ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು – ಶಾಸಕ ಕೆ.ಆರ್.ರಮೇಶ್ ಕುಮಾರ್
ಶ್ರೀನಿವಾಸಪುರ: ಕೊರೊನಾ ತಡೆಯಲು ಗಡಿ ಭಾಗದಲ್ಲಿ ವಾಹನ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧ ಹೇರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಸಭೆಯಲ್ಲಿ ಮಾತನಾಡಿ, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೈರಾಣು ನಿರೋಧಕ ಔಷಧ ಸಿಂಪಡಣೆ ಮಾಡಬೇಕು ಹಾಗೂ ಚರಂಡಿ ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕಸ ವಿಲೇವಾರಿಗೆ ಸ್ಥಳ ನಿಗದಿಪಡಿಸುವುದು ತಡವಾಗುತ್ತಿದೆ. ಆದರೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಮನೆ ಮನೆಗೆ ಹೋಗಿ ಕಸ ಪಡೆದು ವಿಲೇವಾರಿಮಾಡಬೇಕು ಎಂದು ಹೇಳಿದರು.
ನ್ಯಾಯಬೆಲೆ ಅಂಗಡಿ ಮಾಲೀಕರು ಹೆಬ್ಬೆಟ್ಟಿನ ಗುರುತು ಪಡೆಯದೆ, ಮನೆ ಮನೆಗೆ ತೆರಳಿ ಆಹಾರ ಪದಾರ್ಥ ವಿತರಿಸಬೇಕು. ಈ ಸೇವೆಗೆ ಹಣ ಪಡೆಯಬಾರದು. ಪೌರ ಕಾರ್ಮಿಕರು, ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ವಿಮೆ ಮಾಡಿಸಲು ಸರ್ಕಾರ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.
ಪ್ರತಿ ವರ್ಷ ಪಟ್ಟಣದಲ್ಲಿ ಜನ್ಮಭೂಮಿ ವೇದಿಕೆ ವತಿಯಿಂದ ನಡೆಸಲಾಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಈ ವರ್ಷ ರದ್ದುಪಡಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಅಪ್ಪಿರೆಡ್ಡಿ, ರಾಮಚಂದ್ರಪ್ಪ, ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಪ್ರಕಾಶ್ ಇದ್ದರು.