ಶ್ರೀನಿವಾಸಪುರ – ಕಾಂಗ್ರೆಸ್‌ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕೆ ಬರುವವರನ್ನುಸ್ವಾಗತಿಸಲಾಗುವುದು : ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ಕಾಂಗ್ರೆಸ್‌ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು ಪಕ್ಷಕ್ಕೆ ಬರುವವರನ್ನುಸ್ವಾಗತಿಸಲಾಗುವುದು  ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

  ತಾಲ್ಲೂಕಿನ ಹೊಗಳಗೆರೆ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿ, ಈ ಹಿಂದೆ ಕಾರಣಾಂತದಿಂದ ಪಕ್ಷದಿಂದ ದೂರವಾಗಿದ್ದ ಕುಟುಂಬಗಳು ಮತ್ತೆ ಹಿಂದಿರುಗಿವೆ. ಅವರನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳಲಾಗಿದೆ ಎಂದು ಹೇಳಿದರು.  ಇನ್ನು ಕೆಲವೇ ತಿಂಗಳುಗಳಲ್ಲಿ ತಾಲ್ಲೂಕಿನ ಎಲ್ಲ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸಲಾಗುವುದು. ಅದರಿಂದ ರೈತರ ಬದುಕು ಹಸನಾಗುತ್ತದೆ. ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಎಸ್ಸಿ, ಎಸ್‌ಟಿ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಕ್ಷಾತೀತವಾಗಿ ಕೃಷಿ ಕೊಳವೆ ಬಾವಿಗಳನ್ನು ನಿರ್ಮಿಸಿಕೊಡಲಾಗುವುದು. ಹಾಗೆಯೇ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.  ತಾಲ್ಲೂಕಿನಲ್ಲಿ ಇನ್ನೂ 10 ವಸತಿ ಶಾಲೆಗಳನ್ನು ತೆರೆಯುವ ಉದ್ದೇಶ ಇದ್ದಿತು. ಅಷ್ಟರಲ್ಲಿ ಸರ್ಕಾರ ಬದಲಾಯಿತು. ಆ ಶಾಲೆಗಳನ್ನು ತೆರೆದಿದ್ದರೆ ಖಾಸಗಿ ಶಾಲೆಗಳ ಪಾರಮ್ಯ ಕುಸಿಯುತ್ತಿತ್ತು ಎಂದು ಹೇಳಿದರು.  ‘ನಾನು ಸ್ವಾಭಿಮಾನ ಹಾಗೂ ಮಾನವತ್ವದ ನೆಲೆಯಲ್ಲಿ ರಾಜಕೀಯ ಮಾಡುತ್ತೇನೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ಸಿಗಬೇಕು. ಪ್ರತಿಯೊಬ್ಬರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಮುಂದೆ ಬರಬೇಕು. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ. ಕ್ಷೇತ್ರದ ಯಾರೊಬ್ಬರಿಗೆ ಕಷ್ಟ ಎದುರಾದರೂ ಮನಸ್ಸು ಮಿಡಿಯುತ್ತದೆ‘ ಎಂದು ಹೇಳಿದರು.  ಡಿ.ಕೆ.ರವಿ ಅವರ ಪತ್ನಿ ಕುಸುಮ ಅವರು ಆರ್‌ಆರ್‌ ನಗರ ಕ್ಷೇತ್ರದಿಂದ ನಡೆದ ಮರು ಚುನಾವಣೆಯಲ್ಲಿ ಸೋತಿದ್ದು ದುರದೃಷ್ಟಕರ. ಕಾರಣಾಂತರದಿಂದ ಚಿಕ್ಕ ವಯಸ್ಸಿನಲ್ಲಿಯೇ ನೋವುಂಡ ಕುಸುಮ ಅವರ ಅಭ್ಯುದಯಕ್ಕಾಗಿ ಸಾಧ್ಯವಾದುದೆಲ್ಲವನ್ನೂ ಮಾಡಲಾಗುವುದು ಎಂದು ಹೇಳಿದರು.  ಈ ಸಂದರ್ಭದಲ್ಲಿ ಹೊಗಳಗೆರೆ ಹಾಗೂ ಗಾಂಧಿ ನಗರ ಗ್ರಾಮಗಳಿಗೆ ಸೇರಿದ 20 ಕುಟುಂಬಗಳು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದರು.  ರಾಯಲ್ಪಾಡ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ, ಮುಖಂಡರಾದ ಎಂ.ಎಸ್‌.ಮುನಿರಾಜು, ಹೊಗಳಗೆರೆ ಆಂಜಿ, ವೆಂಕಟರವಣ, ಯಮನೂರು ನಾಗರಾಜ್‌, ಷರೀಫ್,ಮಾಂಜಮ್ಮ ಕೊಂಡಾಮರಿ ಕೆ.ಆರ್‌.ರಾಮಮೋಹನ್‌ ಇದ್ದರು.