ಶ್ರೀನಿವಾಸಪುರ ಮಾಹಿತಿ ನೀಡದಿದ್ದಕ್ಕೆ 10,000 ಜುಲ್ಮಾನೆ – ಸಂಬಂಧ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶ

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ

ಶ್ರೀನಿವಾಸಪುರ ಮಾಹಿತಿ ನೀಡದಿದ್ದಕ್ಕೆ 10,000 ಜುಲ್ಮಾನೆ – ಸಂಬಂಧ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶ

 

ಕೋಲಾರ,ನ.7: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಪಂಚಾಯ್ತಿಯಲ್ಲಿ 19-03-2016 ರಂದು ಕೇಳಿದ ಮಾಹಿತಿಯನ್ನು ನೀಡದೆ ಇರುವ ಹಿನ್ನಲೆಯಲ್ಲಿ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಹೆಚ್.ಪಿ ಸುಧಾಮ್‍ದಾಸ್ ರವರು 10000 ಜುಲ್ಮಾನೆ ಮತ್ತು ಸಂಬಂದ ಪಟ್ಟವರ ವಿರುದ್ದ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲು ಆದೇಶಿಸಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ನಿವಾಸಿ ಆರ್.ಟಿ.ಐ ಕಾರ್ಯಕರ್ತ ಶಬ್ಬೀರ್ ಅಹಮ್ಮದ್ ರವರು ಮಾಹಿತಿ ಹಕ್ಕು 2005 ರಂತೆ ಪ್ರಾರಂಭಿಕ ಶುಲ್ಕ 10 ರೂಪಾಯಿಗಳನ್ನು ಪಾವತಿಸಿ ತಾಲೂಕು ಪಂಚಾಯತಿ ಕಾರ್ಯಾಲಯಕ್ಕೆ ದಿನಾಂಕ 19-3-2016 ರಂದು ಅರ್ಜಿ ಸಲ್ಲಿಸಿ ತಾಲೂಕು ಪಂಚಾಯಿತಿ ಸ್ಟಾಂಪ್ ಡ್ಯೂಟಿ ಅಡಿಯಲ್ಲಿ ಖರ್ಚು ವೆಚ್ಚ ಸೇರಿದಂತೆ ಕೆಲವೊಂದು ದಾಖಲೆಗಳನ್ನು ಕೇಳಲಾಗಿತ್ತು.
ಆದರೆ ಮಾಹಿತಿ ನೀಡದೆ ಇರುವ ಹಿನ್ನಲೆಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಪ್ರಥಮ ಮೇಲ್ಮನವಿಯನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ 20-4-2016 ರಂದು ಅಧಿನಿಯಮದ ಕಲಂ 19(1) ರ ಅನ್ವಯ ಸಲ್ಲಿಸಲಾಗಿ ಇವರು ಸಹಿತ ಕೇಳಿರುವ ಮಾಹಿತಿಯನ್ನು ಕೊಡಿಸುವಲ್ಲಿ ವಿಫಲರಾಗಿರುತ್ತಾರೆ. ಈ ಸಂಬಂಧ ರಾಜ್ಯ ಮಾಹಿತಿ ಆಯೋಗಕ್ಕೆ ಕಲಂ 19(3)ರ ಅನ್ವಯ 2ನೇ ಮೇಲ್ಮನವಿಯನ್ನು ಸಲ್ಲಿಸಲಾಗಿ 31-5-2017 ರಂದು ವಿಚಾರಣೆ ಕೈಗೆತ್ತಿಕೊಂಡ ಆಯೋಗವು ಹಲವು ಬಾರಿ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರೂ ಪ್ರಯೋಜನವಾಗದ ಕಾರಣ ತಾಲೂಕು ಪಂಚಾಯತಿ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿದ್ದ ಆನಂದಾಚಾರಿ ಇವರಿಗೆ ಆಯೋಗವು ದಿನಾಂಕ 27-3-2019 ರಂದು 10000 ರೂಗಳ ದಂಡ ವಿಧಿಸಿ ಆದೇಶ ನೀಡಿತ್ತು ಹಾಗೂ ಈ ಸಂಬಂಧಪಟ್ಟ ಅರ್ಜಿದಾರರಿಗೆ ಕೇಳಿರುವ ಮಾಹಿತಿ ಕೊಡಲು ಆದೇಶಿಸಿದ್ದರೂ ಮಾಹಿತಿ ನೀಡಿರುವುದಿಲ್ಲ.
ಈ ಸಂಬಂಧ ದಿನಾಂಕ 16-9-2019 ರಂದು ವಿಚಾರಣೆಗೆ ಕೈಗೆತ್ತಿಕೊಂಡ ಆಯೋಗವು ಮಾಹಿತಿ ನೀಡಲು ವಿಫಲರಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ದಾಖಲೆಗಳ ಕಾಯ್ದೆ (ಕರ್ನಾಟಕ ಪಬ್ಲಿಕ್ ರೆಕಾರ್ಡ್ ಆಕ್ಟ್ 2010 ಮತ್ತು ಕರ್ನಾಟಕ ಪಬ್ಲಿಕ್ ರೆಕಾರ್ಡ್ ರೂಲ್ಸ್ 2013ರ) ಅನ್ವಯ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತಾಲೂಕು ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ರವರಿಗೆ ಮಾಹಿತಿ ಆಯುಕ್ತರಾದ ಹೆಚ್.ಪಿ.ಸುಧಾಮ್‍ದಾಸ್ ರವರು ಆದೇಶಿಸಿದ್ದಾರೆ.
ಸದರಿ ಸ್ಟಾಂಪ್ ಡ್ಯೂಟಿ ಹಣ ದುರುಪಯೋಗ ಆಗಿರುವ ಸಾಧ್ಯತೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ದಾಖಲೆ ನೀಡುವಲ್ಲಿ ತಾಲೂಕು ಪಂಚಾಯತಿ ಅಧಿಕಾರಿಗಳು ವಿಫಲವಾಗಿದ್ದು, ಪೊಲೀಸ್ ತನಿಖೆಯಿಂದಲೇ ಸತ್ಯಾಂಶ ಹೊರಬಿಳಬೇಕಾಗಿದೆ.