ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ, ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ
ಪೊಲೀಸರನ್ನು ಸಮಾಜದ ಗೌರವದಿಂದ ಕಾಣಬೇಕು : ಮಾಜಿ ಸಚಿವ ಕೆ.ಎಚ್.ಮುನಿಯಪ್ಪ

ಶ್ರೀನಿವಾಸಪುರ: ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರನ್ನು ಸಮಾಜದ ಗೌರವದಿಂದ ಕಾಣಬೇಕು ಎಂದು ಮಾಜಿ ಲೋಕಸಭಾ ಸದಸ್ಯ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ಸಾರ್ವಜನಿಕರಿಗೆ ವಿತರಿಸಲು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರಿಗೆ ಬಟ್ಟೆ ಮಾಸ್ಕ್ಗಳನ್ನು ಹಸ್ತಾಂತರಿಸಿ ಮಾತನಾಡಿ, ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೊನಾ ತಡೆಯಲು ಹೋದ ಆರೋಗ್ಯ ಇಲಾಖೆ ಸಿಬಂದಿ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿರುವುದು ದುರದೃಷ್ಟಕರ. ಕರೊನಾ ತಡೆ ವಿಷಯದಲ್ಲಿ ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡುವುದು ಎಂದು ಹೇಳಿದರು.
ಕೊರೊನಾ ಸಂಬಂಧ ತಮ್ಮ ನಿವೃತ್ತ ವೇತನದ ಶೇ.30 ರಷ್ಟನ್ನು ಕೊರೊನಾ ಹರಡುವಿಕೆ ನಿಲ್ಲುವ ವರೆಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡುವುದಾಗಿ ಪ್ರಕಟಿಸಿದರು.
ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಮಾತನಾಡಿ, ಲಾಕ್ ಡೌನ್ನಿಂದಾಗಿ ಹಣ್ಣು ಹಾಗೂ ತರಕಾರಿಗೆ ಬೇಡಿಕೆ ಕುಸಿದು ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಟೊಮೆಟೊ, ಬೀನ್ಸ್, ಕ್ಯಾಪ್ಸಿಕಂ, ಕೋಸು ಮತ್ತಿತರ ತೋಟದ ಬೆಳೆಗಳು ತೋಟಗಳಿಲ್ಲಯೇ ಕೊಳೆಯುತ್ತಿವೆ. ಮಾ.22 ರಿಂದ ಸ್ಥಳೀಯವಾಗಿ ಸಂಕಷ್ಟಕ್ಕೆ ಒಳಗಾಗಿರುವ ರೈತರಿಂದ ತರಕಾರಿ ಖರೀದಿಸಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಕಾಂಗ್ರೆಸ್ ಮುಖಂಡರಾದ ಜಯದೇವ್, ಅಕ್ಬರ್ ಷರೀಫ್, ಎನ್.ಜಿ.ಬ್ಯಾಟಪ್ಪ, ಕೃಷ್ಣೇಗೌಡ, ನಾಗರಾಜ್, ನರಸಿಂಹಸ್ವಾಮಿ, ಪ್ರಸಾದ್ ಬಾಬು, ಮುನಿವೆಂಕಟಪ್ಪ, ಎಚ್.ವಿ.ಕುಮಾರ್, ಪ್ರಕಾಶ್, ಟಿಎಚ್ಒ ಡಾ.ವಿಜಯ ಇದ್ದರು.
