ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾರತ ಗೃಹ ಪ್ರವೇಶ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಅವರ ಮನೆಗೆ ದಲಿತರ ಪ್ರವೇಶ ಹಾಗೂ ಸವರ್ಣೀಯರೊಂದಿಗೆ ಸಹಪಂಕ್ತಿ ಭೋಜನ ಕಾರ್ಯಕ್ರಮವನ್ನು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಉದ್ಘಾಟಿಸಿದರು. 

ವರದಿ: ಶಬ್ಬಿರ್ ಅಹ್ಮದ್,ಶ್ರೀನಿವಾಸಪುರ
ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾರತ ಗೃಹ ಪ್ರವೇಶ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಅವರ ಮನೆಗೆ ದಲಿತರ ಪ್ರವೇಶ ಹಾಗೂ ಸವರ್ಣೀಯರೊಂದಿಗೆ ಸಹಪಂಕ್ತಿ ಭೋಜನ ಕಾರ್ಯಕ್ರಮವನ್ನು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಉದ್ಘಾಟಿಸಿದರು. 
ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಅವರ ಮನೆಯಲ್ಲಿ ಸವರ್ಣೀಯರೊಂದಿಗೆ ದಲಿತರಿಗೆ ಸಹ ಭೋಜನ ಏರ್ಪಡಿಸಲಾಗಿತ್ತು.
ಶ್ರೀನಿವಾಸಪುರ: ಮನುಷ್ಯ ನಾಗರಿಕನಾಗಿ ಬೆಳೆಯಬೇಕು. ನುಡಿದಂತೆ ನಡೆಯಬೇಕು ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.
 ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾರತ ಗೃಹ ಪ್ರವೇಶ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಅವರ ಮನೆಗೆ ದಲಿತರ ಪ್ರವೇಶ ಹಾಗೂ ಸವರ್ಣೀಯರೊಂದಿಗೆ ಸಹಪಂಕ್ತಿ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ನಾಗರಿಕನಾಗಿ ಬದುಕಬೇಕು. ಮನುಷ್ಯನನ್ನು ಮನುಷ್ಯನಂತೆ ಕಾಣದಿರುವುದು ನಾಗರಿಕ ಸಮಾಜಕ್ಕೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟರು.
  ಮನುಷ್ಯನ ಮನಸ್ಸು ಹೆಪ್ಪುಗಟ್ಟಿದಾಗ ಮಾನವೀಯತೆ ಮುರಿದು ಬೀಳುತ್ತದೆ. ಇಂಥ ಪರಿಸ್ಥಿತಿ ದೂರವಾಗಬೇಕಾದರೆ ಆರ್ಥಿಕವಾಗಿ ಮುಂದೆ ಬರಬೇಕು.  ಪ್ರತಿಯೊಬ್ಬರೂ ಈ ಬಗ್ಗೆ ಕ್ರಿಯಾಶೀಲರಾಗಬೇಕು ಎಂದು ಹೇಳಿದರು.
  ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿಯವರು ವಾಸಿಸುವ ಕಾಲೋನಿಗಳಲ್ಲಿ ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಧಿಕಾರಿಗಳು ಕಾಲೋನಿಗಲ್ಲಿ ಸಿಮೆಂಟ್‌ ರಸ್ತೆ ನಿರ್ಮಿಸಲು ಬರುವ ಹಣವನ್ನು ಗ್ರಾಮದ ಇತರ ಕಡೆ ರಸ್ತೆ ನಿರ್ಮಿಸಲು ಬಳಸಬೇಕು. ಕಾಲೋನಿಗಳ ಜನರು ಊರಿನ ರಸ್ತೆಗಳಲ್ಲೂ ಓಡಾಡಬೇಕು. ಎಲ್ಲ ಕಡೆ ಅಭಿವೃದ್ಧಿ ಸಾಧ್ಯವಾದಾಗ ಮಾತ್ರ ಸಮಾನತೆ ತಾನಾಗಿಯೇ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    ಪರಿಶಿಷ್ಟ ಜಾತಿಯವರನ್ನು ಮನೆಯೊಳಗೆ ಕರೆದುಕೊಳ್ಳಲು ಧೈರ್ಯ ಬೇಕು. ಅಂಥ ಧೈರ್ಯ ಮಾಡಿರುವ ಕೆ.ಕೆ.ಮಂಜುನಾಥರೆಡ್ಡಿ ಅವರು ಅಭಿನಂದನಾರ್ಹರು. ಈ ವಿಷಯದಲ್ಲಿ ಯಾರಿಗೂ ಹೆದರಬೇಕಾದ ಅಗತ್ಯವಿಲ್ಲ. ನಿಮ್ಮ ಬೆಂಬಲಕ್ಕೆ ನಾವೆಲ್ಲಾ ಇದ್ದೇವೆ ಎಂದು ಹೇಳಿ ಧೈರ್ಯ ತುಂಬಿದರು.
