಿನಗಳ ಶೈಕ್ಷಣಿಕ ಪ್ರವಾಸದಲ್ಲಿ ಮಕ್ಕಳು ಕಲಿಯುವುದು, ತಿಳಿದುಕೊಳ್ಳುವುದು ಹಾಗೂ ನೋಡುವುದು ಬಹಳಷ್ಟು ಇರುತ್ತದೆ. ಶಿಕ್ಷಕರು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದರ ಜತೆಗೆ, ಪ್ರವಾಸದ ಪೂರ್ಣ ಪ್ರಯೋಜನ ದೊರೆಯುವಂತೆ ಕಾರ್ಯಕ್ರಮ ರೂಪಿಸಬೇಕು. ಪ್ರವಾಸದ ಅವಧಿಯಲ್ಲಿ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.ಇಸಿಒಗಳಾದ ಸುಬ್ರಮಣಿ, ಹನುಮೇಗೌಡ, ಕಲಾ ಶಂಕರ್‌, ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ.ಗೋವಿಂದರೆಡ್ಡಿ, ಮುಖ್ಯ ಶಿಕ್ಷಕ ಬೈರೇಗೌಡ, ಶಿಕ್ಷಕ ಸುಬ್ರಮಣಿ, ಪದ್ಮ ಇದ್ದರು.