ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆಯುವಂತಾಗಬೇಕು – ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಜಯರಾಮರೆಡ್ಡಿ
ಶ್ರೀನಿವಾಸಪುರ: ಶಿಕ್ಷಕರು ತಾಲ್ಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲ್ಲೂಕು ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆಯಲು ಪೂರಕವಾಗಿ ಬೋಧನೆ ಮಾಡಬೇಕು ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್.ಜಯರಾಮರೆಡ್ಡಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಈಗ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಅಲ್ಲದೆ ಶೈಕ್ಷಣಿಕ ಪ್ರಗತಿಗೆ ಹೆಸರಾಗಿದೆ. ಆದ್ದರಿಂದ ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳು ಒಟ್ಟಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರಬೇಕು. ನುರಿತ ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು. ಇಲಾಖೆಯ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಒಟ್ಟಾರೆ ಶೈಕ್ಷಣಿಕ ಅಭಿವೃದ್ಧಿ ಹಾಗೂ ಗುಣಾತ್ಮಕ ಫಲಿತಾಂಶ ಪಡೆಯುವುದು ಎಲ್ಲರ ಧ್ಯೇಯವಾಗಬೇಕು. ಅದಕ್ಕೆ ಪೂರಕವಾದ ಎಲ್ಲ ಶೈಕ್ಷಣಿಕ ನೆರವನ್ನೂ ನೀಡಲಾಗುವುದು ಎಂದು ಹೇಳಿದರು.
ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇಣುಕಮ್ಮ, ಇಸಿಒ ಆರ್.ಜಿ.ಸುಬ್ರಮಣಿ, ಅಡ್ಡಗಲ್ ಸಿಆರ್‌ಪಿ ಕಲಾ ಶಂಕರ್, ಬಿಆರ್‌ಪಿ ಮಂಜು, ಶ್ರೀನಿವಾಸಪುರ ತಾಲ್ಲೂಕು ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ಸಾದಿಕ್, ಉರ್ದು ಸಿ ಆರ್ ಪಿ ರುಹಿ ನಾಜ್, ಸಮೀನಾ ಬಾನು ಇದ್ದರು.