  ಭಾರತ ಗೃಹ ಪ್ರವೇಶ ಸಮಿತಿಯ ಸಂಚಾಲಕ ಡಾ. ಅರಿವು ಶಿವಪ್ಪ ಮಾತನಾಡಿ, ಈ ಕಾರ್ಯಕ್ರಮದ ಹಿಂದೆ ಸಾಮಾಜಿಕ ಬದಲಾವಣೆಯ ಉದ್ದೇಶವಿದೆ. ಗ್ರಾಮೀಣ ಪ್ರದೇಶದಲ್ಲಿ ಪರಂಪರೆಯಾಗಿ ಬೆಳೆದು ಬಂದಿರುವ ಅಸ್ಪೃಶ್ಯ ಮನೋಭಾವವನ್ನು ಅಳಿಸಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಇದು ರಾಜಕಾರಣಿಗಳಿಂದ ಸಾಧ್ಯವಾಗುವ ಕೆಲಸವಲ್ಲ. ಪರಿಶಿಷ್ಟರನ್ನು ಮನೆಯಲ್ಲಿ ಬಿಟ್ಟುಕೊಳ್ಳಲು ಧೈರ್ಯ ಬೇಕಾಗುತ್ತದೆ. ಮನೆ ಮಂದಿ ಸೇರಿದಂತೆ ನೆರೆಹೊರೆಯವರನ್ನು ಒಪ್ಪಿಸಬೇಕಾಗುತ್ತದೆ ಎಂದು ಹೇಳಿದರು.
  ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್‌ ಮಾತನಾಡಿ, ಈ ಕಾರ್ಯಕ್ರಮ 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನನ್ನು ನೆನಪಿಗೆ ತರುತ್ತದೆ ಎಂದು ಹೇಳಿದರು.  ಮುಖಂಡ ಎನ್‌.ಮುನಿಸ್ವಾಮಿ ಮಾತನಾಡಿ, ಸಮಾಜದಲ್ಲಿ ತಾರತಮ್ಯ ಅಳಿಯಬೇಕು.  ಇದಕ್ಕೆ ಸಮಾಜ ಸಹಕರಿಸಬೇಕು. ಜನರನ್ನು ಒಗ್ಗುಡಿಸುವ ಪ್ರಯತ್ನ ಎಲ್ಲ ಕಡೆಗಳಿಂದ ನಡೆಯಬೇಕು ಎಂದು ಹೇಳಿದರು.
  ಉಪ ವಿಭಾಗಾಧಿಕಾರಿ ಸೋಮಶೇಖರ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನರೇಶ್‌, ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜಣ್ಣ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ವೆಂಕಟೇಶ್ವರ ಗ್ರಾಮೀಣ ಆರೊಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೈ.ವಿ.ವೆಂಕಟಾಚಲ, ಕೋಮುಲ್‌ ನಿರ್ದೇಶಕ ಹನುಮೇಶ್‌, ಮಾಜಿ ನಿರ್ದೇಶಕ ಎನ್‌.ಜಿ.ಬ್ಯಾಟಪ್ಪ, ಎಸ್‌ವಿವಿಎಸ್‌ ಆಡಳಿತಾಧಿಕಾರಿ ಎನ್‌.ಬಿ.ಗೋಪಾಲಗೌಡ ಮಖಂಡ ಕೆ.ಕೆ.ಮಂಜುನಾಥರೆಡ್ಡಿ, ದಲಿತ ಮುಖಂಡರಾದ ವಿಜಯ್‌ ಕುಮಾರ್‌, ರಾಮಾಂಜಮ್ಮ, ಸಂದೇಶ್‌, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎಂ.ನಾಗರಾಜ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರೆಡ್ಡಿ, ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಘವೇಂದ್ರ ಪ್ರಕಾಶ್‌, ಸಿಆರ್‌ಪಿ ಕಲಾ ಶಂಕರ್‌ ಮತ್ತಿತರರು ಇದ್ದರು.
  ಸಹ ಬೋಜನ: ಈ ಸಂದರ್ಭದಲ್ಲಿ ದಲಿತರು ಮುಖಂಡ ಕೆ.ಕೆ.ಮಂಜುನಾಥರೆಡ್ಡಿ ಅವರ ಗೃಹ ಪ್ರವೇಶ ಮಾಡಿದರು. ಸವರ್ಣೀಯರೊಂದಿಗೆ ಸಹ ಭೋಜನ ನಡೆಯಿತು.